ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಪೇಟೆಯಲ್ಲಿ ನ.25ರಂದು ಮಧ್ಯಾಹ್ನ ಕೆಎಸ್ಆರ್ಟಿಸಿ ಬಸ್ಸು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಪಾದಚಾರಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಶಿರಾಡಿ ಗ್ರಾಮದ ಪದಂಬಳ ನಿವಾಸಿ ಕೃಷಿಕ ಕೆ.ಎಂ.ಮತ್ತಾಯಿ ಯಾನೆ ಮತ್ತಚ್ಚನ್ (70ವ.)ಗಾಯಗೊಂಡವರಾಗಿದ್ದಾರೆ. ಇವರು ಮನೆಯಿಂದ ಶಿರಾಡಿ ಪೇಟೆಗೆ ಪಡಿತರ ಪಡೆಯಲು ಬಂದವರು ಶಿರಾಡಿಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಧರ್ಮಸ್ಥಳದಿಂದ-ಬೆಂಗಳೂರು ಕಡೆಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಸು ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡಿರುವ ಮತ್ತಾಯಿ ಅವರನ್ನು 108 ಆಂಬುಲೆನ್ಸ್ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತ ಕೆ.ಎಂ.ಮತ್ತಾಯಿ ಅವರು ಕೃಷಿ, ಹೈನುಗಾರಿಕೆ ಮಾಡಿ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ ಮರಿಯಕುಟ್ಟಿ, ಪುತ್ರರಾದ ರೆಜಿ, ರಾಜು ಅವರನ್ನು ಅಗಲಿದ್ದಾರೆ.
2ನೇ ಅಪಘಾತ:
ಕೆ.ಎಂ.ಮತ್ತಾಯಿ ಅವರ ಹಿರಿಯ ಪುತ್ರ ರೆಜಿ ಅವರು 2 ತಿಂಗಳ ಹಿಂದೆ ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಉದನೆ ಸಮೀಪದ ನೇಲಡ್ಕದಲ್ಲಿ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದರು. ಈ ಅಪಘಾತದಿಂದ ನಡೆದಾಡಲು ಸಾಧ್ಯವಾಗದೆ ರೆಜಿ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೀಗ ಮತ್ತಾಯಿ ಅವರು ಬಸ್ ಅಪಘಾತದಲ್ಲಿ ಮೃತಪಟ್ಟಿದ್ದು ಇವರ ಕುಟುಂಬಕ್ಕೆ ಮತ್ತೆ ಅಘಾತವಾಗಿದೆ.
ಅಪಘಾತ ತಾಣವಾಗುತ್ತಿದೆ ಶಿರಾಡಿ:
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿರುವುದರಿಂದ ಶಿರಾಡಿ ಪೇಟೆಯಲ್ಲಿ ಪದೇ ಪದೇ ಅಪಘಾತ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಶಿರಾಡಿ ಪೇಟೆ ಸುತ್ತಲಿನ 5 ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್, 2 ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ, ಗ್ರಾಮ ಗ್ರಂಥಾಲಯ, ಅಂಗನವಾಡಿಗಳು, ಹಿರಿಯ ಪ್ರಾಥಮಿಕ ಶಾಲೆ, ಮೂರು ಧರ್ಮಕ್ಕೆ ಸೇರಿದಂತೆ 4 ಚರ್ಚ್ಗಳು, 1 ದೇವಸ್ಥಾನ, ಹಲವು ಅಂಗಡಿ ಮುಂಗಟ್ಟುಗಳು ಶಿರಾಡಿ ಪೇಟೆಯಲ್ಲಿವೆ. ದಿನದಲ್ಲಿ ನೂರಾರು ಜನ ಇಲ್ಲಿಗೆ ಬಂದು ಹೋಗುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ಶಿರಾಡಿ ಪೇಟೆಯಲ್ಲಿ ಸರ್ವೀಸ್ ರಸ್ತೆ ಮಾಡಿಲ್ಲ. ಚತುಷ್ಪಥ ರಸ್ತೆ ಆಗಿರುವುದರಿಂದ ವೇಗವಾಗಿ ಬರುವ ವಾಹನಗಳಿಂದಾಗಿ ಇಲ್ಲಿ ಪದೇ ಪದೇ ಅಪಘಾತ ನಡೆಯುತ್ತಿದೆ. ಅಲ್ಲದೇ ಶಿರಾಡಿ ಪೇಟೆಯಲ್ಲಿ ’ಯು-ಟರ್ನ್’ ಹೆದ್ದಾರಿ ತಿರುವಿನಲ್ಲಿ ಕೊಟ್ಟಿರುವುದೂ ಅಪಘಾತಕ್ಕೆ ಕಾರಣವಾಗುತ್ತಿದೆ. ಕೆಎಸ್ಆರ್ಟಿಸಿಯವರ ಅತೀ ವೇಗಕ್ಕೆ ನಿಯಂತ್ರಣ ಹಾಕದಿದ್ದರೆ ಇಲ್ಲಿ ಅಪಘಾತಗಳು ದಿನಂಪ್ರತಿ ನಡೆಯುವ ಸಾಧ್ಯತೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಿರಾಡಿ ಗ್ರಾ.ಪಂ.ಸದಸ್ಯ ಸಣ್ಣಿ ಜೋನ್ ಒತ್ತಾಯಿಸಿದ್ದಾರೆ.