ಪುತ್ತೂರು: ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಆಧಾರದಲ್ಲಿ ಆರೋಪಿಗಳ ವಿರುದ್ಧ ಎಫ್.ಐ.ರ್. ಆಗಿ ಬಳಿಕ ಪೊಲೀಸರು ಆರೋಪಿಗಳ ವಿರುದ್ಧ ದೋಷರೋಪ ಪಟ್ಟಿ ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದರಿ ಆರೋಪಿಗಳ ಮೇಲಿರುವ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂಬ ನೆಲೆಯಲ್ಲಿ ಪುತ್ತೂರು ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಲಯವು ಈ ಪ್ರಕರಣದ ಇಬ್ಬರು ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಈ ಪ್ರಕರಣದ ದೂರುದಾರರು ಸೇರಿದಂತೆ ಹಲವು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆರೋಪ ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು, ಆರೋಪಿಗಳನ್ನು ಪುತ್ತೂರು ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಲಯದ ನ್ಯಾಯಾಧೀಶ ದೇವರಾಜ್ ವೈ ಹೆಚ್ ತೀರ್ಪು ನೀಡಿದ್ದಾರೆ.
ಪ್ರಕರಣದ ವಿವರ:
2021ರ ಜೂನ್ 30ರಂದು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷರಾಗಿದ್ದ ಉದಯ ರವಿಯವರು ತಮ್ಮ ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ನಲ್ಲಿದ್ದ ಸಂದರ್ಭದಲ್ಲಿ ಆರ್ಲಪದವು ಎಂಬಲ್ಲಿ ಪುತ್ತೂರು ಕಡೆಯಿಂದ ಕೇರಳ ಕಡೆಗೆ ಒಡ್ಯ ಮಾರ್ಗವಾಗಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಆ ಮಾರ್ಗದಲ್ಲಿ ಸಾಗಿ ಬಂದ ಪಿಕಪ್ ವಾಹನವನ್ನು ನಿಲ್ಲಿಸಿದಾಗ ಅದರಲ್ಲಿದ್ದ ವ್ಯಕ್ತಿಯೊಬ್ಬ ವಾಹನದಿಂದ ಇಳಿದು ಓಡಿ ಹೋಗುತ್ತಾನೆ. ಬಳಿಕ ವಾಹನ ಚಾಲಕ ಕೂಡಾ ಓಡುವ ಪ್ರಯತ್ನದಲ್ಲಿದ್ದಾಗ ಕರ್ತವ್ಯ ನಿರತ ಪೊಲೀಸರು ಆತನನ್ನು ತಡೆದು ನಿಲ್ಲಿಸಿ, ಬಳಿಕ ಪಿಕಪ್ ವಾಹನವನ್ನು ಪರಿಶೀಲಿಸಿದಾಗ ಸದ್ರಿ ವಾಹನದಲ್ಲಿ ಎರಡು ಹಸುಗಳು ಪತ್ತೆಯಾಗಿತ್ತು.
ಸದ್ರಿ ಹಸುಗಳನ್ನು ಸಾಗಾಟ ಮಾಡಲು ಅಗತ್ಯವಿದ್ದ ಪರವಾನಿಗೆ ಮತ್ತು ಪಶು ವೈದ್ಯಾಧಿಕಾರಿಯವರ ಪ್ರಮಾಣಪತ್ರಗಳು ಇರದಿರುವುದು ತಿಳಿದುಬಂದಿತ್ತು.
ಆರೋಪಿ ಚಾಲಕನನ್ನು ಹಂಝ ಎಂದು ಗುರುತಿಸಲಾಗಿದ್ದು ಮತ್ತು ಪಿಕಪ್ ನಿಂದ ಓಡಿಹೋದ ವ್ಯಕ್ತಿಯನ್ನು ಬೆಳೆಯೂರುಕಟ್ಟೆಯ ಸಿದ್ದಿಕ್ ಎಂದು ಗುರುತಿಸಲಾಗಿತ್ತು.
ಸದ್ರಿ ಹಂಝ ಮತ್ತು ಆರೋಪಿಗಳು ಹಸುಗಳನ್ನು ಸಾಗಾಟ ಮಾಡಲು ಉಪಯೋಗಿಸಿದ ಅಂದಾಜು 4,50,000/- ರೂಪಾಯಿ ಮೌಲ್ಯದ KA21 B 3411 ನೇ ಪಿಕಪ್ ವಾಹನ, ಹಾಗೂ ಸದ್ರಿ ಪಿಕಪ್ನಲ್ಲಿದ ತಲಾ 20,000/-ರೂಪಾಯಿಯಂತೆ ಒಟ್ಟು ರೂಪಾಯಿ 40,000/- ಮೌಲ್ಯದ 2 ಹಸುಗಳನ್ನು ಕೂಡಾ ಸ್ವಾಧೀನಪಡಿಸಿಕೊಳ್ಳಲಾಗಿತ್ತು.
ಈ ದೂರನ್ನು ಆಧರಿಸಿ ಆರೋಪಿಗಳ ವಿರುದ್ಧ ಎಫ್ ಐ ರ್ ದಾಖಲಿಸಿದ್ದ ಪೊಲೀಸರು ಆರೋಪಿಗಳ ವಿರುದ್ಧ ದೋಷರೋಪ ಪಟ್ಟಿ ಸಲ್ಲಿಸಿದ್ದರು.
ದೂರುದಾರರು ಸೇರಿದಂತೆ ಹಲವು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆರೋಪ ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿಗಳನ್ನು ಆರೋಪದಿಂದ ಖುಲಾಸೆಗೊಳಿಸಲಾಗಿದೆ .
ಆರೋಪಿಗಳನ್ನು ಈ ಪ್ರಕರಣದಲ್ಲಿ ದೋಷ ಮುಕ್ತಗೊಳಿಸಿ ಪುತ್ತೂರು ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಲಯದ ನ್ಯಾಯಾಧೀಶ ದೇವರಾಜ್ ವೈ ಹೆಚ್ ತೀರ್ಪು ನೀಡಿದ್ದಾರೆ. ಆರೋಪಿಗಳ ಪರವಾಗಿ ಕೆ ಎಂ ಸಿದ್ದಿಕ್ ಕಲ್ಲೇಗ ಹಾಗೂ ಅಶ್ರಫ್ ಕನ್ಯಾರ ಕೋಡಿ ವಾದಿಸಿದ್ದರು.