ಪುತೂರು: ನಗರಸಭೆ ವ್ಯಾಪ್ತಿಯಲ್ಲಿ ಕೆಟ್ಟು ಹೋದ ರಸ್ತೆಗಳ ತೇಪೆ ಕಾರ್ಯ ಡಿ.11ರಂದು ಆರಂಭಗೊಂಡಿದೆ. ಪುತ್ತೂರು ದರ್ಬೆಯಲ್ಲಿ ತೇಪೆ ಕಾರ್ಯದ ವೇಳೆ ನಗರಸಭೆ ಅಧ್ಯಕ್ಷೆ ಲೀಲಾವತಿ ಕೃಷ್ಣನಗರ, ಉಪಾಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅವರು ಸ್ಥಳೀಯ ಆಟೋ ರಿಕ್ಷಾಚಾಲಕರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದರು.
ನಗರಸಭೆ ವ್ಯಾಪ್ತಿಯ ದರ್ಬೆ ಜಂಕ್ಷನ್ ನಿಂದ ಬೊಳುವಾರು ತನಕ, ಎಪಿಎಂಸಿ ಮುಖ್ಯರಸ್ತೆ ಆದರ್ಶ ಆಸ್ಪತ್ರೆಯಿಂದ ರೈಲ್ವೇ ಸೇತುವೆ ತನಕ, ವಿವೇಕಾನಂದ ಕಾಲೇಜು ಬಳಿಯಿಂದ ಪಡೀಲು ತನಕ ಮತ್ತು ಸಾಲ್ಮರದಿಂದ ಬೆದ್ರಾಳ ತನಕ ಡಾಮರು ರಸ್ತೆಗಳು ಅಲ್ಲಲ್ಲಿ ಗುಂಡಿ ಬಿದ್ದು ತೀರ ಹದಗಟ್ಟಿರುವುದರಿಂದ ಸದರಿ ಗುಂಡುಗಳಿಗೆ ತೇಪೆ ಹಾಕುವ ಕಾಮಗಾರಿಗೆ ರೂ. 9.25 ಲಕ್ಷ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಕರೆದಿರುವ ಕುರಿತು ಇತ್ತೀಚೆಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಅದೇ ರೀತಿ ಬಲ್ನಾಡು ಉಜ್ರುಪಾದೆ ಕಡೆಯೂ ತೇಪೆ ಕಾರ್ಯಕ್ಕೆ ರೂ. 6.75ಲಕ್ಷಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಇದೀಗ ದರ್ಬೆಯಲ್ಲಿ ತೇಪೆ ಕಾರ್ಯ ಆರಂಭಗೊಂಡಿದೆ.
ಈ ನಡುವೆ ನ.29ಕ್ಕೆ ತೇಪೆ ಕಾರ್ಯ ತಕ್ಷಣ ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ನಗರಸಭೆ ಅಧ್ಯಕ್ಷೆ ಲೀಲಾವತಿ ಕೃಷ್ಣನಗರ ಅವರು ಪೌರಾಯುಕ್ತರ ಉಪಸ್ಥಿತಿಯಲ್ಲಿ ಸೂಚನೆ ನೀಡಿದ್ದರು. ಆದರೆ ಆ ಸಂದರ್ಭ ವಾಯುಭಾರ ಕುಸಿತದಿಂದಾಗಿ ಮಳೆ ಬಂದ ಹಿನ್ನೆಲೆಯಲ್ಲಿ ತೇಪೆ ಕಾರ್ಯ ಮಂದೂಡಲಾಗಿತ್ತು. ಇದೀಗ ಬಿಸಿಲು ಬಂದ ಹಿನ್ನೆಲೆಯಲ್ಲಿ ಮತ್ತೆ ತೇಪೆ ಕಾರ್ಯ ಆರಂಭಿಸುವಂತೆ ಅಧ್ಯಕ್ಷರು ಸೂಚನೆ ನೀಡಿದಂತೆ ಡಿ.11ರಂದು ತೇಪೆ ಕಾರ್ಯ ಆರಂಭಗೊಂಡಿದೆ. ಈ ಸಂದರ್ಭ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಸ್ಥಳೀಯ ರಿಕ್ಷಾ ಚಾಲಕರಾದ ದೇವಪ್ಪ ಗೌಡ ಮತ್ತು ರಿಕ್ಷಾ ಪಾರ್ಕಿನ ಸದಸ್ಯರು ಉಪಸ್ಥಿತರಿದ್ದರು.