ಅರಿಯಡ್ಕ- 48.21%, ಕೆದಂಬಾಡಿ-75.93%, ಕುಟ್ರುಪಾಡಿ 63.44%
ನ.26ರಂದು ಫಲಿತಾಂಶ
ಉಪ ಚುನಾವಣೆಯ ಮತ ಎಣಿಕೆ ಕಾರ್ಯಗಳು ನ.26ರಂದು ಆಯ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.ಮತ ಎಣಿಕೆ ಕಾರ್ಯಗಳು ಬೆಳಿಗ್ಗೆ 8 ಗಂಟೆಗೆ ಪ್ರಾರಂಭಗೊಳ್ಳಲಿದ್ದು 11 ಗಂಟೆಯ ವೇಳೆಗೆ ಫಲಿತಾಂಶ ಘೋಷಣೆಯಾಗಲಿದೆ.
ಪುತ್ತೂರು: ಪುತ್ತೂರು ತಾಲೂಕಿನ ಅರಿಯಡ್ಕ, ಕೆದಂಬಾಡಿ ಹಾಗೂ ಕಡಬದ ಕುಟ್ರುಪ್ಪಾಡಿ ಗ್ರಾ.ಪಂ.ನಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ತಲಾ ಒಂದು ಸ್ಥಾನಗಳಿಗೆ ಸದಸ್ಯರ ಆಯ್ಕೆಗಾಗಿ ನ.23ರಂದು ನಡೆದ ಉಪಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಗಳು ಶಾಂತಿಯುತವಾಗಿ ಮುಕ್ತಾಯಗೊಂಡಿದೆ.ಅರಿಯಡ್ಕ ಶೇ.48.21, ಕೆದಂಬಾಡಿ ಶೇ.78.93 ಹಾಗೂ ಕುಟ್ರುಪ್ಪಾಡಿಯಲ್ಲಿ ಶೇ.63.44 ಮತ ಚಲಾವಣೆಯಾಗಿದೆ.ಮತದಾನ ಪ್ರಕ್ರಿಯೆ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆ ತನಕ ನಡೆಯಿತು.ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಅರಿಯಡ್ಕ ಗ್ರಾ.ಪಂ.ನ ಮಾಡ್ನೂರು 2ನೇ ವಾರ್ಡ್ನಲ್ಲಿ ಒಟ್ಟು 1537 ಮತದಾರರನ್ನು ಹೊಂದಿದ್ದು ಎರಡು ಮತಗಟ್ಟೆಗಳಾಗಿ ವಿಂಗಡಿಸಲಾಗಿತ್ತು.ಮತಗಟ್ಟೆ ಸಂಖ್ಯೆ 92ರ ಕಾವು ಸಮುದಾಯ ಭವನ ಮತಗಟ್ಟೆಯಲ್ಲಿ 813 ಮತದಾರರ ಪೈಕಿ 192 ಪುರುಷರು, 213 ಮಹಿಳೆಯರು ಸೇರಿದಂತೆ ಒಟ್ಟು 405 ಮಂದಿ ಮತ ಚಲಾಯಿಸಿದ್ದು ಶೇ.49.82 ಮತ ಚಲಾವಣೆಯಾಗಿದೆ. ಮತಗಟ್ಟೆ ಸಂಖ್ಯೆ 92ರ ಮಾಡನ್ನೂರು ಹಿ.ಪ್ರಾ.ಶಾಲಾ ಮತಗಟ್ಟೆಯಲ್ಲಿ ಒಟ್ಟು 726 ಮಂದಿ ಮತದಾರರಲ್ಲಿ 158 ಪುರುಷರು, 179 ಮಹಿಳೆಯರು ಸೇರಿದಂತೆ ಒಟ್ಟು 337 ಮಂದಿ ಮತ ಚಲಾಯಿಸಿದ್ದು ಶೇ.46.42 ಮತ ಚಲಾವಣೆಯಾಗಿದೆ.ಕೆದಂಬಾಡಿ ವಾರ್ಡ್ನ 4ರಲ್ಲಿ 802 ಮತದಾರರಲ್ಲಿ 297 ಪುರುಷರು ಹಗೂ 336 ಮಹಿಳೆಯರು ಸೇರಿದಂತೆ ಒಟ್ಟು 633 ಮಂದಿ ಮತ ಚಲಾಯಿಸಿದ್ದು ಶೇ.78.93 ಮತ ಚಲಾವಣೆಯಾಗಿದೆ.
ಕುಟ್ರುಪ್ಪಾಡಿ ಗ್ರಾ.ಪಂ.ನ 3ನೇ ವಾರ್ಡ್ನ ಉಪಚುನಾವಣೆಯಲ್ಲಿ ಒಟ್ಟು 829 ಮತದಾರರ ಪೈಕಿ 263 ಪುರುಷರು ಮತ್ತು 263 ಮಹಿಳೆಯರು ಮತಚಲಾವಣೆ ಮಾಡಿ ಸಮಾನತೆ ಮೆರೆದಿದ್ದಾರೆ.ಕುಟ್ರುಪ್ಪಾಡಿ ಶಾಲೆಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು.
ಅರಿಯಡ್ಕ ಗ್ರಾ.ಪಂನ ಮಾಡ್ನೂರು 2ನೇ ವಾರ್ಡ್ನ ಪ.ಜಾತಿಗೆ ಮೀಸಲು ಸ್ಥಾನದ ಕಾಂಗ್ರೆಸ್ ಬೆಂಬಲಿತ ಸದಸ್ಯ ಶಂಕರ ಮಾಡಂದೂರು ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಹರೀಶ್ ಎ.ಕೆ ಮಾಡ್ನೂರು ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ವಿನಯ ಕುಮಾರ್ ಕಣದಲ್ಲಿದ್ದು ಇಲ್ಲಿ ನೇರ ಸ್ಪರ್ಧೆ ಏರ್ಪಟ್ಟದೆ.
ಕೆದಂಬಾಡಿ ಗ್ರಾ.ಪಂನ ವಾರ್ಡ್-4ರಲ್ಲಿ ಸಾಮಾನ್ಯ ಮೀಸಲು ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಭಾಸ್ಕರ ರೈ ಮಿತ್ರಂಪಾಡಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಟಿ.ಮೋಹನ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮೆಲ್ವಿನ್ ಮೊಂತೆರೋ ಹಾಗೂ ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ರಫೀಕ್ ನಂಜೆ ಕಣದಲ್ಲಿದ್ದು ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾ.ಪಂನ 3ನೇ ವಾರ್ಡ್ನ ಸಾಮಾನ್ಯ ಮಹಿಳಾ ಮೀಸಲು ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಸ್ವಪ್ನಾರವರ ರಾಜೀನಾಮೆಯಿಂದ ತೆರವಾದ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಎಲಿಯಮ್ಮ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ವಲ್ಸಮ್ಮ ಎ.ಜೆ ಕಣದಲ್ಲಿದ್ದು ನೇರ ಸ್ಪರ್ಧೆ ನಡೆದಿದೆ.ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಬೂತ್ಗಳಲ್ಲಿ ಪ್ರಮುಖ ಮುಖಂಡರುಗಳು ಹಾಜರಿದ್ದು ಕೊನೆಯ ಕ್ಷಣದಲ್ಲಿ ಮತದಾರರನ್ನು ಓಲೈಕೆ ನಡೆಸುತ್ತಿರುವುದು ಕಂಡು ಬಂತು.ಕಾಂಗ್ರೆಸ್ ಬೂತ್ನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಽರ್ ಕುಮಾರ್ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ಬಾಲಕೃಷ್ಣ ಬಳ್ಳೇರಿ ಸೇರಿದಂತೆ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು. ಬಿಜೆಪಿ ಬೂತ್ಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೃಷ್ಣ ಶೆಟ್ಟಿ ಕಡಬ, ರಾಕೇಶ್ ರೈ ಕೆಡೆಂಜಿ, ಹರೀಶ್ ಕಂಜಿಪಿಲಿ,ಪುಲಸ್ತ್ಯಾ ರೈ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಮತದಾನ ಪ್ರಕ್ರಿಯೆಗಳು ಬೆಳಿಗ್ಗೆ 7ರಿಂದ ಪ್ರಾರಂಭಗೊಂಡು ಸಂಜೆ 5 ಗಂಟೆಯ ತನಕ ನಡೆಯಿತು. ಸಾರ್ವತ್ರಿಕ ಚುನಾವಣೆಯಂತೆ ವಿವಿಧ ಪಕ್ಷಗಳ ಮುಖಂಡರುಗಳು ಕೊನೆಯ ಕ್ಷಣದಲ್ಲಿ ಮತದಾರರನ್ನು ಓಲೈಸುತ್ತಿರುವುದು ಕಂಡು ಬಂತು. ಮತದಾರರನ್ನು ವಾಹನಗಳಲ್ಲಿ ಕರೆದುಕೊಂಡು ಬರುತ್ತಿರುವುದು ಸಾಮಾನ್ಯವಾಗಿತ್ತು.ಪಕ್ಷಗಳ ಮುಖಂಡರು ತಮ್ಮ ತಮ್ಮ ಬೂತ್ಗಳಿಗೆ ಭೇಟಿ ನೀಡಿ ಮತದಾನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಮತದಾನ ಪ್ರಕ್ರಿಯೆ ಮುಗಿದ ಬಳಿಕ ತಾಲೂಕು ಆಡಳಿತ ಸೌಧದಲ್ಲಿ ಡಿ-ಮಸ್ಟರಿಂಗ್ ಕಾರ್ಯಗಳು ನಡೆದು ಮತ ಪೆಟ್ಟಿಗೆಗಳನ್ನು ಭದ್ರತಾ ಕೊಠಡಿಯಲ್ಲಿಡಲಾಗಿದೆ.