ಪುತ್ತೂರು: ಎಂಡೋಸಲ್ಫಾನ್ ಕೀಟನಾಶಕವನ್ನು ಅವೈಜ್ಞಾನಿಕವಾಗಿ ಮಣ್ಣಿನಡಿ ಹಾಕಲಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಕೇರಳ ಪ್ಲಾಂಟೇಶನ್ ಕಾರ್ಪೊರೇಷನ್ ವ್ಯಾಪ್ತಿಯ ಮಿಂಚಿಪದವು ಗೇರುಬೀಜ ತೋಟದಿಂದ ಸಂಗ್ರಹಿಸಿದ ಮಣ್ಣು ಹಾಗೂ ನೀರಿನಲ್ಲಿ ಎಂಡೋಸಲ್ಫಾನ್ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದೆ. ಬೆಂಗಳೂರಿನಲ್ಲಿರುವ ಲ್ಯಾಬ್ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು ವರದಿಯನ್ನು ರಾಷ್ಟ್ರೀಯ ಹಸಿರು ಪೀಠಕ್ಕೆ ಸಲ್ಲಿಸಿದೆ.
ಡಾ|ರವೀಂದ್ರನಾಥ ಶ್ಯಾನುಭಾಗ್ರವರಿಂದ ದೂರು:
ಕೇರಳ ರಾಜ್ಯದ ಗಡಿ ಪ್ರದೇಶವಾದ ಕೇರಳ ಪ್ಲಾಂಟೇಶನ್ ಕಾರ್ಪೊರೇಷನ್ ವ್ಯಾಪ್ತಿಯ ಮಿಂಚಿಪದವು ಗುಡ್ಡ ಪ್ರದೇಶದಲ್ಲಿ ಎಂಡೋಸಲ್ಫಾನ್ ಕೀಟನಾಶಕವನ್ನು ಅವೈಜ್ಞಾನಿಕವಾಗಿ ಹೂಳಲಾಗಿದೆ. ಅದು ಕೇರಳ-ಕರ್ನಾಟಕ ಗಡಿ ಪ್ರದೇಶಗಳಲ್ಲಿರುವವರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಎಂಡೋಸಲ್ಫಾನ್ ಸಮಸ್ಯೆಗಳನ್ನು ಅಧ್ಯಯನ ನಡೆಸಿದ್ದ ಉಡುಪಿ ಮಾನವ ಹಕ್ಕು ಸಂರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ|ರವೀಂದ್ರನಾಥ ಶ್ಯಾನುಭಾಗ್ ಅವರು ಈ ಬಗ್ಗೆ ರಾಷ್ಟ್ರೀಯ ಹಸಿರು ಪೀಠಕ್ಕೆ ದೂರು ನೀಡಿದ್ದರು. ಈ ದೂರಿನಂತೆ, ಎಂಡೋಸಲ್ಫಾನ್ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ 4 ವಾರಗಳಲ್ಲಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದ ರಾಷ್ಟ್ರೀಯ ಹಸಿರು ಪೀಠ ಈ ಕುರಿತು ಕರ್ನಾಟಕ ಮತ್ತು ಕೇರಳ ಸರ್ಕಾರ ಹಾಗೂ ಪರಿಸರ ಇಲಾಖೆಗಳಿಗೆ ನೋಟೀಸ್ ಜಾರಿ ಮಾಡಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಇದರ ದಕ್ಷಿಣ ವಲಯ ನಿರ್ದೇಶಕ ಡಾ.ಜಿ. ಚಂದ್ರಬಾಬುರವರ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಮಣ್ಣು, ನೀರನ್ನು ಸ್ಯಾಂಪಲ್ ಸಂಗ್ರಹಿಸಿತ್ತು.
ಬಾವಿ ಪರಿಶೀಲನೆ, ಮಣ್ಣು, ನೀರಿನ ಸ್ಯಾಂಪಲ್ ಸಂಗ್ರಹ:
ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡ ಅಧಿಕಾರಿಗಳ ತಂಡ ಮಿಂಚಿಪದವುಗೆ ಭೇಟಿ ನೀಡಿತ್ತು. ಕೇರಳ ಪ್ಲಾಂಟೇಶನ್ ಕಾರ್ಪೊರೇಶನ್ ಕಛೇರಿಗೆ ತೆರಳಿ ಮಾಹಿತಿ ಪಡೆದು ಬಳಿಕ ಕಚೇರಿ ಪರಿಸರದ ಬಾವಿ, ಅಲ್ಲಿನ ಗೋದಾಮಿನಲ್ಲಿದ್ದ ಎಂಡೋಸಲ್ಪಾನ್ ಡಬ್ಬಗಳಿಂದ ಮಾದರಿ ಸಂಗ್ರಹ, ಇಲ್ಲಿಂದ ಒಂದುವರೆ ಕಿ.ಮೀ. ದೂರದ ಎಂಡೋಸಲ್ಪಾನ್ ಹಾಕಲಾಗಿದೆ ಎನ್ನುವ ಬಾವಿಯ ಪರಿಶೀಲನೆ ನಡೆಸಿ ಬಾವಿಯಿಂದ ನೀರಿನ ಸ್ಯಾಂಪಲ್, ಮೇಲ್ಪದರದ ಒಂದು ಅಡಿ ಆಳದಿಂದ ಮಣ್ಣನ್ನು ಸಂಗ್ರಹಿಸಿತ್ತು. ಅಲ್ಲದೆ ಈಶ್ವರಮಂಗಲದ ನೆಟ್ಟಣಿಗೆ ಮುಡ್ನೂರು ಪಂಚಾಯತ್ ಕಚೇರಿ ಸಮೀಪದ ಬಾವಿ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು ಹಾಗೂ ಮಣ್ಣನ್ನು ಕೂಡ ಪರಿಶೀಲಿಸಲಾಗಿತ್ತು. ಆದರೆ ಇದೀಗ ಪರೀಕ್ಷೆಯಲ್ಲಿ ಎಂಡೋಸಲ್ಫಾನ್ ಅಂಶ ಪತ್ತೆಯಾಗಿಲ್ಲ ಎಂದು ವರದಿ ಬಂದಿದೆ.
ಮೇಲ್ಮೈ ಮಣ್ಣು ಸಂಗ್ರಹಕ್ಕೆ ಆಕ್ಷೇಪ ಬಂದಿತ್ತು:
ಎಂಡೋಸಲ್ಫಾನ್ ಹೂತು ಹಾಕಿದೆ ಎನ್ನಲಾದ ಬಾವಿಯ ಮೇಲ್ಮೈಯ ಮಣ್ಣನ್ನು ಪರೀಕ್ಷೆಗೆಂದು ಸಂಗ್ರಹಿಸುತ್ತಿದ್ದ ವೇಳೆಯಲ್ಲಿ ಅಲ್ಲಿದ್ದ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಪರೀಕ್ಷೆಗೆ ಮೇಲ್ಮೈ ಮಣ್ಣನ್ನು ತೆಗೆಯದೆ ಸುಮಾರು 60 ಅಡಿ ಬಾವಿಯ ಮಣ್ಣನ್ನು ತೆಗೆಯಬೇಕೆಂದು ಆ ಸಂದರ್ಭದಲ್ಲಿ ಆಗ್ರಹಿಸಿದ್ದರು. ಯಂತ್ರದ ಮೂಲಕ ಮಣ್ಣನ್ನು ತೆಗೆದು ನಂತರ ಮಣ್ಣನ್ನು ಪರೀಕ್ಷೆಗೆ ಒಳಪಡಿಸುವಂತೆ ಅಲ್ಲಿದ್ದ ಸಾರ್ವಜನಿಕರು ಒತ್ತಾಯಿಸಿದ್ದರು. ಆದರೆ ಅಧಿಕಾರಿಗಳು ಇದಕ್ಕೊಪ್ಪದೆ ಮೇಲ್ಮೈ ಮಣ್ಣನ್ನು ಸಂಗ್ರಹಿಸಿ ಪ್ಲಾಸ್ಟಿಕ್ ಡಬ್ಬಕ್ಕೆ ಹಾಕಿದ್ದರು.
ಮೇಲಿನ ಮಣ್ಣು ಮಾತ್ರ ಸಂಗ್ರಹ
ಎಂಡೋಸಲ್ಫಾನ್ ಅಂಶ ಪರೀಕ್ಷೆಗೆ ಮೇಲಿನ ಮಣ್ಣನ್ನು ಮಾತ್ರ ಸಂಗ್ರಹಿಸಿದ್ದಾರೆ. ಇದರಲ್ಲಿ ಎಂಡೋ ಪತ್ತೆಯಾಗಲು ಸಾಧ್ಯವಿಲ್ಲ. ಬಾವಿಯೊಳಗೆ ಎಂಡೋಸಲ್ಫಾನ್ ಹೂತು ಹಾಕಿ ಮಣ್ಣು ಮುಚ್ಚಿದ್ದಾರೆ. 13 ವರ್ಷದ ಬಳಿಕ ಎಂಡೋ ಮಣ್ಣಿನಲ್ಲಿ ಕರಗಿ ಹೋಗಿರಬಹುದು.
12,000 ಮಕ್ಕಳು ವಿಶೇಷ ಚೇತನರು
ಎಂಡೋಸಲ್ಪಾನ್ನ ವಿಷಕಾರಕ ಗುಣಗಳಿಂದಾಗಿ ಕೇರಳ ಮತ್ತು ಕರ್ನಾಟಕ ರಾಜ್ಯದ ಸುಮಾರು 12 ಸಾವಿರಕ್ಕೂ ಅಧಿಕ ಮಕ್ಕಳು ವಿಶೇಷ ಚೇತನರಾಗಿದ್ದರು ಎಂದು ವರದಿ ಬಂದಿತ್ತು. ಹೀಗಾಗಿ 2011ರ ಮೇ13ರಂದು ಭಾರತದಲ್ಲಿ ಎಂಡೋಸಲ್ಪಾನ್ ಮಾರಾಟ ಮತ್ತು ಉಪಯೋಗ ನಿಷೇಧಿಸಲ್ಪಟ್ಟಿತ್ತು. ಆ ಬಳಿಕ 2013ರಲ್ಲಿ ಉಳಿದಿದ್ದ ಎಂಡೋಸಲ್ಪಾನ್ನನ್ನು ಮಿಂಚಿಪದವು ಗುಡ್ಡದ ಗೇರು ತೋಪಿನ ಬಾವಿಯಲ್ಲಿ ಹೂತು ಹಾಕಲಾಗಿತ್ತು. ಇದರಿಂದಾಗಿ ಕೆಳ ಭಾಗದಲ್ಲಿನ ಬಾವಿ, ಕೆರೆಗಳಲ್ಲಿ ಎಂಡೋಸಲ್ಪಾನ್ ಅಂಶಗಳು ಗೋಚರಗೊಂಡ ಬಗ್ಗೆ ದೂರು ವ್ಯಕ್ತವಾಗಿತ್ತು.