ಯಕ್ಷಗಾನ ಎಂದಿಗೂ ನಶಿಸಲು ಸಾಧ್ಯವಿಲ್ಲ : ಕಮಲಾದೇವಿ ಪ್ರಸಾದ್ ಅಸ್ರಣ್ಣ
ನೆಲ್ಯಾಡಿ: ಶಬರೀಶ ಯಕ್ಷಗಾನ ಕಲಾಕೇಂದ್ರ ನೆಲ್ಯಾಡಿ ಇದರ 7ನೇ ವಾರ್ಷಿಕೋತ್ಸವದ ಅಂಗವಾಗಿ ಯಕ್ಷಗುರು ಪ್ರಶಾಂತ್ ಶೆಟ್ಟಿಯವರ ಶಿಷ್ಯವೃಂದದವರಿಂದ ಮದನಾಕ್ಷಿ ತಾರಾವಳಿ, ವೀರಮಣಿ ಕಾಳಗ ಮತ್ತು ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಚೂಡಾಮಣಿ ಮತ್ತು ಅಗ್ರಪೂಜೆ ಯಕ್ಷಗಾನ ನ.17ರಂದು ಸಂಜೆ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಸಂಜೆ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ರಂಗಪೂಜೆ ನಡೆಯಿತು. ರಾತ್ರಿ ನಡೆದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದ ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕರಾದ ಕಮಲಾದೇವಿ ಪ್ರಸಾದ್ ಅಸ್ರಣ್ಣರು, ಪ್ರಬುದ್ಧವಾದ ಶಬ್ದ ಬಳಸಿದಲ್ಲಿ ಯಕ್ಷಗಾನ ಶ್ರೇಷ್ಠವಾಗಲಿದೆ. ಹಿಂದೆ ಯಕ್ಷಗಾನ ಪುರುಷರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಮಹಿಳೆಯರೂ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ. ಮಹಿಳೆ ಕಲಾವಿದೆಯಾಗಿಯೂ, ಕಲಾಪೋಷಕಿಯೂ ಆಗಿದ್ದಾಳೆ. ಆದ್ದರಿಂದ ಯಕ್ಷಗಾನ ಎಂದಿಗೂ ನಶಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಭರತನಾಟ್ಯ, ಕಥಕ್ಕಳಿ, ನಾಟಕ ಸಮಯಕ್ಕೆ ಸೀಮಿತವಾಗಿ ನಡೆಯುತ್ತದೆ. ಆದರೆ ಯಕ್ಷಗಾನ ರಾತ್ರಿಯಿಂದ ಮುಂಜಾನೆ ತನಕ ನಡೆದರೂ ಅಸ್ವಾದಿಸುತ್ತೇವೆ. ಯಕ್ಷಗಾನ ಅತಿ ದೊಡ್ಡ ಕಲೆಯಾಗಿದೆ. ಇಂತಹ ಕಲೆಯನ್ನು ಬೆಳೆಸುವುದೇ ದೊಡ್ಡ ಸಾಧನೆ. ಯಕ್ಷಗಾನ ಆಟವೂ ಹೌದು. ಪಾಠವೂ ಹೌದು ಎಂದು ಹೇಳಿದರು.
ಅತಿಥಿಯಾಗಿದ್ದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ ಅವರು ಮಾತನಾಡಿ, ಕಲೆಯನ್ನು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಯಕ್ಷಗಾನ ಕಲಿಯುವವರಿಗೆ ಪ್ರೋತ್ಸಾಹ ನೀಡಬೇಕು. ಯಕ್ಷಗುರು ಪ್ರಶಾಂತ ಶೆಟ್ಟಿಯವರು ಮಕ್ಕಳಿಗೆ ಯಕ್ಷಗಾನ ಕಲಿಸುತ್ತಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು. ಇನ್ನೋರ್ವ ಅತಿಥಿ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸದಾನಂದ ಕುಂದರ್ ಅವರು ಮಾತನಾಡಿ, ಮಹಾಭಾರತ, ರಾಮಾಯಣ ಹಾಗೂ ಪುರಾಣ ಕಥೆಗಳನ್ನು ಮಕ್ಕಳಿಗೆ ಯಕ್ಷಗಾನದ ಮೂಲಕ ಸುಲಭವಾಗಿ ತಿಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು. ಕಡಬ ಉಪತಹಶೀಲ್ದಾರ್, ಕಲಾಪೋಷಕರೂ ಆದ ಗೋಪಾಲ ಕೆ. ಮಾತನಾಡಿ, ಯಕ್ಷಗಾನ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವ ಕಲೆಯಾಗಿದೆ. ಎಲ್ಲಾ ವರ್ಗದ ಜನರೂ ಯಕ್ಷಗಾನವನ್ನು ಅಸ್ವಾದಿಸುತ್ತಾರೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಬರೀಶ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್ ಅವರು ಮಾತನಾಡಿ, ಯಕ್ಷಗುರು ಪ್ರಶಾಂತ್ ಶೆಟ್ಟಿಯವರಿಂದ ತರಬೇತಿ ಪಡೆದುಕೊಂಡು ಮಕ್ಕಳು ಇಲ್ಲಿ ಅದ್ಬುತ ರೀತಿಯಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಶಬರೀಶ ಯಕ್ಷಗಾನ ಕಲಾಕೇಂದ್ರದ ಮೂಲಕ ಮಕ್ಕಳಿಗೆ ಓದಿನ ಜೊತೆಗೆ ದೇವರ ಮಹಿಮೆಯನ್ನೂ ತಿಳಿಯುವ ಶಕ್ತಿ ನೀಡಿದ್ದೇವೆ ಎಂದರು.
ಕಡಬ ಶ್ರೀದೇವಿ ಗೋಲ್ಡ್ ಪ್ಯಾಲೇಸ್ ಮಾಲಕ, ಕಲಾಪೋಷಕ ದಿನೇಶ್ ಆಚಾರ್ಯ, ಕಡಬ ಶ್ರೀದೇವಿ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷರೂ, ಕಲಾ ಪೋಷಕರೂ ಆದ ಪಿ.ಕೆ.ಕಿಶನ್ ಕುಮಾರ್ ರೈ, ಯಕ್ಷಗುರು ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಶಬರೀಶ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಶ್ರೀಧರ ನೂಜಿನ್ನಾಯ, ಕೋಶಾಧಿಕಾರಿ ಗಣೇಶ ಕೆ.,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲಾಪೋಷಕ ಹರಿಪ್ರಸಾದ್ ಸ್ವಾಗತಿಸಿದರು. ಯಕ್ಷಬೊಳ್ಳಿ ದಿನೇಶ್ ರೈ ಕಡಬ ನಿರೂಪಿಸಿದರು.
ಸನ್ಮಾನ:
ಕಟೀಲು ಮೇಳದ ಭಾಗವತರಾದ ಮೋಹನ ಗೌಡ ಶಿಶಿಲ, ದೇವರಾಜ ಆಚಾರ್ಯ ಐಕಳ, ಮದ್ದಳೆಗಾರರಾದ ವಿಶ್ವನಾಥ ಶೆಣೈ ಪಳ್ಳಿ ಹಾಗೂ ರಂಗ ಸಹಾಯಕ ಕೇಶವ ನಾಯಕ್ ಅವರನ್ನು ಶಬರೀಶ ಯಕ್ಷಗಾನ ಕಲಾಕೇಂದ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಯಕ್ಷಗಾನ ಪ್ರದರ್ಶನ:
ಶಬರೀಶ ಯಕ್ಷಗಾನ ಕಲಾಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ಯಕ್ಷಗುರು ಪ್ರಶಾಂತ್ ಶೆಟ್ಟಿಯವರ ಶಬರೀಶ ಕಲಾಕೇಂದ್ರದ ಶಿಷ್ಯವೃಂದದವರಿಂದ ’ ಮದನಾಕ್ಷಿ ತಾರಾವಳಿ, ವೀರಮಣಿ ಕಾಳಗ ’ ಹಾಗೂ ಜಿಲ್ಲೆಯ ಸುಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಿಂದ ’ ಚೂಡಾಮಣಿ ಮತ್ತು ಅಗ್ರಪೂಜೆ ’ ಯಕ್ಷಗಾನ ನಡೆಯಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.