ಬರಹ: ಗೌತಮ್ ಶೆಟ್ಟಿ
ಪುತ್ತೂರು: ಆನ್ಲೈನ್ ವಂಚನೆ ಎನ್ನುವುದು ಇದೀಗ ತೀರಾ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ನಡೆಯುತ್ತಿದೆ. ಆನ್ಲೈನ್, ಸೈಬರ್ ಕ್ರೈಮ್ನ್ನು ತಡೆಗಟ್ಟಲು ಸರಕಾರ, ಪೊಲೀಸ್ ಇಲಾಖೆ ಹರಸಾಹಸಪಡುತ್ತಿರುವ ನಡುವೆಯೇ ದಿನಕ್ಕೊಂದು ದಾರಿಯನ್ನು ಕಂಡುಕೊಂಡು ವಂಚಕರು ಮೋಸದ ಬಲೆ ಬೀಸುತ್ತಿದ್ದಾರೆ. ಹಳೆಯ ವಿಧಾನಗಳನ್ನು ಬಿಟ್ಟಿರುವ ವಂಚಕರು ಇದೀಗ ರಾಜ್ಯ ಅಥವಾ ಕೇಂದ್ರ ಸರಕಾರದ ಸ್ವಾಮ್ಯದ ಸಂಸ್ಥೆಗಳ ಹೆಸರನ್ನು ಬಳಸಿಕೊಂಡು ವಂಚಿಸುವ ಪ್ರಕರಣಗಳು ವರದಿಯಾಗುತ್ತಿವೆ. ಸಿಬಿಐ, ಇಡಿ, ಕ್ರೈಮ್ಬ್ರಾಂಚ್, ಪೊಲೀಸ್, ಇನ್ಕಮ್ ಟ್ಯಾಕ್ಸ್ ಹೀಗೆ ವಿವಿಧ ಸರಕಾರಿ ಸ್ವಾಮ್ಯದ ಸಂಸ್ಥೆಗಳ ಹೆಸರಿನಲ್ಲಿ, ಸಂಸ್ಥೆಗಳ ಅಧಿಕಾರಿಗಳ ಸೋಗಿನಲ್ಲಿ ಕರೆಮಾಡುತ್ತಿರುವ ಪ್ರಕರಣಗಳು ಕರಾವಳಿಯಲ್ಲೇ ಬಹಳಷ್ಟು ವರದಿಯಾಗಿವೆ. ಇದೀಗ ಸೇನೆಯ ಹೆಸರಿನಲ್ಲಿ ಪುತ್ತೂರು ಮೂಲದ, ಮಂಗಳೂರಿನಲ್ಲಿ ಉದ್ಯಮ ಹೊಂದಿರುವ, ಅನಿವಾಸಿ ಉದ್ಯಮಿಯೋರ್ವರಿಗೆ ಲಕ್ಷಾಂತರ ರೂ. ವಂಚನೆಗೈಯಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಉದ್ಯಮಿಯು ಸಮಯಪ್ರಜ್ಞೆ, ಜಾಣ್ಮೆಯಿಂದ ಭಾರೀ ವಂಚನೆಯಿಂದ ಪಾರಾಗಿದ್ದಾರೆ.
ಪ್ರಕರಣದ ವಿವರ:
ಪುತ್ತೂರು ಮೂಲದ ಅನಿವಾಸಿ ಉದ್ಯಮಿ ಯತೀಶ್ ರೈ ಚೆಲ್ಯಡ್ಕ ಎನ್ನುವವರು ಮಂಗಳೂರಿನ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಶ್ರೀ ಗಣೇಶ್ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಎನ್ನುವ ಸಂಸ್ಥೆಯನ್ನು ಹೊಂದಿದ್ದಾರೆ. ಅನೇಕ ವರ್ಷಗಳಿಂದ ಸ್ಕಾಫೋಲ್ಡಿಂಗ್ ಮ್ಯಾನುಫ್ಯಾಕ್ಚರಿಂಗ್, ಸಪ್ಲೈ ಮತ್ತು ಸರ್ವೀಸ್ ವಿಭಾಗದಲ್ಲಿ ಸಂಸ್ಥೆಯು ಸೇವೆ ಸಲ್ಲಿಸುತ್ತಿದೆ. ಅನೇಕ ಪ್ರತಿಷ್ಠಿತ ಸಂಸ್ಥೆಗಳಿಗೆ ಸಂಸ್ಥೆಯು ಸೇವಾ ಪೂರೈಕೆದಾರರಾಗಿಯೂ ಗುರುತಿಸಿಕೊಂಡಿದೆ. 2024ರ ಅ.7ರಂದು ಯತೀಶ್ ರೈಯವರ ಮೊಬೈಲ್ಗೆ ಕಣ್ಣೂರಿನ ಆರ್ಮಿಸ್ಟೋರ್ನ ಸೇನಾ ಅಧಿಕಾರಿ ಶ್ರೀಕಾಂತ್ ಸಿಂಗ್ ಎಂದು ಹೇಳಿಕೊಂಡು ವ್ಯಕ್ತಿಯೋರ್ವರು ಕರೆ ಮಾಡಿದ್ದರು. ಹೆಚ್ ಫ್ರೇಮ್ ಸ್ಕ್ಯಾಫೋಲ್ಡಿಂಗ್ ಮೆಟಿರಿಯಲ್ ಬೇಕು ಎಂದು ಕೇಳಿದ್ದರು. ದರದ ಬಗ್ಗೆ ವಿಚಾರಿಸಲು ಯತೀಶ್ ರೈಯವರು ತಮ್ಮ ಮ್ಯಾನೇಜರ್ನ ಮೊಬೈಲ್ ನಂಬರ್ ನೀಡಿದ್ದರು. ಬಳಿಕ ಮಾತುಕತೆ ನಡೆದು ಕಣ್ಣೂರಿನ ಆರ್ಮಿಸ್ಟೋರ್ ಹೆಸರಿನಲ್ಲಿ ಯತೀಶ್ ರೈಯವರ ಸಂಸ್ಥೆಗೆ ವರ್ಕ್ ಆರ್ಡರ್ ಕೂಡ ನೀಡಿದ್ದರು. ಇತ್ತ ಇದನ್ನು ನಂಬಿ ಸಂಸ್ಥೆಯು ಸ್ಕ್ಯಾಫೋಲ್ಡಿಂಗ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿತ್ತು. ಅತ್ತಕಡೆಯಿಂದ ಪ್ರತೀ ಹಂತದಲ್ಲಿ ಕೆಲಸದ ಅಪ್ಡೇಟ್ನ್ನು ಪಡೆಯುತ್ತಿದ್ದು, ಕೆಲಸದ ಪ್ರಗತಿಯ ಫೋಟೋಸ್ನ್ನು ವಾಟ್ಸ್ಆಪ್ನಲ್ಲಿ ಪಡೆದುಕೊಳ್ಳುತ್ತಿದ್ದರು. ಸರಿಸುಮಾರು ಒಂದು ತಿಂಗಳ ಕಾಲ ಈ ಪ್ರಕ್ರಿಯೆ ನಡೆದಿದ್ದು, ಗೂಡ್ಸ್ ಕಳಿಸುವಂತೆ ಅತ್ತಕಡೆಯಿಂದ ಕೇಳಿಕೊಂಡಿದ್ದರು. ಅಲ್ಲದೇ, ನಿಮ್ಮ ಗೂಡ್ಸ್ ನಮ್ಮ ಗೇಟ್ ಎಂಟ್ರಿಯಾಗುವ ಮೊದಲೇ ತಮ್ಮ ಮೊತ್ತವನ್ನು ಪಾವತಿಸುತ್ತೇವೆ ಎಂದು ಭರವಸೆ ಕೂಡ ನೀಡಿದ್ದರು. ಅಂತೆಯೇ ಕೆಲಸ ಮುಗಿಸಿ ಯತೀಶ್ ರೈಯವರ ಸಂಸ್ಥೆಯು ಟ್ರಕ್ಗೆ ಮೆಟಿರಿಯಲ್ ಲೋಡ್ ಮಾಡಿ ಕಳಿಸಿಕೊಟ್ಟಿದ್ದರು. ಈ ವೇಳೆ ಬಿಲ್ ಮೊತ್ತದ ಬಗ್ಗೆ ಯತೀಶ್ ರೈಯವರು ವಿಚಾರಿಸಿದ್ದು, ಈ ಸಂದರ್ಭದಲ್ಲಿ ಆರ್ಮಿ ಅಧಿಕಾರಿಗಳೆಂದು ಹೇಳಿಕೊಂಡ ವ್ಯಕ್ತಿಗಳು ‘ನಿಮ್ಮ ಬ್ಯಾಂಕ್ ಖಾತೆಯಲ್ಲಿ ನಮ್ಮನ್ನು ಬೆನಿಫಿಶಿಯರಿ ಆಡ್ ಮಾಡಿ’ ಎಂದು ಕೇಳಿದ್ದರು. ಅದ್ಯಾಕೆ ಹಾಗೆ ಎಂದು ಪ್ರಶ್ನಿಸಿದಾಗ ‘ನಮ್ಮ ಆರ್ಮಿ ಸ್ಟೋರ್ನಲ್ಲಿ ವೆಂಡರ್ಗಳಿಗೆ ಪೇಮೆಂಟ್ ಮಾಡುವ ವಿಧಾನ ಹೀಗೆಯೇ’ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ‘ನಿಮಗೆ ಬರಬೇಕಿರುವ ಮೊತ್ತದ ಅರ್ಧಭಾಗವನ್ನು ನಮ್ಮ ಖಾತೆಗೆ ಹಾಕಬೇಕು. ನಾವು ಡಬಲ್ ಮಾಡಿ ನಿಮಗೆ ಪೂರ್ತಿ ಪೇಮೆಂಟ್ ಮಾಡುತ್ತೇವೆ’ ಎಂದೆಲ್ಲಾ ಹೇಳಿದ್ದರು. ’ಉದಾಹರಣೆಗೆ ನೀವು 5 ರೂ ಹಾಕಿದರೆ ನಾವು 10 ರೂ ಹಾಕ್ತೇವೆ. ನಿಮಗೆ 7.5 ಲಕ್ಷ ಬಿಲ್ ನೀಡಬೇಕಿದ್ದು, ಅದರ ಅರ್ಧಮೊತ್ತ’ ಹಾಕಬೇಕು ಎಂದು ಹೇಳಿದ್ದರು. ಇಲ್ಲ ಸಾಧ್ಯವಿಲ್ಲ ಎಂದಾಗ ನಾನಾ ಪರಿಯಲ್ಲಿ ಮನವೊಲಿಸಲು ಯತ್ನಿಸಿದ್ದರು. ಅವರ ಮಾತಿಗೆ ಮರಳಾಗಿ ಇನ್ನು ಅತ್ತಕಡೆಯಿಂದ ನಮ್ಮ ಗೂಡ್ಸ್ ಕೂಡ ಇಲ್ಲ, ಹಣವೂ ಇಲ್ಲವೆಂದಾಗುವುದು ಬೇಡ ಎಂದು 1 ಲಕ್ಷ ರೂ. ಮೊತ್ತವನ್ನು ಅವರ ಖಾತೆಗೆ ವರ್ಗಾಯಿಸಲು ಯತೀಶ್ ರೈಯವರು ಮುಂದಾಗಿದ್ದರು. ಆದರೆ ಅದೃಷ್ಟವಶಾತ್ ಅಂದು ಅವರ ಬ್ಯಾಂಕ್ ಖಾತೆಗಳು ವರ್ಕ್ ಆಗದೇ ಇದ್ದು, ಆನ್ಲೈನ್ ಮೂಲಕ ವಂಚಕರಿಗೆ ಹಣ ವರ್ಗಾಯಿಸುವುದು ಸಾಧ್ಯವಾಗಿರಲಿಲ್ಲ. ಬಳಿಕವೂ ನಿರಂತರವಾಗಿ ಕರೆ ಮಾಡಿ ಹಣ ಹಾಕುವಂತೆ ಪೀಡಿಸಿದ್ದರು. ಇದರಿಂದ ಯತೀಶ್ ರೈಯವರಿಗೆ ತೀರಾ ಅನುಮಾನ ಬಂದು ಪೊಲೀಸ್ ಇಲಾಖೆಯ ಅಧಿಕಾರಿಗಳ ಬಳಿ ತಿಳಿಸಿದಾಗ ಇದೊಂದು ವಂಚನೆಯ ಜಾಲ ಎನ್ನುವುದು ಸ್ಪಷ್ಟವಾಯಿತು. ಹೀಗಾಗಿ ವಂಚನೆಯಿಂದ ಪಾರಾಗುವಂತಾಯಿತು ಎನ್ನುವುದು ಯತೀಶ್ ರೈಯವರು ಹೇಳಿರುವ ಮಾತುಗಳು.
ಎಲ್ಲಾ ಬಗೆಯ ತಂತ್ರಗಳನ್ನು ಅನುಸರಿಸಿರುವ ವಂಚಕರು ಇದೀಗ ಸೇನೆಯ ಹೆಸರಿನಲ್ಲೇ ವಂಚನೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯತೀಶ್ ರೈಯವರು ಸೈಬರ್ ಕ್ರೈಮ್ಗೆ ದೂರು ನೀಡಲು ಮುಂದಾಗಿದ್ದು, ಇವರು ಹಣ ಕಳೆದುಕೊಂಡಿರದ ಹಿನ್ನೆಲೆಯಲ್ಲಿ ಸೈಬರ್ ಕ್ರೈಮ್ ಪೊಲೀಸರು ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ ಎಂದು ಯತೀಶ್ ರೈ ತಿಳಿಸಿದ್ದಾರೆ. ಇನ್ನು ಸೇನೆಯಂತಹ ಸಂಸ್ಥೆಗಳ ಹೆಸರನ್ನೇ ಬಳಸಿಕೊಂಡು ವಂಚಿಸುತ್ತಿರುವ ಪ್ರಕರಣದ ಗಂಭೀರತೆಯನ್ನು ಅರಿತುಕೊಂಡು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಯತೀಶ್ ರೈಯವರು ಕೇಂದ್ರ ರಕ್ಷಣಾ ಸಚಿವರು, ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು, ಆರ್ಬಿಐ ಹಾಗೂ ಕರ್ನಾಟಕದ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.
ಇಷ್ಟೆಲ್ಲಾ ಸುಸಜ್ಜಿತವಾಗಿ ವಂಚನೆ ನಡೆಸುತ್ತಿರುವ ಬಗ್ಗೆ ಯತೀಶ್ ರೈಯವರು ಆತಂಕ ವ್ಯಕ್ತಪಡಿಸಿದ್ದಾರೆ. ನಾವು ಯಾವುದೇ ಬ್ಯಾಂಕ್ಗಳಲ್ಲಿ ಖಾತೆ ತೆರೆಯಲು ಹೋದರೆ ನೂರಾರು ದಾಖಲೆಗಳನ್ನು ಕೇಳಿ ಸತಾಯಿಸುತ್ತಾರೆ. ಅದನ್ನು ವೆರಿಫೈ ಮಾಡಿ ಬಳಿಕವಷ್ಟೇ ಖಾತೆ ತೆರೆಯಲು ಸಾಧ್ಯವಾಗುತ್ತದೆ. ಆದರೆ ಇಲ್ಲಿ ವಂಚಕರು ಡಿಫೆನ್ಸ್ ಅಕೌಂಟ್ ಎ,ಬಿ,ಸಿ ಎಂದು ಮೂರು ಖಾತೆಗಳನ್ನು ರಾಷ್ಟ್ರೀಕೃತ ಬ್ಯಾಂಕ್ನಲ್ಲೇ ತೆರೆದಿದ್ದಾರೆ. ಇದು ಹೇಗೆ ಸಾಧ್ಯ? ಹಾಗಿದ್ದರೆ ಈ ಸಂದರ್ಭಗಳಲ್ಲಿ ಸುರಕ್ಷತೆ, ದಾಖಲೆಗಳು, ನಿಯಮಗಳನ್ನು ಪರಿಶೀಲನೆ ಮಾಡುವುದಿಲ್ಲವೇ ಎನ್ನುವುದು ಉದ್ಯಮಿ ಯತೀಶ್ ರೈಯವರ ಪ್ರಶ್ನೆ.
ಪ್ರತೀ ಮಾತಿನಲ್ಲೂ ದೇಶಪ್ರೇಮ..!!
ಇನ್ನು ವಂಚಕರು ಅದೆಷ್ಟರ ಮಟ್ಟಿಗೆ ಸರಕಾರಿ ಸಂಸ್ಥೆಗಳ ಮೇಲೆ, ಸೇನೆಗಳ ಮೇಲೆ ಜನರಿಗೆ ಇರುವ ಭಾವನೆ, ಗೌರವವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಇದು ನಿದರ್ಶನ. ವಂಚಕರು ಫೋನ್ನಲ್ಲಿ ಕರೆ ಮಾಡುವ ಪ್ರತೀ ಸಂದರ್ಭದಲ್ಲೂ ಹಿಂದಿಯಲ್ಲೇ ಮಾತನಾಡುತ್ತಿದ್ದರು. ಪ್ರತೀ ವೇಳೆ ದೇಶಪ್ರೇಮ ಉಕ್ಕಿಸುವಂತಹ ಮಾತುಗಳನ್ನು ಆಡುತ್ತಿದ್ದರು. ಪೇಮೆಂಟ್ ವೇಳೆ ಮಾತುಕತೆ ನಡೆದ ಸಂದರ್ಭದಲ್ಲಿ ‘ನಾವು ಮೋಸ ಮಾಡುವವರಲ್ಲ. ದೇಶಕ್ಕಾಗಿ ಗಡಿಯಲ್ಲಿ ಕೆಲಸ ಮಾಡುವವರು. ನಾವು ಯಾರಿಗಾದರೂ ಮೋಸ ಮಾಡಿದರೆ ನಮ್ಮನ್ನು ಗಡಿಯಲ್ಲಿ ಗುಂಡಿಟ್ಟು ಕೊಂದಾರು.’ ಹೀಗೆಲ್ಲಾ ಮಾತನಾಡುತ್ತಿದ್ದರು. ಅಲ್ಲದೇ ಮಾತಿನ ಆರಂಭದಲ್ಲಿ ಮತ್ತು ಕೊನೆಗೆ ‘ಜೈಹಿಂದ್’ ಎಂದು ಹೇಳುತ್ತಿದ್ದರು ಎನ್ನುತ್ತಾರೆ
ಯತೀಶ್ ರೈ ಚೆಲ್ಯಡ್ಕ.
ಸುದ್ದಿ ನ್ಯೂಸ್ ಜೊತೆಗೆ ಯತೀಶ್ ರೈಯವರು ತಮಗಾದ ವಂಚನೆಯ ಪ್ರಯತ್ನವನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ. ಈ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವೀಡಿಯೋ ವೀಕ್ಷಿಸಬಹುದು.