ಸರಕಾರದ ಯೋಜನೆ ಅರ್ಹರಿಗೆ ಸಿಗುವಂತಾಗಲಿ: ಅಶೋಕ್ ಕುಮಾರ್ ರೈ – ಉಪ್ಪಿನಂಗಡಿಯಲ್ಲಿ ಅರ್ಹ ರೈತರಿಗೆ ಸೌಲಭ್ಯ ವಿತರಣೆ

0

ಉಪ್ಪಿನಂಗಡಿ: ರಾಜ್ಯ ಸರಕಾರ ಕೃಷಿಕರ ಅಭಿವೃದ್ಧಿಗಾಗಿ ಹಾಗೂ ಕೃಷಿ ಕಾರ್ಯದಲ್ಲಿ ಆಧುನಿಕತೆಯನ್ನು ಅಳವಡಿಸಿಕೊಳ್ಳುವುದಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳು ಅರ್ಹ ಬಡವರಿಗೆ ಸಿಗುವಂತಾಗಬೇಕು. ಇದಕ್ಕಾಗಿ ಇಲಾಖಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕೆಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.


ಉಪ್ಪಿನಂಗಡಿಯಲ್ಲಿರುವ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ಡಿ.2ರಂದು ನಡೆದ ಅರ್ಹ ರೈತ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಮಹತ್ತರವಾದ ಸುಧಾರಣೆಗಳಾಗುತ್ತಿದ್ದು, ರೈತರು ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. ಕಾರ್ಮಿಕರ ಕೊರತೆಯನ್ನು ನೀಗಿಸಲು ಯಂತ್ರಗಳ ಬಳಕೆಯತ್ತ ಗಮನ ಹರಿಸಬೇಕು. ಸಹಕಾರಿ ತತ್ವದ ಅಡಿಯಲ್ಲಿ ಒಗ್ಗೂಡಿ ಯಾಂತ್ರೀಕೃತ ಕೃಷಿಯತ್ತ ಗಮನಹರಿಸಬೇಕು. ರೈತರಿಗೆ ಬೇಕಾದ ಕೆಲವು ಕೃಷಿ ಸಾಮಗ್ರಿಗಳನ್ನು ಸರಕಾರ ಸಬ್ಸಿಡಿಯಲ್ಲಿ ನೀಡುತ್ತಿದ್ದು, ಕೃಷಿಗೆ ಉತ್ತೇಜನ ನೀಡುವ ಕೆಲಸ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರ ಮಾಡುತ್ತಿದೆ. ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಸರಕಾರದ ಸವಲತ್ತುಗಳು ಕೇವಲ ಶ್ರೀಮಂತ ರೈತರ ಪಾಲಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಅಶೋಕ್ ಕುಮಾರ್ ರೈ, ಸರಕಾರದ ಉದ್ದೇಶ ಬಡ ರೈತರನ್ನು ತಲುಪುವುದಾಗಿದೆ. ಆದರೆ ಬಡ ರೈತರಿಗೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಸವಲತ್ತುಗಳು ಅವರನ್ನು ತಲುಪುತ್ತಿಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕೆಂದರಲ್ಲದೆ, ಕರಾವಳಿಯ ಭಾಗದ ಕೃಷಿಕರಿಂದ ಯಾವುದಕ್ಕೆ ಹೆಚ್ಚಿನ ಬೇಡಿಕೆ ಇದೆ. ಅಂತಹ ಸಾಮಗ್ರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತಂದು ಕೊಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.


ಕೃಷಿ ಇಲಾಖೆ ಪುತ್ತೂರಿನ ಉಪ ಕೃಷಿ ನಿರ್ದೇಶಕರಾದ ಶಿವಶಂಕರ ಬಾನೆಗೊಂಡರ್ ಮಾತನಾಡಿ, ಕೃಷಿ ಇಲಾಖೆಯಲ್ಲಿ ಹಲವು ಸೌಲಭ್ಯಗಳು ಸಹಾಯಧನದಲ್ಲಿ ಲಭ್ಯವಿದ್ದು, ಅನೇಕ ಕೃಷಿಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಬಾರಿ ರಾಜ್ಯಾದ್ಯಂತ ವಿಶೇಷವಾಗಿ ಜಲಸಂರಕ್ಷಣೆಗಾಗಿ ಕೃಷಿ ಹೊಂಡ ನಿರ್ಮಾಣ ಯೋಜನೆ ಜಾರಿಗೆ ಬಂದಿದ್ದು, ಇದರಲ್ಲಿ ಸಾಮಾನ್ಯ ವರ್ಗದವರಿಗೆ 80ಶೇ., ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.90 ಸಹಾಯಧನ ಲಭ್ಯವಿದೆ. ಇದರಲ್ಲಿ 21 ಮೀಟರ್ ಉದ್ದ, 21 ಮೀ. ಅಗಲ ಮತ್ತು ಮೂರು ಮೀಟರ್ ಆಳದ ಕೃಷಿ ಹೊಂಡ ತೋಡಿದರೆ 70 ಸಾವಿರದಷ್ಟು ಸಹಾಯಧನ ಲಭ್ಯವಾಗಲಿದೆ. ಅಲ್ಲದೇ, ಪಿವಿಸಿ ಪೈಪ್‌ಗಳನ್ನು ಹುಲ್ಲು ಕತ್ತರಿಸುವ ಯಂತ್ರ, ಔಷಧಿ ಸಿಂಪಡಣಾ ಯಂತ್ರ, ಸ್ಪಿಂಕ್ಲರ್ ಸೇರಿದಂತೆ ಈ ಬಾರಿ ವಿವಿಸಿ ಪೈಪ್‌ಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಹುಲ್ಲು ಕತ್ತರಿಸುವ ಯಂತ್ರ, ಔಷಧಿ ಸಿಂಪಡಣಾ ಯಂತ್ರ, ಸ್ಪಿಂಕ್ಲರ್, ಪೈಪ್‌ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಕೃಷಿ ಅಧಿಕಾರಿಗಳು ಫಲಾನುಭವಿಗಳ ಆಯ್ಕೆ ಮಾಡುವಾಗ ನಮಗೆ ಮಾಹಿತಿಯೇ ನೀಡುತ್ತಿಲ್ಲ. ಇಂದಿನ ಕಾರ್ಯಕ್ರಮದ ಬಗ್ಗೆ ಕೆಲ ಪತ್ರಿಕಾ ಮಾಧ್ಯಮದವರಿಗೂ ಮಾಹಿತಿ ಇಲ್ಲ ಎಂಬ ಆರೋಪ ಈ ಸಂದರ್ಭ ಕೇಳಿ ಬಂತು. ಈ ಆಕ್ಷೇಪವನ್ನು ಕಂಡು ಅಸಮಾಧಾನಗೊಂಡ ಶಾಸಕರು ಇನ್ನು ಮುಂದೆ ಸವಲತ್ತಿನ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿಯೇ ಫಲಾನುಭವಿಗಳ ಆಯ್ಕೆ ನಡೆಸಬೇಕೆಂದು ತಾಕೀತು ಮಾಡಿದರು.


ವೇದಿಕೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಎಸ್.ಎಸ್. ಮಂಜುನಾಥ್, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ತೌಸೀಫ್ ಯು.ಟಿ., ಜಯಪ್ರಕಾಶ್ ಬದಿನಾರು, ಸಣ್ಣಣ್ಣ, ಅಬ್ದುಲ್ ರಶೀದ್, ಧನಂಜಯ ನಟ್ಟಿಬೈಲ್, ಪ್ರಮುಖರಾದ ಡಾ. ರಾಜಾರಾಮ್ ಕೆ.ಬಿ, ಚಂದ್ರಹಾಸ ಶೆಟ್ಟಿ, ಅಝೀಝ್ ಬಸ್ತಿಕ್ಕಾರ್, ಅಶ್ರಫ್ ಬಸ್ತಿಕ್ಕಾರ್, ಅನಿ ಮಿನೇಜಸ್, ಅಸ್ಕರ್ ಅಲಿ, ಕೃಷ್ಣರಾವ್ ಆರ್ತಿಲ, ಕೈಲಾರ್ ರಾಜಗೋಪಾಲ ಭಟ್, ಲಕ್ಷ್ಮಣ ಗೌಡ ನೆಡ್ಚಿಲ್, ಶಬೀರ್ ಕೆಂಪಿ, ಯೊಗೀಶ್ ಸಾಮಾನಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಅಬ್ದುಲ್ ಮಜೀದ್, ಧರ್ನಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ತಿರುಪತಿ ಎನ್. ಭರಮಣ್ಣನವರ್ ಸ್ವಾಗತಿಸಿದರು. ತಾಂತ್ರಿಕ ಸಹಾಯಕ ಸಾಯಿನಾಥ್, ಲೆಕ್ಕ ಸಹಾಯಕಿ ಅಶ್ವಿನಿ ಸಹಕರಿಸಿದರು.


ರೈತರಿಗೆ ಉಚಿತ ವಿದ್ಯುತ್ ನೀಡಿದ್ದು ಕಾಂಗ್ರೆಸ್
ಬಡವರ, ರೈತರ ಬಗ್ಗೆ ಕಾಳಜಿಯಿರುವುದು ಕಾಂಗ್ರೆಸ್ ಸರಕಾರಕ್ಕೆ ಮಾತ್ರ. ರೈತರಿಗೆ ಉಚಿತ ವಿದ್ಯುತ್ ನೀಡಿರುವುದು ಕೂಡಾ ಅಂದು ಬಂಗಾರಪ್ಪನವರ ನೇತೃತ್ವದ ಕಾಂಗ್ರೆಸ್ ಸರಕಾರ. ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತಂದಿರುವುದು ಕೂಡಾ ಕಾಂಗ್ರೆಸ್ ಸರಕಾರ. ಈಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದು ಕೂಡಾ ಬಡವರ ಮೇಲಿನ ಕಾಳಜಿಯಿಂದ ಎಂದ ಅವರು, ಸರಕಾರಿ ಯೋಜನೆಗಳನ್ನು ಪಡೆಯುವವಾಗ ಯಾರೂ ಕೂಡಾ ಸರಕಾರಿ ಅಧಿಕಾರಿಗಳಿಗೆ ಲಂಚ ಕೊಡಲು ಹೋಗಬೇಡಿ. ಅವರು ಲಂಚಕ್ಕೆ ಬೇಡಿಕೆಯಿರಿಸಿದರೆ ನನಗೆ ದೂರು ನೀಡಿ. ನನ್ನ ಶಾಸಕತ್ವದ ಅವಧಿಯಲ್ಲಿ ಯಾವುದೇ ರಾಜಕೀಯ ಬೇಧ ಮಾಡದೇ ಅಕ್ರಮ- ಸಕ್ರಮ, 94ಸಿ ಯನ್ನು ನಾನು ಮಂಜೂರಾತಿ ಮಾಡಿಕೊಡುತ್ತೇನೆ. ಆದ್ದರಿಂದ ಎಲ್ಲಾ ಪಕ್ಷದವರು ನನ್ನ ಬಳಿಗೆ ಬರಬಹುದು ಎಂದು ಅಶೋಕ್ ಕುಮಾರ್ ರೈ ತಿಳಿಸಿದರು. ಈ ಸಂದರ್ಭ 94ಸಿ ಯಡಿ ಜಾಗ ಮಂಜೂರಾತಿ ಮಾಡಲು ಗ್ರಾಮ ಸಹಾಯಕರು 60 ಸಾವಿರ ರೂ. ಲಂಚ ಕೇಳಿದ್ದಾರೆಂದು ಮಹಿಳೆಯೋರ್ವರು ದೂರಿದ್ದು, ತಕ್ಷಣವೇ ಗ್ರಾಮ ಸಹಾಯಕನಿಗೆ ದೂರವಾಣಿ ಕರೆ ಮಾಡಿದ ಶಾಸಕರು, ಈ ಬಗ್ಗೆ ಪ್ರಶ್ನಿಸಿ, ಆತನನ್ನು ತರಾಟೆಗೆ ತೆಗೆದುಕೊಂಡರಲ್ಲದೇ, ಇನ್ನು ಮುಂದಕ್ಕೆ ಈ ರೀತಿ ಮಾಡಬಾರದೆಂದು ಎಚ್ಚರಿಸಿದರು. ಆ ಮಹಿಳೆಯ ಕಡತವನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ತಾಕೀತು ಮಾಡಿದರು.

LEAVE A REPLY

Please enter your comment!
Please enter your name here