ಕಡಬ: ಕಡಬ ಪ್ರಖಂಡ ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಹಾಗೂ ಬಿಳಿನೆಲೆ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಧರ್ಮ ಜಾಗೃತಿಗಾಗಿ ನಮ್ಮ ನಡೆ ಕುಕ್ಕೆ ಸುಬ್ರಹ್ಮಣ್ಯ ನೆಡೆಗೆ ಎನ್ನುವ ಘೋಷ ವಾಕ್ಯದೊಂದಿಗೆ ಆರನೇ ವರ್ಷದ ಪಾದಯಾತ್ರೆ ಹಾಗೂ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ಶುಕ್ರವಾರ ಜರುಗಿತು.
ಮುಂಜಾನೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ವಠಾರದಿಂದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥ ಬೀದಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಶಶಾಂಕ್ ಭಟ್ ಅವರು, ತಪಸ್ಸು ಎಂದರೆ ನಮ್ಮ ಪಾಲಿನ ನಿಜವಾದ ಕರ್ತವ್ಯವನ್ನು ನಾವು ಮಾಡುತ್ತೇವೆಯೋ ಅದು ನಿಜವಾದ ತಪಸ್ಸು. ನಮ್ಮ ವೃತ್ತಿಯಲ್ಲಿ ಭಗವಂತನನ್ನು ಕಾಣಬೇಕು. ಎಲ್ಲಾ ಧರ್ಮ-ಕರ್ಮಗಳನ್ನು ಬದಿಗಿಟ್ಟು ಶರೀರವನ್ನು ರಕ್ಷಣೆ ಮಾಡಿ. ಯಾಕೆಂದರೆ ಧರ್ಮ ಸಾಧನೆ ಮಾಡಲು ಏಕೈಕ ಮಾರ್ಗ ಇರುವುದು ಶರೀರ ಅದನ್ನು ರಕ್ಷಣೆ ಮಾಡಬೇಕಿದೆ ಎಂದ ಅವರು ಪಾದಯಾತ್ರೆ ಕೈಗೊಳ್ಳುವುದು ಆರೋಗ್ಯಕ್ಕೂ ಉತ್ತಮ ಎಂದರು.
ನಾವು ನಮ್ಮ ಜೀವನವನ್ನು ರಾಷ್ಟ್ರ ರಕ್ಷಣೆಗೆ ಮುಡಿಪಾಗಿಟ್ಟುಕೊಳ್ಳಬೇಕು. ವೈಯಕ್ತಿಕ ಕಾರಣಗಳನ್ನು ಬದಿಗಿಟ್ಟು ರಾಷ್ಟ್ರ ರಕ್ಷಣೆಗೆ ನಮ್ಮನ್ನು ಮೀಸಲಿಡೋಣ ಎಂದರು. ದೇಶದ, ಧರ್ಮದ ಬಗ್ಗೆ ಚಿಂತಿಸದೆ ಯಾವುದೋ ವೈಯಕ್ತಿಕ ಲಾಭವನ್ನು ನೋಡಿಕೊಂಡು ಯಾವುದೋ ಆಮೀಷಗಳಿಗೆ ಬಲಿಯಾಗಿ ಧರ್ಮ ರಕ್ಷಣೆಯನ್ನು, ರಾಷ್ಟ್ರ ಚಿಂತನೆಯನ್ನು ದೂರವಿಟ್ಟಲ್ಲಿ ನಾವು ಇವತ್ತು ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ ಎಂದರು.
ಕಡಬ ಪ್ರಖಂಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ವಿಹಿಂಪ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಸದಸ್ಯ ಸತೀಶ್ ಕೂಜುಗೋಡು, ಮಾಜಿ ಸದಸ್ಯ ಮನೋಜ್ ಸುಬ್ರಹ್ಮಣ್ಯ, ಕಡಬ ಭಜನಾ ಪರಿಷತ್ ಅಧ್ಯಕ್ಷ ಸುಂದರ ಬಿಳಿನೆಲೆ, ವಾಸುದೇವಾ ಭಟ್ ಕಡ್ಯ ಮತ್ತಿತರರು ಉಪಸ್ಥಿತರಿದ್ದರು. ಉಮೇಶ್ ಸಾಯಿರಾಮ್ ಸ್ವಾಗತಿಸಿದರು. ರಮೇಶ್ ಅಡೀಲು ವಂದಿಸಿದರು.
ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಡಬ ಶ್ರೀನಿವಾಸ ರೈ ಅವರನ್ನು ಸನ್ಮಾನಿಸಲಾಯಿತು. ಕಡಬದಲ್ಲಿ ಧಾರ್ಮಿಕ ಮುಂದಾಳು ಬಾಲಕೃಷ್ಣ ಡಿ.ಕೋಲ್ಪೆ ಪಾದಯಾತ್ರೆಗೆ ಚಾಲನೆ ನೀಡಿದರು.