ದೇವರನ್ನು ಮತ್ತು ದೇಶವನ್ನು ಪ್ರೀತಿಸಿ – ಶ್ರೀ ಕಟೀಲು ಆಸ್ರಣ್ಣ
ಆಲಂಕಾರು: ಪೆರಾಬೆ ಗ್ರಾಮದ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಡಿ.5ರಿಂದ ಡಿ.7ರ ತನಕ ಚೌತಿ,ಪಂಚಮಿ, ಷಷ್ಠಿ ಉತ್ಸವ ನಡೆಯಲಿದೆ. ಡಿ.5 ರಂದು ಬೆಳಿಗ್ಗೆ ಚೌತಿ ಉತ್ಸವ, ಗಣಪತಿ ಹೋಮ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ದೇವರಗುಡ್ಡೆ, ಪೂಂಜಾ, ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಬಲ್ಯ ಇವರಿಂದ ಭಜನೆ ನಡೆದು
ಮಧ್ಯಾಹ್ನ ಗಂಟೆ 12:00 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ ಸಾಂಸ್ಕೃತಿಕ ಕಲಾ ವೇದಿಕೆ ಉದ್ಘಾಟನೆ ನಡೆಯಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆರ್ಚಕರಾದ ಶ್ರೀ ಕಟೀಲ್ ಅಸ್ರಣ್ಣ ನವರು ಸಾಂಸ್ಕೃತಿಕ ಕಲಾ ವೇದಿಕೆ ಉದ್ಘಾಟಿಸಿ ಮಾತನಾಡಿ, ಒಂದು ದೀಪದಿಂದ ಇನ್ನೊಂದು ದೀಪ ಹೇಗೆ ಬೆಳಗುತ್ತದೆಯೂ ಹಾಗೇನೇ ಒಂದು ದೇವತಾ ಕ್ಷೇತ್ರದಿಂದ ಇನ್ನೊಂದು ದೇವತಾ ಕ್ಷೇತ್ರ ಬೆಳಗಬೇಕು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಯಕ್ಷಗಾನದ ಮೂಲಕ ಆರು ತಿಂಗಳು ಉತ್ಸವ ನಡೆಯುತ್ತದೆ. ದೇವರು ಗರ್ಭಗುಡಿಯ ಒಳಗೆ ಮಾತ್ರ ಇರುವುದಲ್ಲ, ಎಲ್ಲಾ ಕಡೆ ದೇವರು ಇದ್ದಾರೆ ಎನ್ನುವ ಸತ್ಯವನ್ನು ನಾವು ಅರಿತುಕೊಳ್ಳಬೇಕು . ದೇವರು ಮತ್ತು ದೇಶವನ್ನು ನಾವು ಪ್ರೀತಿಸಬೇಕು ಹಾಗು ದುರಚಾರ ಹಾಗು ಭ್ರಷ್ಟಾಚಾರವನ್ನು ವರ್ಜಿಸಬೇಕು. ಇವತ್ತು ದುರಚಾರ ಹಾಗು ಭ್ರಷ್ಟಾಚಾರದಿಂದ ದೇಶ ಅಭಿವೃದ್ಧಿಗೊಳ್ಳಲು ಸಾಧ್ಯವಿಲ್ಲ. ಭ್ರಷ್ಟಾಚಾರದಲ್ಲಿ ಜನರು ಶಪಿಸಿ ನೀಡಿದ ದುಡ್ಡನ್ನು ಪಡೆದ ವ್ಯಕ್ತಿಯು ಎಂದು ಸುಖವಾಗಿ ಬದುಕಲು ಸಾಧ್ಯವಿಲ್ಲ ಯಾಕೆಂದರೆ ಜನರ ಶಾಪ ಅವರ ನಿವೃತ್ತ ಜೀವನದಲ್ಲಿ ತಟ್ಟುತ್ತದೆ ಎಂದು ತಿಳಿಸಿದರು. ಪ್ರಕೃತಿ ಉಳಿಯ ಬೇಕಾದರೆ ನಾವು ದೇವರನ್ನು ಪೂಜಿಸಬೇಕು. ಹಿಂದುಗಳ ಎಲ್ಲಾ ನಂಬಿಕೆಗಳಲ್ಲಿ ವೈಜ್ಞಾನಿಕ ಹಿನ್ನಲೆ ಇದೆ. ದೇವರಿಗೆ ಎಂದು ದುಡ್ಡು ಬೇಡ ಅವರಿಗೆ ಬೇಕಾದದ್ದು ನಿಷ್ಕಲ್ಮಶ ಭಕ್ತಿ ಮತ್ತು ನಿಷ್ಠೆ ಅದನ್ನು ನಾವು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಾಂಸ್ಕೃತಿಕ ಕಲಾವೇದಿಕೆ ಉದ್ಘಾಟನೆಗೊಂಡ ಈ ಸಂದರ್ಭದಲ್ಲಿ ದೇವರ ಅನುಗ್ರಹದಿಂದ ಒಳ್ಳೆಯ ಕೆಲಸ ಕಾರ್ಯಗಳು ಈ ವೇದಿಕೆಯಲ್ಲಿ ನಡೆಯಲಿ ಎಂದು ತಿಳಿಸಿ ಶುಭಹಾರೈಸಿದರು.
ಉಡುಪಿ ಶ್ರೀ ಭಾರತೀಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ರಾಜಶೇಖರ ಹೆಬ್ಬಾರರವರು ಮಾತನಾಡಿ ದೇವರ ಸೇವೆ ಮಾಡಬೇಕಾದರೆ ಹಿಂದಿನ ಜನ್ಮದ ಪುಣ್ಯದ ಫಲಬೇಕು. ನಮ್ಮ ಜೀವನದಲ್ಲಿ ಕಾಮ, ಕ್ರೋದ, ಲೋಭ, ಮಧ, ಮತ್ಸಾರ, ಮೋಹ ಎನ್ನುವ ಆರು ಷಡ್ ವೈರಿಗಳನ್ನು ನಿಯಮಿತದಲ್ಲಿ ಇಟ್ಟುಕೊಂಡರೆ ನಮಗೆ ಆರೋಗ್ಯ ವೃದ್ದಿಯಾಗುತ್ತದೆ ಹಾಗು ನಮ್ಮ ಜೀವನದಲ್ಲಿ ಸಂಸ್ಕಾರ,ಸಂಸ್ಕೃತಿಯನ್ನು ರೂಢಿಸಿಕೊಂಡು ನಾವು ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಬೇಕು. ಜನ್ಮದಲ್ಲಿ ಅತ್ಯಂತ ಶ್ರೇಷ್ಠ ಜನ್ಮ ಮನುಷ್ಯ ಜನ್ಮ ಈ ಮಾನವ ಜನ್ಮದಲ್ಲಿ ನಾವೆಲ್ಲರೂ ಒಟ್ಟು ಸೇರಿ ಭಗವಂತನ ಸೇವೆ ಮಾಡಿ ಕೃತರ್ಥರಾಗುವ ಎಂದು ಹೇಳಿದ ಅವರು ಕಾರ್ಯಕ್ರಮಕ್ಕೆ ಶುಭಾಹಾರೈಸಿದರು. ವೇದಿಕೆಯಲ್ಲಿ ಶ್ರೀ ಸೋಮನಾಥೇಶ್ವರ ದೇವಸ್ಥಾನ ಇರಾದ ಆಡಳಿತ ಮೊಕ್ತೇಸರರಾದ ದೇವಿಪ್ರಸಾದ್ ಶೆಟ್ಟಿ,ಇ.ಪಿ.ಕೆ ನಾಯರ್ ಕನ್ಸ್ಟ್ರಕ್ಷನ್ ಸೂರಜ್ ನಾಯರ್, ದೇವಸ್ಥಾನದ ಖಾಯಂ ಟ್ಟಸ್ಟಿ ಯಂ .ರಾಮಮೋಹನ ರೈ ಸುರುಳಿ, ಟ್ರಸ್ಟ್ ನ ಅಧ್ಯಕ್ಷರಾದ ಕೃಷ್ಣಕುಮಾರ ಅತ್ರಿಜಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರಶಾಂತ ರೈ ಮನವಳಿಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಇಂಚರಾ ಎಲ್.ಶೆಟ್ಟಿ, ಪೃಥ್ವಿ ಆರ್ ರೈ ಪ್ರಾರ್ಥಿಸಿ, ಟ್ರಸ್ಟಿ ಪೂವಪ್ಪ ನಾಯ್ಕ್ ಶಾಂತಿಗುರಿ ಕಾರ್ಯಕ್ರಮ ನಿರೂಪಿಸಿ, ಸಾಂಸ್ಕೃತಿಕ ಕಲಾವೇದಿಕೆಯ ಅಧ್ಯಕ್ಷ ಪ್ರದೀಪ್ ರೈ ಮನವಳಿಕೆ ವಂದಿಸಿದರು. ನಂತರ ರಾತ್ರಿ ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು 3ನೇ ಮೇಳದವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಡಿ.6 ಶುಕ್ರವಾರ
ಬೆಳಗ್ಗೆ ಪಂಚಮಿ ಉತ್ಸವ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸರ್ವಸೇವೆ, ನಾಗಾರಾಧನೆ, ಶ್ರೀ ಆದಿಶಕ್ತಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಶರವೂರು, ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಕಡಬ ಇವರಿಂದ ಭಜನೆ ನಡೆದು ಮಧ್ಯಾಹ್ನ ಗಂಟೆ12-೦೦ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು, ಸಂಜೆ 5:00 ರಿಂದ ಸಾಮೂಹಿಕ ಕುಂಕುಮಾರ್ಚನೆ, ರಾತ್ರಿ ಗಂಟೆ 7:30 ರಿಂದ ಶ್ರೀ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ರಾತ್ರಿ ಗಂಟೆ 9-೦೦ಕ್ಕೆ : ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಡಿ.7 ಶನಿವಾರ ಬೆಳಗ್ಗೆ ಗಂಟೆ 8-೦೦ರಿಂದ: ಷಷ್ಠಿ ಉತ್ಸವ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ನವಕಲಶಾಭಿಷೇಕ, ಸರ್ವಸೇವೆ, ಮಂತ್ರಾಕ್ಷತೆ, ಬ್ರಾಹ್ಮಣ ಸುಹಾಸಿನಿ ಆರಾಧನೆ, ಮಾಸಿಕ ಗಣಪತಿ ಹೋಮ, ಸುರುಳಿ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಭಕ್ತಾಧಿಗಳಿಂದ ,ಶ್ರೀ ಶಾರದಾ ಭಜನಾ ಮಂಡಳಿ ಕುಂತೂರು ಇವರಿಂದ ಮಕ್ಕಳ ಕುಣಿತ ಭಜನೆ, ಬೆಳಗ್ಗೆ ಗಂಟೆ 10:30 ರಿಂದ ಧಾರ್ಮಿಕ ಪ್ರವಚನ ವಿದ್ವಾನ್ ಕಿರಣ್ ಕುಮಾರ ಪಡುಪಣಂಬೂರು, ಮಧ್ಯಾಹ್ನ ಗಂಟೆ 12-೦೦ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ ಗಂಟೆ 6-೦೦ಕ್ಕೆ : ಕುಣಿತ ಭಜನೆ , ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಶಿವಾರು ಇವರಿಂದ ರಾತ್ರಿ ಗಂಟೆ 8-೦೦ಕ್ಕೆ : ರಂಗಪೂಜೆ, ಮಾಸಿಕ ದುರ್ಗಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.