ಪುತ್ತೂರು: ಹೊರ ಜಿಲ್ಲೆಯ ಜೆಸಿಬಿ ಮತ್ತು ಹಿಟಾಚಿ ಮಾಲಕರುಗಳು ದಕ್ಷಿಣ ಕನ್ನಡ ಜಿಲ್ಲೆಯ ಕೆಲವರೊಂದಿಗೆ ಸೇರಿಕೊಂಡು ಇಲ್ಲಿನ ಜೆಸಿಬಿ ಹಿಟಾಚಿ ಮಾಲಕರ ಬಗ್ಗೆ ತಪ್ಪು ಮಾಹಿತಿ ನೀಡಿದಲ್ಲದೆ ಅವಾಚ್ಯ ಪದಗಳನ್ನು ಬಳಸಿರುವ ಹಾಗು ನಿಯಮ ಮೀರಿ ಕೆಲಸ ಮಾಡುತ್ತಿರುವ ಕುರಿತು ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ ತಾಲೂಕಿನ ಜೆಸಿಬಿ ಮತ್ತು ಹಿಟಾಚಿ ಮಾಲಕರುಗಳು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಮುಂದೆ ತಮ್ಮ ಸಮಸ್ಯೆಗಳನ್ನು ತೋಡಿಕೊಂಡ ಘಟನೆ ನ.29ರಂದು ನಡೆದಿದೆ. ಶಾಸಕ ಅಶೋಕ್ ಕುಮಾರ್ ರೈ ಅವರು ಈ ಕುರಿತು ಸೋಮವಾರ ಎರಡು ಕಡೆಯವರನ್ನು ಕರೆಸಿ ಮಾತುಕತೆ ನಡೆಸಿ ಪರಿಹಾರ ಸೂಚಿಸುವ ಭರವಸೆಯನ್ನೂ ನೀಡಿದ್ದಾರೆ.
ಹೊರ ಜಿಲ್ಲೆಯ ಜೆಸಿಬಿ ಮತ್ತು ಹಿಟಾಚಿ ಮಾಲಕರು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಎರಡು ಮೂರು ತಿಂಗಳಗು ಸೀಸನ್ನಲ್ಲಿ ಬಂದು ನಮ್ಮ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ. ನಾವು ಸಾಲಮೂಲ ಮಾಡಿಕೊಂಡು ಜೆಸಿಬಿಯಿಂದ ಜೀವನ ಸಾಗಿಸುತ್ತಿರುವಾಗ ತಮ್ಮ ಜೀವನಕ್ಕೆ ಹೊರ ಜಿಲ್ಲೆಯ ಜೆಸಿಬಿ ಮತ್ತು ಹಿಟಾಚಿಗಳಿಂದ ತುಂಬಾ ತೊಂದರೆ ಆಗಿದೆ. ಈ ಕುರಿತು ಪರಿಹಾರ ನೀಡುವಂತೆ ದ.ಕ ಜಿಲ್ಲೆಯ ಜೆಸಿಬಿ ಮತ್ತು ಹಿಟಾಚಿ ಮಾಲಕರ ಸಂಘಟನೆಯ ಸದಸ್ಯರು ಶಾಸಕ ಅಶೋಕ್ ಕುಮಾರ್ ರೈ ಅವರ ಕಚೇರಿಯ ಮುಂದೆ ಜಮಾಯಿಸಿ ಶಾಸಕರು ಬಂದಾಗ ತಮ್ಮ ಮನವಿ ನೀಡಿದರು.
ಈ ಕುರಿತು ಶಾಸಕರು ಮಾತನಾಡಿ ಈಗಾಗಲೇ ಆಟೋ ರಿಕ್ಷಾ, ಇತರೆ ಟೂರಿಸ್ಟ್ ವಾಹನಗಳಲ್ಲಿ ಸಂಘಟನೆ ಇದೆ. ಅದರಲ್ಲೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವ ಕುರಿತು ನಿಯಮಗಳನ್ನು ಅವರವರೇ ಹಾಕಿಕೊಂಡಿದ್ದಾರೆ. ಆದರೆ ಇಂತಹ ವಿಚಾರ ನಿಮಗೆ ಹೊಸದು. ಹಾಗೆಂದು ಎಲ್ಲದಕ್ಕೂ ಪರಿಹಾರವೂ ಇದೆ. ನಿಮ್ಮ ದರದಲ್ಲಿ ಕಡಿಮೆ ಮಾಡಿದರೆ ಒಂದು ಹಂತದ ಪರಿಹಾರ ಸಿಗಬಹುದು ಎಂದರು. ಇದಕ್ಕೆ ಉತ್ತರಿಸಿದ ಜೆಸಿಬಿ ಸಂಘಟನೆಯ ಪ್ರಮುಖರು ದರ ಕಡಿಮೆ ಮಾಡಲು ನಾವು ಸಿದ್ಧರಿದ್ದೇವೆ. ಆದರೆ ಊರಿನವರಿಗೆ ನೀವು ಬೆಂಬಲ ನೀಡಬೇಕೆಂದರು.
ಶಾಸಕರು ಮಾತನಾಡಿ ನೀವು ಸಂಘಟನೆಯ ಮೂಲಕ ಒಂದ ನಿಗದಿತ ದರ ಪಿಕ್ಸ್ ಮಾಡಿ. ಆಗ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು. ಇದನ್ನು ನಾವು ಕೂಡಾ ಒಪ್ಪುತ್ತೇವೆ ಎಂದ ಜೆಸಿಬಿ ಸಂಘಟನೆಯ ಪ್ರಮುಖರು ಹೊರ ಜಿಲ್ಲೆಯಿಂದ ಬರುವುದಕ್ಕೆ ಆಕ್ಷೇಪವಿಲ್ಲ. ಅದರೆ ಮೊದಲು ಸ್ವ-ಜಿಲ್ಲೆಯವರಿಗೆ ಆದ್ಯತೆ ಕೊಡಬೇಕು. ನಮ್ಮ ಊರಿನ ವಾಹನ ಹೊರ ಜಿಲ್ಲೆಗೆ ಹೋದರೆ ಅಲ್ಲಿ ಅವರು ನಮ್ಮ ಮೆಷಿನ್ ಅನ್ನು ಕೆಲಸ ಮಾಡಲು ಬಿಡುವುದಿಲ್ಲ. ಉದಾಹರಣೆಗೆ ಇತೀಚೆಗೆ ಬಂಟ್ವಾಳದ ಮೆಷಿನ್ವೊಂದನ್ನು ಹೊರ ಜಿಲ್ಲೆಯವರು ಹಾನಿ ಮಾಡಿದ್ದಾರೆ. ಒಟ್ಟು ಜೆಸಿಬಿ ಮತ್ತು ಇಟಾಚಿ ಮಾಲಕರುಗಳ ಸಮಸ್ಯೆಗಳನ್ನು ಆಲಿಸಿದ ಶಾಸಕರು ಈ ಕುರಿತು ಸೋಮವಾರ ಎರಡು ಕಡೆಯವರನ್ನು ಕರೆಸಿ ಮಾತುಕತೆ ನಡೆಸಿ ಒಂದು ಪರಿಹಾರ ನೀಡುವ ಭರವಸೆ ನೀಡಿದರು. ಈ ಸಂದರ್ಭ ಪುತ್ತೂರು ತಾಲೂಕು ಜೆಸಿಬಿ ಹಿಟಾಚಿ ಮಾಲಕರ ಸಂಘದ ಅಧ್ಯಕ್ಷ ಜಯಂತ ಬದ್ರೋಡಿ, ಸುಳ್ಯ ತಾಲೂಕು ಜೆಸಿಬಿ ಮತ್ತು ಹಿಟಾಚಿ ಸಂಘದ ಅಧ್ಯಕ್ಷ ಪದ್ಮನಾಭ ಬೀಡು, ಕಡಬ ತಾಲೂಕಿನ ಅಧ್ಯಕ್ಷ ಮನಮೋಹನ್ ರೈ, ಬಂಟ್ವಾಳ ತಾಲೂಕಿನ ಅಧ್ಯಕ್ಷ ರಂಜಿತ್ ರಾವ್ ಸಹಿತ ಉಪಾಧ್ಯಕ್ಷರು ಪುತ್ತೂರು ನಗರ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.