ಒಳಮೊಗ್ರು ಗ್ರಾಪಂ ಸಾಮಾನ್ಯ ಸಭೆ : ಗ್ರಾಮದಲ್ಲಿರುವ ಸರಕಾರಿ ಭೂಮಿಯ ವಿವರ ನೀಡುವಂತೆ ಕಂದಾಯ ಇಲಾಖೆಗೆ ಮನವಿ

0

ಪುತ್ತೂರು: ಸಾರ್ವಜನಿಕ ಉದ್ದೇಶಗಳಿಗಾಗಿ ಒಳಮೊಗ್ರು ಗ್ರಾಮದಲ್ಲಿರುವ ಸರಕಾರಿ ಭೂಮಿಯ ವಿವರ ನೀಡುವಂತೆ ಕಂದಾಯ ಇಲಾಖೆಗೆ ಬರೆದುಕೊಳ್ಳುವುದು ಎಂದು ಒಳಮೊಗ್ರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ದ.10 ರಂದು ಗ್ರಾಪಂ ಕಛೇರಿಯಲ್ಲಿ ನಡೆಯಿತು.

ಸಾರ್ವಜನಿಕ ಅರ್ಜಿಯೊಂದರ ಬಗ್ಗೆ ಚರ್ಚೆ ನಡೆಸಲಾಗಿ ವಿಷಯ ಪ್ರಸ್ತಾಪಿಸಿದ ಮಹೇಶ್ ರೈ ಕೇರಿಯವರು ಸರಕಾರಿ ಭೂಮಿಯ ಅತಿಕ್ರಮಣ ನಡೆಯುತ್ತಿರುವ ಬಗ್ಗೆ ಪಂಚಾಯತ್‌ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಸರಕಾರಿ ಭೂಮಿಗಳ ರಕ್ಷಣೆಯನ್ನು ಮಾಡಬೇಕಾದ ಅಗತ್ಯತೆ ಇದೆ ಎಂದರು. ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಶೀನಪ್ಪ ನಾಯ್ಕರವರು, ಸರಕಾರಿ ಭೂಮಿ ಎಂದು ಪಂಚಾಯತ್‌ಗೆ ನಿರ್ಣಯ ಮಾಡಲು ಸಾಧ್ಯವಿಲ್ಲ ಇದನ್ನು ಕಂದಾಯ ಇಲಾಖೆ ಮಾಡಬೇಕು ಎಂದು ಹೇಳಿದರು. ಈ ಬಗ್ಗೆ ಕೆಲಹೊತ್ತು ಚರ್ಚೆ ನಡೆಯಿತು.

ಮಧ್ಯೆ ಪ್ರವೇಶಿಸಿದ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಗ್ರಾಮ ಆಡಳಿತ ಅಧಿಕಾರಿ ಸುಮನ್‌ರವರನ್ನು ಸಭೆಗೆ ಕರೆಸಿ, ಗ್ರಾಮದಲ್ಲಿರುವ ಸರಕಾರಿ ಭೂಮಿಯ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡರು ಆದರೆ ತಕ್ಷಣಕ್ಕೆ ಅವರಲ್ಲಿ ಈ ಬಗ್ಗೆ ಮಾಹಿತಿ ಇಲ್ಲದೇ ಇರುವುದರಿಂದ ಮನೆ ನಿವೇಶನ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕಾಗಿ ಗ್ರಾಮದಲ್ಲಿರುವ ಸರಕಾರಿ ಜಾಗದ ವಿವರ ನೀಡುವಂತೆ ಕಂದಾಯ ಇಲಾಖೆಗೆ ಬರೆದುಕೊಳ್ಳುವ ಎಂದು ತಿಳಿಸಿದರು. ಗ್ರಾಮದ 2 ನೇ ವಾರ್ಡ್‌ನಲ್ಲಿಯೂ ಸುಮಾರು 56 ಹೆಕ್ಟೆರ್ ಸರಕಾರಿ ಜಾಗವಿದ್ದು ಇದನ್ನು ಕೂಡ ಗ್ರಾ.ಪಂ ಉದ್ದೇಶಕ್ಕಾಗಿ ನೀಡುವಂತೆ ಕಂದಾಯ ಇಲಾಖೆಗೆ ಬರೆದುಕೊಳ್ಳಬೇಕು ಎಂದು ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಹೇಳಿದರು. ಅದರಂತೆ ನಿರ್ಣಯಿಸಲಾಯಿತು.


ಅಪಘಾತ ವಲಯ-ತಡೆಬೇಲಿ ನಿರ್ಮಾಣಕ್ಕೆ ನಿರ್ಣಯ
ಕುಂಬ್ರ ಜಂಕ್ಷನ್‌ನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ವಾಹನಗಳು ಬೆಳ್ಳಾರೆ ರಸ್ತೆಯಿಂದ ರಿಕ್ಷಾ ನಿಲ್ದಾಣದೊಳಗೆ ಸಾಗಿ ಸುಳ್ಯ ಹೆದ್ದಾರಿಗೆ ಸಂಪರ್ಕ ಪಡೆದುಕೊಳ್ಳುವುದನ್ನು ನಿರ್ಬಂಧಿಸುವುದು ಹಾಗೇ ಸುಳ್ಯ ರಸ್ತೆಯಿಂದಲೂ ಬೆಳ್ಳಾರೆ ರಸ್ತೆಗೆ ಈ ದಾರಿಯಲ್ಲಿ ವಾಹನ ಸಂಚಾರವನ್ನು ತಡೆ ಹಿಡಿಯುವುದು ಅದಕ್ಕಾಗಿ ಸದಾಶಿವರವರ ಹೂವಿನ ಅಂಗಡಿ ಪಕ್ಕ ತಡೆಬೇಲಿ ನಿರ್ಮಿಸುವುದು ಎಂದು ನಿರ್ಣಯಿಸಲಾಯಿತು. ಬೆಳ್ಳಾರೆ ರಸ್ತೆಯಿಂದ ಬರುವ ಎಲ್ಲಾ ವಾಹನಗಳು ಕೂಡ ಕುಂಬ್ರ ಜಂಕ್ಷನ್‌ನ ಅಶ್ವತ್ಥ ಕಟ್ಟೆಗೆ ಸುತ್ತುಹೊಡೆದು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಪಡೆದುಕೊಳ್ಳಬೇಕು ಹಾಗೇ ರಾಷ್ಟ್ರೀಯ ಹೆದ್ದಾರಿಯಿಂದ ಬರುವ ವಾಹನಗಳು ಕೂಡ ಜಂಕ್ಷನ್‌ಗೆ ಸುತ್ತುಹೊಡೆದು ಬೆಳ್ಳಾರೆ ರಸ್ತೆಗೆ ಸಂಪರ್ಕ ಪಡೆದುಕೊಳ್ಳಬೇಕು ತಪ್ಪಿಯೂ ಸದಾಶಿವರವರ ಹೂವಿನ ಅಂಗಡಿಯ ಪಕ್ಕದಿಂದ ತಿರುವು ಪಡೆದುಕೊಳ್ಳಬಾರದು ಇದರಿಂದಲೇ ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂಬ ವಿಚಾರವನ್ನು ಸದಸ್ಯರು ಸಭೆಗೆ ತಿಳಿಸಿದರು.
ಗ್ರಾಮದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತಾ ಸಿಬ್ಬಂದಿಯೋರ್ವರನ್ನು ನೇಮಕ ಮಾಡಬೇಕು ಎಂದು ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಕೇಳಿಕೊಂಡರು. ಆಶಾ ದೀಪ ಸಹಾಯ ಹಸ್ತ ಟ್ರಸ್ಟ್‌ನವರು ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದು ಮೂರು ಕಡೆಗಳಲ್ಲಿ ನಾಮಫಲಕ ಅಳವಡಿಕೆಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಲಾಗಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಾಗವನ್ನು ನೋಡಿಕೊಂಡು ಅನುಮತಿ ನೀಡುವಂತೆ ಅಧ್ಯಕ್ಷರು ತಿಳಿಸಿದರು.


ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸಭೆಯಲ್ಲಿ ಸದಸ್ಯರುಗಳಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಸಿರಾಜುದ್ದೀನ್, ಚಿತ್ರಾ, ಶಾರದಾ, ಸುಂದರಿ, ನಳಿನಾಕ್ಷಿ, ವನಿತಾ ಕುಮಾರಿ, ರೇಖಾ ಯತೀಶ್, ಪ್ರದೀಪ್, ಲತೀಫ್ ಕುಂಬ್ರ, ಮಹೇಶ್ ರೈ ಕೇರಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ಸ್ವಾಗತಿಸಿ, ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಓದಿದರು. ಕಾರ್ಯದರ್ಶಿ ಜಯಂತಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ಕೇಶವ, ಜಾನಕಿ, ಗುಲಾಬಿ, ಲೋಕನಾಥ, ಮೋಹನ್ ಸಹಕರಿಸಿದ್ದರು.

‘ ಸರಕಾರಿ ಭೂಮಿಯ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುವುದು ಕಂದಾಯ ಮತ್ತು ಪಂಚಾಯತ್‌ನ ಕರ್ತವ್ಯವಾಗಿದೆ. ಮನೆ ನಿವೇಶನ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡುವ ಸಲುವಾಗಿ ಗ್ರಾಮದಲ್ಲಿರುವ ಸರಕಾರಿ ಜಾಗದ ಬಗ್ಗೆ ವಿವರ ನೀಡುವಂತೆ ಕಂದಾಯ ಇಲಾಖೆಗೆ ಬರೆದುಕೊಳ್ಳಲಾಗುವುದು.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ

LEAVE A REPLY

Please enter your comment!
Please enter your name here