ಪುತ್ತೂರು: ಭೂತಾನ್ನಿಂದ ಅಡಿಕೆ ಆಮದು ಆಗುತ್ತಿರುವ ವಿಚಾರದ ಕುರಿತು ಕೇಂದ್ರ ಸಚಿವರಿಗೆ ಪತ್ರ ಬರೆಯುವಂತೆ ಮುಖ್ಯಮಂತ್ರಿಗಳಿಗೆ ನಾನು ಪತ್ರ ಮುಖೇನ ವಿನಂತಿಸಿಕೊಂಡಿದ್ದೆ. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಡಿಕೆ ಆಮದು ಸಂದರ್ಭದಲ್ಲಿ ಕನಿಷ್ಠ ಆಮದು ದರವನ್ನು ವಿಧಿಸಿ ಆಮದು ಮಾಡಿಕೊಳ್ಳುವಂತೆ ವಿನಂತಿಸಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪೀಯುಷ್ ಗೋಯೆಲ್ರಿಗೆ ಪತ್ರ ಬರೆದಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ನ.16ರಂದು ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಭೂತಾನ್ನಿಂದ ಕಡಿಮೆ ಬೆಲೆಯ ಅಡಿಕೆ ದೇಶದೊಳಕ್ಕೆ ಬರುತ್ತಿದೆ. ಆಮದು ನೀತಿ ಸಡಿಲಗೊಂಡಿರುವುದು ಇದಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಕನಿಷ್ಠ ಆಮದು ದರದಲ್ಲಿ ಆಮದು ಮಾಡಿಕೊಳ್ಳುವಂತೆ ಕೇಂದ್ರ ಸಚಿವರಿಗೆ ಪತ್ರ ಬರೆಯಬೇಕೆಂದು ಸಿಎಂ ಸಿದ್ದರಾಮಯ್ಯರಿಗೆ ಪತ್ರ ನೀಡಿದ್ದೆ. ನಮ್ಮ ಪತ್ರದ ಆಧಾರದ ಮೇಲೆ ಸಿಎಂ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವರಾದ ಪಿಯೂಷ್ ಗೋಯೆಲ್ ಅವರಿಗೆ ಪತ್ರ ಬರೆದಿದ್ದು, ಅಡಿಕೆ ಆಮದು ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕು. ಅಡಿಕೆ ಬೆಳೆಯನ್ನು ಉಳಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ ಎಂದು ಹೇಳಿದರು.
ಅಡಿಕೆಯ ವಿಚಾರ ಬಂದಾಗ ಎಲ್ಲರೂ ಪಕ್ಷಾತೀತವಾಗಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ. ಈ ಭಾಗದ ಎಲ್ಲಾ ರೈತರು ಅಡಿಕೆಯನ್ನು ಅವಲಂಬಿಸಿಕೊಂಡಿದ್ದಾರೆ. ಅಡಿಕೆಯ ಬೆಲೆ ಕುಸಿದರೆ ರೈತರಿಗೆ ಬಹಳಷ್ಟು ನಷ್ಟವಾಗುತ್ತದೆ. ಕೆಲವು ಮಧ್ಯವರ್ತಿಗಳು ಬಹಳ ಸುಲಭದಲ್ಲಿ ಪರವಾನಿಗೆ ಪಡೆದುಕೊಳ್ಳುತ್ತಾರೆ. ಕೇಂದ್ರದ ಕೆಲವು ಅಧಿಕಾರಿಗಳಿಗೆ ಈ ಸಮಸ್ಯೆಗಳ ಬಗ್ಗೆ ಅರಿವಿಲ್ಲದೆ ಸುಲಭದಲ್ಲಿ ಅಡಿಕೆ ಆಮದಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ನಾನು ಕೂಡ ಈ ಹಿಂದೆ ಕೇಂದ್ರ ಹಣಕಾಸು ಸಚಿವರು, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಿಗೆ ಪತ್ರ ಬರೆದಿದ್ದೇನೆ. ಈಗ ಸಿಎಂ ಅವರು ಪತ್ರ ಬರೆದಿರುವುದರಿಂದ ದೇಶದ ಗಮನ ಸೆಳೆಯುವ ಪ್ರಯತ್ನ ಆಗಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಅಡಿಕೆ ಆಮದು ತಡೆಗಟ್ಟಬಹುದು. ಇಲ್ಲದಿದ್ದರೆ ಅಡಿಕೆಯ ಧಾರಣೆ 250-300 ರೂ. ಮುಟ್ಟಲಿದೆ. ಅಡಿಕೆಯ ಕುರಿತಾದ ಹೋರಾಟವನ್ನು ಎಂದಿಗೂ ಬಿಟ್ಟುಕೊಡುವ ಪ್ರಶ್ನೆಯಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.