ಪುತ್ತೂರು: ಪುತ್ತೂರಿಗೆ ಎಸ್ ಪಿ ಕಚೇರಿಯನ್ನು ಶಿಫ್ಟ್ ಮಾಡಿ ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಹಲವು ಬಾರಿ ನನ್ನಲ್ಲಿ ಮನವಿ ಮಾಡಿದ್ದರು. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಿ ಎಂದು ಮೇಲಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಆದರೆ ಎಸ್ ಪಿ ಕಚೇರಿ ಶಿಫ್ಟ್ ವಿಚಾರ ಸ್ವಲ್ಪ ವಿಳಂಬವಾಗಬಹುದು. ಆದರೆ ಡಿಪಿಎ (ಜಿಲ್ಲಾ ಸಶಸ್ತ್ರ ಮೀಸಲು ಪಡೆ)ಯನ್ನು ಪುತ್ತೂರಿಗೆ ಸ್ಥಳಾಂತರ ಮಾಡಿ ಎಂದು ಶಾಸಕ ಅಶೋಕ್ ರೈ ಅವರು ಮನವಿ ಮಾಡಿದ್ದು, ಇದನ್ನು ಆದಷ್ಟು ಬೇಗ ಪರಿಗಣಿಸಿ ವ್ಯವಸ್ಥೆ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಭರವಸೆ ನೀಡಿದರು.

ಮಂಗಳೂರಿನಲ್ಲಿ ನಡೆದ ಪೊಲೀಸ್ ವಸತಿಗೃಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೃಹ ಸಚಿವರು ಪುತ್ತೂರು ಶಾಸಕರಿಗೆ ಈ ಭರವಸೆಯನ್ನು ನೀಡಿದ್ದಾರೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮಂಗಳೂರಿನಲ್ಲೇ ಇದ್ದು, ಕಾನೂನು ಸುವ್ಯವಸ್ಥೆ ಅಗತ್ಯ ಬಿದ್ದಲ್ಲಿ ಮಂಗಳೂರಿನಿಂದ ಬರಬೇಕಾಗುತ್ತದೆ. ಸುಮಾರು ಒಂದೂವರೆ ಗಂಟೆ ಪ್ರಯಾಣ ದೂರ ಇರುವ ಕಾರಣ ಈ ಮೀಸಲು ಪಡೆಯನ್ನು ಪುತ್ತೂರಿನಲ್ಲೇ ಸ್ಥಾಪಿಸುವ ವ್ಯವಸ್ಥೆ ಮಾಡಿದರೆ ಉತ್ತಮ ಎಂದು ಅಶೋಕ್ ರೈ ಸಚಿವರ ಗಮನಕ್ಕೆ ತಂದಾಗ ಸಚಿವರು ಅದಕ್ಕೆ ಪೂರಕವಾಗಿ ಸ್ಪಂದನೆ ನೀಡಿದ್ದಾರೆ.