94ಸಿ ಕಡತಕ್ಕೆ ಒಂದೂವರೆ ಲಕ್ಷ ಡಿಮ್ಯಾಂಡ್..!

0

ಉಪ್ಪಿನಂಗಡಿ: ಲಂಚ, ಭ್ರಷ್ಟಾಚಾರದ ವಿರುದ್ಧ ಸಿಡಿದು ನಿಲ್ಲುವ ವ್ಯಕ್ತಿತ್ವದ, ಲಂಚ ಪಡೆದ ಅಧಿಕಾರಿಗಳಿಂದ ಲಂಚದ ಹಣವನ್ನು ವಾಪಸ್ ಮಾಡಿಸಿದ, ಭ್ರಷ್ಟಾಚಾರ ನಡೆಸಿದರೆ ನನ್ನ ಕ್ಷೇತ್ರದಲ್ಲಿ ಜಾಗವಿಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದ ಶಾಸಕ ಅಶೋಕ್ ಕುಮಾರ್ ರೈವರ ಕ್ಷೇತ್ರದಲ್ಲಿ ಇನ್ನೂ ಕೂಡಾ ಕಂದಾಯ ಇಲಾಖೆಯ ಕೆಲವು ಭ್ರಷ್ಟ ಅಧಿಕಾರಿಗಳು ಬಡವರನ್ನು ಸತಾಯಿಸುವುದು ಮುಂದುವರೆದಿದೆ. ಅಕ್ರಮ- ಸಕ್ರಮ ಸಿಟ್ಟಿಂಗ್‌ನಲ್ಲಿ ಮಂಜೂರಾತಿ ಪಡೆದ ಫೈಲ್‌ಗಳನ್ನೇ ಅಧಿಕಾರಿಗಳು ಮುಂದಿನ ಪ್ರಕ್ರಿಯೆಗೆ ಕಳುಹಿಸದೇ ಅದನ್ನು ಪೆಂಡಿಂಗ್ ಇಟ್ಟು ಅರ್ಜಿದಾರನಲ್ಲಿ ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆ. 94ಸಿ ಮಾಡಿಕೊಡಲು ಒಂದೂವರೆ ಲಕ್ಷದಷ್ಟು ಹಣದ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಉಪ್ಪಿನಂಗಡಿ ಕಂದಾಯ ಹೋಬಳಿಯಲ್ಲಿ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.


ಅಶೋಕ್ ಕುಮಾರ್ ರೈಯವರು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಬಳಿಕ ಅವರಿಗೆ ಬಂದ ಅರ್ಜಿದಾರರ ದೂರಿನ ಆಧಾರದಲ್ಲಿ ಅಕ್ರಮ- ಸಕ್ರಮ ಮಾಡಿಕೊಡಲು ಲಂಚ ಪಡೆದ ಅಧಿಕಾರಿಗಳಿಂದ ಅವರು ಪಡೆದ ಲಂಚದ ಲಕ್ಷಾಂತರ ರೂಪಾಯಿ ಹಣವನ್ನು ವಾಪಸ್ ಅರ್ಜಿದಾರರಿಗೆ ಹಿಂದುರುಗಿಸಿಕೊಡುವ ಹಾಗೆ ಮಾಡಿದ ಉದಾಹರಣೆಗಳು ಸಾಕಷ್ಟಿದೆ. ಅಧಿಕಾರಿಗಳು ಲಂಚ ಕೇಳಿದರೆ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದು ಹೇಳಿದರೂ, ಅವರನ್ನು ಸಂಪರ್ಕಿಸಿರುವುದು ಕೆಲವರು ಮಾತ್ರ. ಲಂಚ ಕೊಟ್ಟಾದರೂ ಪರ‍್ವಾಗಿಲ್ಲ. ನನ್ನದೊಂದು ಕೆಲಸವಾದರೆ ಸಾಕು ಎಂದು ಅಧಿಕಾರಿಗಳ ಭ್ರಷ್ಟಚಾರವನ್ನು ಬಾಯಿಬಿಡದೇ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿರುವ ಕೆಲವರಂತವರಿಂದಾಗಿ ಕೆಲ ಭ್ರಷ್ಟ ಅಧಿಕಾರಿಗಳು ಶಾಸಕರ ಎಚ್ಚರಿಕೆಯನ್ನೂ ಧಿಕ್ಕರಿಸಿ, ಲಂಚಕ್ಕಾಗಿ ಜನರನ್ನು ಸತಾಯಿಸುವುದನ್ನು ರಾಜಾರೋಷವಾಗಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದ್ದು, ಇದಕ್ಕೆ ಇಲ್ಲಿ ಕೆಲವೊಂದು ಉದಾಹರಣೆಗಳಿವೆ.


1. ಉಪ್ಪಿನಂಗಡಿ ಗ್ರಾಮದ ವ್ಯಕ್ತಿಯೋರ್ವರು ಅಕ್ರಮ- ಸಕ್ರಮಕ್ಕೆ ಅರ್ಜಿ ಹಾಕಿದ್ದರು. ಅವರ ಫೈಲ್ ಕೋಡಿಂಬಾಡಿಯಲ್ಲಿ ನಡೆದ ಅಕ್ರಮ- ಸಕ್ರಮ ಸಮಿತಿಯ ಸಭೆಯಲ್ಲಿ ಮಂಜೂರು ಕೂಡಾ ಆಯಿತು. ಈ ಫೈಲ್‌ನ ಕೆಲಸ ಮಾಡಿದವರು ಉಪ್ಪಿನಂಗಡಿಯ ಈ ಹಿಂದಿನ ಗ್ರಾಮ ಆಡಳಿತಾಧಿಕಾರಿ. ಆದರೆ ಇವರ ಈ ಫೈಲ್ ಅಕ್ರಮ- ಸಕ್ರಮ ಸಮಿತಿಯಲ್ಲಿ ಮಂಜೂರಾತಿಗೊಂಡ ಬಳಿಕ ಇಲ್ಲಿಗೆ ಹೊಸ ಗ್ರಾಮ ಆಡಳಿತಾಧಿಕಾರಿ ಕರ್ತವ್ಯಕ್ಕೆ ಬಂದರು. ಈ ಹೊಸದಾಗಿ ಬಂದ ಗ್ರಾಮ ಆಡಳಿತಾಧಿಕಾರಿಯು ಅಕ್ರಮ- ಸಕ್ರಮದಲ್ಲಿ ಜಾಗದ ಮಂಜೂರಾತಿ ಪಡೆದಿರುವ ವ್ಯಕ್ತಿಯನ್ನು ತನ್ನ ಕಚೇರಿಗೆ ಕರೆದು ನಿಮ್ಮ ಅಕ್ರಮ- ಸಕ್ರಮ ಫೈಲ್‌ಗೆ ಆಕ್ಷೇಪಣೆ ಇದೆ. ನೀವು ಹೋಗಿ ಪುತ್ತೂರು ತಾಲೂಕು ಕಚೇರಿಯಲ್ಲಿರುವ ಉಪ್ಪಿನಂಗಡಿ ಹೋಬಳಿಯ ಅಕ್ರಮ- ಸಕ್ರಮದ (ಎನ್‌ಸಿಆರ್- ಎಸ್‌ಆರ್) ಕೇಸ್ ವರ್ಕರ್ ಅವರನ್ನು ಭೇಟಿಯಾಗಿ ಮಾತನಾಡಿ ಎಂದರಂತೆ. ಅದಕ್ಕೆ ಆ ವ್ಯಕ್ತಿ ಪುತ್ತೂರು ತಾಲೂಕು ಕಚೇರಿಗೆ ಹೋಗಿ ಅಲ್ಲಿನ ಕೇಸ್ ವರ್ಕರ್ ಬಳಿ ಮಾತನಾಡಿದಾಗ ಆಕ್ಷೇಪಣೆ ಏನಿಲ್ಲ. ಆದರೆ ಈ ಫೈಲ್‌ನಲ್ಲಿ ನನಗೇನೂ ಸಿಕ್ಕಿಲ್ಲ. ನೀವು ಉಪ್ಪಿನಂಗಡಿಯ ವಿಎ ಅವರನ್ನು ಭೇಟಿಯಾಗಿ ಎಂದರಂತೆ. ಆ ವ್ಯಕ್ತಿ ವಾಪಸ್ ವಿಎ ಅವರನ್ನು ಭೇಟಿಯಾದಾಗ ವಿಎ ಅವರು ನೇರವಾಗಿ ನಮಗಿಬ್ಬರಿಗೆ ಏನಾದರೂ ಹಣದ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ನಿಮಗೆ ಈ ಫೈಲ್ ಮಾಡಿಕೊಡುವುದಿಲ್ಲ ಎಂದು ನೇರವಾಗಿ ತಿಳಿಸಿದರಂತೆ. ಹೀಗೆ ಎರಡ್ಮೂರು ಬಾರಿ ಈ ವ್ಯಕ್ತಿ ಪುತ್ತೂರು ತಾಲೂಕು ಕಚೇರಿ, ಉಪ್ಪಿನಂಗಡಿ ಗ್ರಾಮ ಆಡಳಿತಾಧಿಕಾರಿಯ ಕಚೇರಿಗೆ ಅಲೆದಾಡಿದರೂ ಅಲ್ಲಿ ಲಂಚದ ಬೇಡಿಕೆ ಬಂದಿತ್ತೇ ವಿನಹ. ಇವರ ಫೈಲ್ ಅನ್ನು ಮುಂದಿನ ಹಂತಕ್ಕೆ ತಲುಪಿಸುವ ಪ್ರಕ್ರಿಯೆಗಳೇ ನಡೆಯಲಿಲ್ಲ. ಕೊನೆಗೇ ಆ ಬಡ ವ್ಯಕ್ತಿ ಹತಾಶೆಗೊಂಡು ಮುಂದೇನು ಅಂತ ಕುಳಿತಿದ್ದಾರೆ. ಅಕ್ರಮ- ಸಕ್ರಮದಲ್ಲಿ ಜಾಗ ಮಂಜೂರಾತಿಗೊಂಡು ಬಳಿಕದ 15 ದಿನಗಳ ನೊಟೀಸ್ ಪೆರೇಡ್‌ನಲ್ಲಿ ಆಕ್ಷೇಪಣೆ ಯಾರದ್ದೂ ಇಲ್ಲದಿದ್ದರೂ, ಆ ಬಳಿಕ ಓರ್ವ ವ್ಯಕ್ತಿಯನ್ನು ಹುಡುಕಿ. ಅವರಿಂದ ಇದಕ್ಕೆ ಆಕ್ಷೇಪಣೆ ಅರ್ಜಿಯನ್ನು ಹಾಕಿಸುವ ಪ್ರಯತ್ನ ಇಬ್ಬರು ಅಧಿಕಾರಿಗಳಿಂದಲೇ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.


2. ಇದೇ ಉಪ್ಪಿನಂಗಡಿ ಗ್ರಾಮದ ವ್ಯಕ್ತಿಯೋರ್ವರು 94ಸಿಯಡಿ ಅರ್ಜಿ ಸಲ್ಲಿಸಿದ್ದರು. ಅವರಿಗೆ ಇತ್ತೀಚೆಗೆ ಉಪ್ಪಿನಂಗಡಿ ಗ್ರಾಮ ಆಡಳಿತಾಧಿಕಾರಿ ಕಚೇರಿಯಿಂದ ಫೋನ್ ಕರೆ ಹೋಗುತ್ತದೆ. ವಿಎ ಅವರು ಕೂಡಾ ಈ ಫೈಲ್‌ಅನ್ನು ಮಾಡಿಕೊಡುವ ಬಗ್ಗೆ ತುಂಬಾ ಆಸಕ್ತಿ ವಹಿಸಿರುತ್ತಾರೆ. ಆದರೆ ಗ್ರಾಮ ಆಡಳಿತಾಧಿಕಾರಿಯವರ ಕಚೇರಿಗೆ ಹೋಗಿ ಬಂದ ಈ ವ್ಯಕ್ತಿಗೆ ಬಳಿಕ ತೀವ್ರ ನಿರಾಶೆಯಾಗುತ್ತದೆ. ಇದಕ್ಕೆ ಕಾರಣ. ಮೊದಲಿನಿಂದಲೇ ವಾಸ್ತವ್ಯದ ಮನೆ ಇರುವ ಇವರ 4 ಸೆಂಟ್ಸ್ ಜಾಗವನ್ನು 94ಸಿಯಡಿ ಮಾಡಿಕೊಡಲು ಇವರಿಗೆ ಬಂದ ಲಂಚದ ಬೇಡಿಕೆ 60 ಸಾವಿರ ರೂಪಾಯಿ. 4 ಸೆಂಟ್ಸ್‌ಗೆ ಇವರಿಗೆ 60 ಸಾವಿರ ಲಂಚ ಕೊಡುವುದಕ್ಕಿಂತ ನನಗೆ ಆ ಹಣವಿದ್ದರೆ ಹೊಸ ಜಾಗ ಖರೀದಿ ಮಾಡಬಹುದೆಂದು ಅವರೀಗ ಸುಮ್ಮನೆ ಕೂತಿದ್ದಾರೆ. ಅವರ ಫೈಲ್ ಕೂಡಾ ಮತ್ತದೇ ಧೂಳು ಹಿಡಿದ ಕಪಾಟನ್ನು ಸೇರಿದೆ ಎಂಬ ಆರೋಪ ಸಾರ್ವಜನಿಕರ ಕಡೆಯಿಂದ ಕೇಳಿಬರುತ್ತಿದೆ.


3. ಮತ್ತದೇ ಉಪ್ಪಿನಂಗಡಿ ಗ್ರಾಮದಲ್ಲಿ ಮತ್ತೊಂದು ಲಕ್ಷಾಂತರ ರೂ. ಲಂಚ ಕೇಳಿದ ಬಗ್ಗೆಯೂ ಆರೋಪ ಕೇಳಿ ಬರುತ್ತಿದೆ. ತನ್ನ ಏಳು ಸೆಂಟ್ಸ್ ಜಾಗಕ್ಕೆ 94ಸಿಯಡಿ ಅರ್ಜಿ ಸಲ್ಲಿಸಿದ ವ್ಯಕ್ತಿಯೋರ್ವರು ಬಳಿಕ ಫೈಲ್‌ನ ಹಿಂದೆ ಬೀಳದೇ ಸುಮ್ಮನಿದ್ದರು. ಹಾಗಾಗಿ ಅವರ ಫೈಲ್ ಧೂಳು ಹಿಡಿದು ಅಲ್ಲಿಯೇ ಬಿದ್ದಿತ್ತು. ಈಗ ಹೊಸದಾಗಿ ಬಂದ ಗ್ರಾಮ ಆಡಳಿತಾಧಿಕಾರಿಯವರು ಬಹಳ ಆಸಕ್ತಿ ವಹಿಸಿ, ಅವರ ಧೂಳು ಹಿಡಿದ ಕಡತವನ್ನು ತೆಗೆದು ಆ ವ್ಯಕ್ತಿಗೆ ಫೋನ್ ಮಾಡಿದರು. ಅಲ್ಲಿಗೆ ಬಂದು ಸ್ಥಳ ಪರಿಶೀಲನೆ ಮಾಡಿದರು. ಒಟ್ಟಿಗೆ ಹೊಟೇಲ್‌ಗೆ ಹೋಗಿ ಚಾ ಕುಡಿದು ಎದ್ದು ಬಂದವರೇ ನಿಧಾನವಾಗಿ ಆ ಅರ್ಜಿದಾರನ ಕಿವಿಯಲ್ಲಿ ಹೇಳಿದರೂ, ನಿಮ್ಮ ಫೈಲ್‌ಗೆ ಒಂದೂವರೆ ಲಕ್ಷ ಅಂತ. ಧೂಳು ಹಿಡಿದಿದ್ದ ನನ್ನ ಫೈಲ್ ಈ ವಿಎ ಬಂದ ಬಳಿಕವಾದರೂ, ಆಗಬಹುದೆಂಬ ಕನಸಲ್ಲಿದ್ದ ಈ ಅರ್ಜಿದಾರನ ಮುಖದಲ್ಲಿದ್ದ ಮಂದಹಾಸ ಆ ಕೂಡಲೇ ಬಾಡಿಹೋಗಿತ್ತು. ಇದನ್ನು ಶಾಸಕರಿಗೂ ತಿಳಿಸಿದರು. ಶಾಸಕರು ಲಂಚ ಕೊಡಬೇಡಿ ಎಂದೂ ಹೇಳಿದ್ದರಂತೆ. ಆದರೂ ಆ ಫೈಲ್ ಕೂಡಾ ಮುಂದಿನ ಪ್ರಕ್ರಿಯೆಗೆ ಸಾಗದೇ ಮೊದಲಿದ್ದ ಜಾಗಕ್ಕೆ ಹೋಗಿದೆ. ನನಗೆ 94ಸಿಯಲ್ಲಿ ಹಕ್ಕು ಪತ್ರ ಸಿಗದಿದ್ದರೂ ಪರ‍್ವಾಗಿಲ್ಲ. ಲಂಚ ಮಾತ್ರ ನಾನು ಕೊಡೋದಿಲ್ಲ ಅಂತ ಆ ವ್ಯಕ್ತಿ ಈಗ ಸುಮ್ಮನೇ ಕೂತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.


4. 34 ನೆಕ್ಕಿಲಾಡಿಯಲ್ಲಿ ಒಬ್ಬರಿಗೆ ಅಕ್ರಮ- ಸಕ್ರಮದಲ್ಲಿ ಜಾಗ ಮಂಜೂರಾತಿಯಾಗಿತ್ತು. ಸರಕಾರದ ಮಟ್ಟದಲ್ಲಿ ಸ್ವಲ್ಪ ಹಿಡಿತ ಇದ್ದ ಕಾರಣ ಇವರಿಗೆ ಎಲ್ಲಿಯೂ ಒಂದು ಪೈಸೆ ಲಂಚ ಕೊಡದೇ ಕೇವಲ ಸರಕಾರಕ್ಕೆ ಕಟ್ಟಲು ಇರುವ ಹಣವನ್ನು ಮಾತ್ರ ಕಟ್ಟಿ ಕೆಲಸವನ್ನು ಮಾಡಿಸಿಕೊಂಡಿದ್ದರು. ಆದರೆ ಜಾಗ ಮಂಜೂರಾತಿಯಾದ ಬಳಿಕ ಅಕ್ರಮ- ಸಕ್ರಮದ (ಎನ್‌ಸಿಆರ್- ಎಸ್‌ಆರ್) ಕೇಸ್ ವರ್ಕರ್ ಕೈಯಿಂದ ಜಾಗದ ಪ್ಲಾಟಿಂಗ್‌ಗೆಂದು ಸರ್ವೇಯರ್ (ಭೂಮಾಪಕ)ರಿಗೆ ಈ ಜಾಗದ ಕಡತ ಬರುವಾಗ ಅದರಲ್ಲಿದ್ದ ‘ಐ ಸ್ಕೆಚ್’ ನಾಪತ್ತೆಯಾಗಿತ್ತು.
ಹೀಗೆ ಒಂದೆರಡಲ್ಲ. ಅಕ್ರಮ- ಸಕ್ರಮ ಹಾಗೂ 94ಸಿಗೆ ಭ್ರಷ್ಟ ಅಧಿಕಾರಿಗಳು ಲಂಚ ಕೇಳಿದ ಪ್ರಕರಣಗಳು ಕೇಳಿಬರುತ್ತಿವೆ. ಕೆಲವರು ಲಂಚ ಕೊಟ್ಟು ಕೆಲಸ ಮಾಡಿಸಿಕೊಂಡರೇ, ಇನ್ನು ಕೆಲವರು ಲಂಚ ಕೊಡದೇ ನಮಗೆ ಈ ಉಸಾಬಾರಿಯೇ ಬೇಡ ಅಂತ ಸುಮ್ಮನಿದ್ದಾರೆ. ಅವರು ಎದುರಿಗೆ ಬಂದು ಹೇಳುವ ಧೈರ್ಯ ಮಾಡದ್ದರಿಂದಲೇ ಇಂತ ಭ್ರಷ್ಟ ಅಧಿಕಾರಿಗಳು ಯಾರನ್ನೂ ಕ್ಯಾರೇ ಮಾಡದೇ ಬೆಳೆಯಲು ಸಾಧ್ಯವಾಗಿದೆ. ಲಂಚ ಕೊಡದಿದ್ದರೆ ಆ ಫೈಲ್‌ಗಳಿಗೆ ಯಾರಿಂದಲೋ ಆಕ್ಷೇಪಣೆ ಅರ್ಜಿ ಹಾಕಿಸಿ, ಕುಮ್ಕಿ, ಅರಣ್ಯ ಎಂಬ ಒಕ್ಕಣೆಯನ್ನೂ ಬರೆದು, ಅವರ ಫೈಲ್ ರಿಜೆಕ್ಟ್ ಆಗುವ ಹಾಗೆ ಮಾಡುವ ಕಲೆಯನ್ನೂ ಇಂತಹ ಲಂಚ ಕೋರ ಅಽಕಾರಿಗಳು ರೂಢಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಅಕ್ರಮ- ಸಕ್ರಮ, 94ಸಿ ಅನ್ನುವುದು ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ. ಆದ್ದರಿಂದ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಶಾಸಕರಿಂದ ಇಂತಹ ಭ್ರಷ್ಟ, ಬಡ ಜನರನ್ನು ಸತಾಯಿಸುವ ಅಽಕಾರಿಗಳನ್ನು ನಮ್ಮ ತಾಲೂಕಿನಿಂದಲೇ ಒದ್ದೋಡಿಸುವ ಕಾರ್ಯವಾಗಬೇಕಾಗಿದೆ.

ಉಪ್ಪಿನಂಗಡಿ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಹಾಗೂ ಅಕ್ರಮ- ಸಕ್ರಮದ (ಎನ್‌ಸಿಆರ್- ಎಸ್‌ಆರ್) ಕೇಸ್ ವರ್ಕರ್ ಎಂಬವರು ಒಗ್ಗೂಡಿ ಲಂಚಕ್ಕಾಗಿ ಸಾರ್ವಜನಿಕರನ್ನು ಸತಾಯಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಇಂತಹ ಅಽಕಾರಿಗಳು ಉತ್ತಮ ಆಡಳಿತದ ಕನಸು ಕಂಡಿರುವ ಶಾಸಕ ಅಶೋಕ್ ಕುಮಾರ್ ರೈಯವರ ಕಾರ್ಯವೈಖರಿ ಹಾಗೂ ಉತ್ತಮ ಅಧಿಕಾರಿಗಳಿಗೆ ಕಪ್ಪು ಚುಕ್ಕೆ. ಲಂಚ ಕೇಳುವ ಇಂತಹ ಅಽಕಾರಿಗಳ ವಿರುದ್ಧ ಜನರು ಧೈರ್ಯವಾಗಿ ಶಾಸಕರಿಗೆ ಅಥವಾ ರೈತ ಸಂಘಕ್ಕೆ ದೂರು ನೀಡಬಹುದು. ಜನರ ಕಡತಗಳು ನಿಯಮಾನುಸಾರವಿದ್ದರೆ ಖಂಡಿತ ರೈತ ಸಂಘವು ಜನರ ಬೆನ್ನಿಗೆ ನಿಂತು ಹೋರಾಟ ನಡೆಸಲಿದೆ.
ರೂಪೇಶ್ ರೈ ಅಲಿಮಾರ್
ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ)
ದ.ಕ. ಜಿಲ್ಲೆ

ಲಂಚ- ಭ್ರಷ್ಟಾಚಾರಕ್ಕೆ ಪುತ್ತೂರು ತಾಲೂಕಿನಲ್ಲಿ ಕಡಿವಾಣ ಹಾಕಬೇಕು. ಲಂಚ ಕೊಡದೇ ಜನರ ಕೆಲಸಗಳು ಸರಕಾರಿ ಕಚೇರಿಗಳಲ್ಲಿ ನಡೆಯಬೇಕು. ನಮ್ಮ ಕ್ಷೇತ್ರವು ಸಂಪೂರ್ಣ ಲಂಚ ಮುಕ್ತವಾಗಬೇಕೆನ್ನುವುದು ನಮ್ಮ ಶಾಸಕರ ಹಾಗೂ ನಮ್ಮ ಕನಸು ಮತ್ತು ಉದ್ದೇಶವಾಗಿದೆ. ಆದರೆ ಉಪ್ಪಿನಂಗಡಿ ಹೋಬಳಿ ಮಟ್ಟದಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ಲಂಚಕ್ಕಾಗಿ ಜನರನ್ನು ಸತಾಯಿಸುತ್ತಿದ್ದಾರೆ ಅನ್ನೋದು ನಮ್ಮ ಗಮನಕ್ಕೆ ಬಂದಿದೆ. ಬೇಕಂತಲೇ ಕಡತಗಳನ್ನು ತಪ್ಪಿಸುವುದು, ಆಕ್ಷೇಪಣೆಗಳನ್ನು ಸೃಷ್ಟಿಸುವುದು ಮಾಡಿದರೆ ಅವರ ಮೇಲೆ ಖಂಡಿತಾ ಕ್ರಮ ಕೈಗೊಳ್ಳಲು ಶಾಸಕರಿಗೆ ತಿಳಿಸುತ್ತೇವೆ. ಶಾಸಕರು ಮೊದಲಿನಿಂದಲೂ ಹೇಳುತ್ತಿದ್ದಾರೆ. ಯಾರು ಲಂಚ ಕೊಡಬೇಡಿ. ಕಾನೂನಾತ್ಮಕವಾಗಿ ಇದ್ದ ಅಕ್ರಮ- ಸಕ್ರಮ, 94ಸಿ ಕಡತಗಳನ್ನು ಜಾತಿ-ಧರ್ಮ, ರಾಜಕೀಯದ ಬೇಧವಿಲ್ಲದೆ ನಾವು ಮಾಡಿಸಿಕೊಡುತ್ತೇವೆಯೆಂದು. ಇದಕ್ಕೆ ಯಾರೊಬ್ಬ ಅಧಿಕಾರಿಯಾದರೂ ಲಂಚದ ಬೇಡಿಕೆ ಇಟ್ಟರೆ ನೇರವಾಗಿ ನಮ್ಮ ಗಮನಕ್ಕೆ ತನ್ನಿ ಎಂದು. ಆದರೆ ಅಧಿಕೃತವಾಗಿ ನಮ್ಮ ಮುಂದೆ ಬಂದು ದೂರು ನೀಡುವ ಧೈರ್ಯ ತೋರುತ್ತಿಲ್ಲ. ಇನ್ನಾದರೂ, ಅಧಿಕಾರಿಗಳು ನಿಮ್ಮನ್ನು ಸುಖಾಸುಮ್ಮನೆ ಲಂಚಕ್ಕಾಗಿ ಪೀಡಿಸಿದರೆ, ಕಡತಗಳನ್ನು ನಾಪತ್ತೆ ಮಾಡಿದರೆ, ಸುಳ್ಳುಗಳನ್ನು ಉಲ್ಲೇಖಿಸಿ ನಿಮ್ಮ ಕಡತಗಳನ್ನು ವಾಪಸ್ ಆಗುವಂತೆ ಮಾಡಿದರೆ ಧೈರ್ಯವಾಗಿ ಬಂದು ಅಧಿಕೃತವಾಗಿ ಶಾಸಕರಿಗೆ ದೂರು ನೀಡಿ. ಅಂತಹ ಅಧಿಕಾರಿಗಳ ವಿರುದ್ಧ ಖಂಡಿತಾ ಶಿಸ್ತು ಕ್ರಮ ಆಗುತ್ತೆ. ನಿಮ್ಮ ಕಡತಗಳು ಕಾನೂನಾತ್ಮಕವಾಗಿ ಸರಿಯಿದ್ದಲ್ಲಿ ಅದು ವಿಲೇ ಮಾಡಿಸುವ ಕೆಲಸವನ್ನು ಶಾಸಕರು ಮಾಡುತ್ತಾರೆ.
ಮುಹಮ್ಮದ್ ಬಡಗನ್ನೂರು
ಸದಸ್ಯರು, ಅಕ್ರಮ- ಸಕ್ರಮ ಸಮಿತಿ, ಪುತ್ತೂರು ತಾಲೂಕು

ಉಪ್ಪಿನಂಗಡಿ ಗ್ರಾ.ಪಂ.ನ ಗ್ರಾಮ ಆಡಳಿತಾಧಿಕಾರಿ ಜಯಚಂದ್ರರವರು ವಕ್ ಭೂಮಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸಿ ಸಂದೇಶ ರವಾನಿಸಿದ್ದರು. ಓರ್ವ ಸರಕಾರಿ ಅಧಿಕಾರಿಯಾಗಿ ಮುಖ್ಯಮಂತ್ರಿಯನ್ನು ನಿಂದಿಸಿದ ಗ್ರಾಮ ಆಡಳಿತಾಧಿಕಾರಿಯ ವಿರುದ್ಧ ಕ್ರಮವಾಗಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿತ್ತು. ಆದರೆ ಈತ ಕ್ಷಮೆ ಕೇಳಿದ ಬಳಿಕ ಈ ಪ್ರಕರಣ ತಣ್ಣಗಾಗಿತ್ತು.

LEAVE A REPLY

Please enter your comment!
Please enter your name here