ಕೂರೇಲು ಶ್ರೀ ಮಲರಾಯ ದೈವಸ್ಥಾನದಲ್ಲಿ ನಾಗತಂಬಿಲ, ಹರಿಸೇವೆ, ಅನ್ನಸಂತರ್ಪಣೆ

0

ಪುತ್ತೂರು: ಆರ್ಯಾಪು ಗ್ರಾಮದ ಕೂರೇಲು ಮಣ್ಣಿನಲ್ಲಿ ನೆಲೆ ನಿಂತಿರುವ ಶ್ರೀ ಮಲರಾಯ ದೈವಸ್ಥಾನದ ಕಾರಣಿಕ ಶಕ್ತಿಗಳಾದ ಶ್ರೀ ಮಲರಾಯ, ಮಲರಾಯ ಬಂಟ ಮಹಿಶಾಂತಾಯ ಹಾಗೂ ಪರಿವಾರ ದೈವಗಳ 18ನೇ ವರ್ಷದ ನೇಮೋತ್ಸವದ ಪ್ರಯುಕ್ತ ನ.19ರಂದು ಬೆಳಿಗ್ಗೆ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಿತು. ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯ ತಂಡದವರಿಂದ ಬೆಳಿಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಗಣಹೋಮ, ನಾಗತಂಬಿಲ, ಹರಿಸೇವೆ, ಧರ್ಮದೈವಗಳ ಕಲಶಾಭಿಷೇಕ ನಡೆದು ದೈವಗಳಿಗೆ ತಂಬಿಲ ಸೇವೆ ನಡೆಯಿತು. ಭಕ್ತಾಧಿಗಳಿಗೆ ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಕೂರೇಲು ತರವಾಡು ಮನೆಯ ಕುಟುಂಬಸ್ಥರು, ಬಂಧು ಮಿತ್ರರು, ಭಕ್ತಾಧಿಗಳು ಸೇರಿದಂತೆ ನೂರಾರು ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು. ಕೂರೇಲು ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮುಖ್ಯಸ್ಥ ಕೆ.ಸಂಜೀವ ಪೂಜಾರಿ ಕೂರೇಲುರವರು ಭಕ್ತಾಧಿಗಳಿಗೆ ಪ್ರಸಾದ ನೀಡಿ ಸತ್ಕರಿಸಿದರು. ಸರಸ್ವತಿ ಸಂಜೀವ ಪೂಜಾರಿ, ಕೂರೇಲು ಹರ್ಷಿತ್ ಕುಮಾರ್ ಉಪಸ್ಥಿತರಿದ್ದರು.

ಇಂದು ಸಂಜೆಯಿಂದ ದೈವಗಳ ನೇಮೋತ್ಸವ ಸಂಭ್ರಮ
ನ.19ರಂದು ಸಂಜೆ ಗಂಟೆ 6.00ಕ್ಕೆ ದೈವಗಳ ಭಂಡಾರ ಇಳಿಯುವುದು, ರಾತ್ರಿ ಗಂಟೆ 8.30ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 9.೦೦ ರಿಂದ ಕಳಲ್ತಾ ಗುಳಿಗ ನೇಮೋತ್ಸವ (ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ಪ್ರಾರ್ಥನೆ-ಬಡಿಸುವುದು) ಬಳಿಕ ಶ್ರೀ ಮಲರಾಯ ಮತ್ತು ಶ್ರೀ ಮಲರಾಯ ಬಂಟ ಮಹಿಶಾಂತಾಯ ದೈವಗಳ ನೇಮೋತ್ಸವ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಲಿದೆ.


ನ.20ರಂದು ಬೆಳಿಗ್ಗೆ ಗಂಟೆ 6.೦೦ ರಿಂದ ಕೊರಗಜ್ಜ ದೈವದ ನೇಮ ನಡೆಯಲಿದೆ. ಸಂಜೆ ಗಂಟೆ 5.೦೦ ರಿಂದ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಮತ್ತು ಕೊರತಿ ದೈವಗಳ ನೇಮೋತ್ಸವ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವಗಳ ಗಂಧಪ್ರಸಾದದೊಂದಿಗೆ ಅನ್ನಪ್ರಸಾದ ಸ್ವೀಕರಿಸುವಂತೆ ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಮತ್ತು ಕುಟುಂಬಸ್ಥರ ಪ್ರಕಟಣೆ ತಿಳಿಸಿದೆ.


ಇಂದು ರಾತ್ರಿ ಕೂರೇಲು ಧರ್ಮದೈವ ಮಲರಾಯ ಭಕ್ತಿ ಸುಗಿಪು ಬಿಡುಗಡೆ
ದೈವಸ್ಥಾನದ ಧರ್ಮದರ್ಶಿಗಳಾದ ಕೆ.ಸಂಜೀವ ಪೂಜಾರಿ ಕೂರೇಲುರವರ ಶುಭಾಶೀರ್ವಾದದೊಂದಿಗೆ ಸಚಿನ್ ಸುವರ್ಣ ನಿರ್ಮಾಣದಲ್ಲಿ ಮೂಡಿಬಂದಿರುವ ‘ಕೂರೇಲು ಧರ್ಮದೈವ ಮಲರಾಯ’ ಎನ್ನುವ ತುಳು ಭಕ್ತಿ ಸುಗಿಪು ನ.19ರಂದು ರಾತ್ರಿ ಬಿಡುಗಡೆಗೊಳ್ಳಲಿದೆ.ಪದ್ಮರಾಜ್ ಬಿ.ಸಿ ಚಾರ್ವಾಕರವರ ಸಾಹಿತ್ಯ,ಸಂಗೀತ ನಿರ್ದೇಶನದಲ್ಲಿ ಅಭಿಜ್ಞಾ ಭಟ್ ನಾಟಿಕೇರಿಯವರ ಗಾಯನದಲ್ಲಿ ಈ ಹಾಡು ಮಿಥುನ್‌ರಾಜ್ ವಿದ್ಯಾಪುರರವರ ಶ್ರೀರಾಜ್ ಮ್ಯೂಸಿಕ್ ವಲ್ಡ್‌ನ ಶ್ರೀರಾಜ್ ಕ್ರೀಯೇಷನ್ಸ್ ಯೂಟ್ಯೂಬ್‌ನಲ್ಲಿ ಬಿಡುಗಡೆಗೊಳ್ಳಲಿದೆ.

LEAVE A REPLY

Please enter your comment!
Please enter your name here