ಬಳಂಜದ ‘ಭ್ರಷ್ಟಾಚಾರ ಮುಕ್ತ, ನಮ್ಮ ಊರು ನಮ್ಮ ಹೆಮ್ಮೆ’ ಕಾರ್ಯಕ್ರಮ ತಾಲೂಕಿಗೆ ಹರಡುತ್ತಿದೆ-‘ಭ್ರಷ್ಟಾಚಾರ ಮುಕ್ತ ನಮ್ಮ ಬೆಳ್ತಂಗಡಿ ನಮ್ಮ ಹೆಮ್ಮೆ ತಾಲೂಕು’ ಆಗಲು ಶಾಸಕ ಪೂಂಜರು ಮನಸ್ಸು ಮಾಡಲಿ, ನೇತೃತ್ವ ವಹಿಸಲಿ

0

ಶಾಸಕ ಪೂಂಜರೇ, ನೀವು ಬೆಳ್ತಂಗಡಿಯಲ್ಲಿ ಭ್ರಷ್ಟಾಚಾರ ನಿಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದ್ದೀರಿ, ಸುದ್ದಿ ಮಾಧ್ಯಮದಿಂದ ಅದಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದೇವೆ. ನಿಮ್ಮ ಹೋರಾಟ ಯಶಸ್ವಿಯಾದರೆ ಲಂಚದ ಸಂಕಷ್ಟದಿಂದ ಜನರು ಪಾರಾಗಲಿದ್ದಾರೆ. ಬೆಳ್ತಂಗಡಿಯ ಹಳ್ಳಿ-ಹಳ್ಳಿಗಳು ಅಭಿವೃದ್ಧಿಯಾಗಲಿದೆ. ನೀವು ಬೆಳ್ತಂಗಡಿ ಕಂಡ ಅತ್ಯಂತ ಉತ್ತಮ ಶಾಸಕರಾಗಿ ಪರಿಗಣಿಸಲ್ಪಡುತ್ತೀರಿ. ಬಂಗೇರರು 5 ಸಲ ಗೆದ್ದಿದ್ದರೆ ನೀವು ಅವರನ್ನು ಮೀರಿ ಜೀವಮಾನವಿಡೀ ಶಾಸಕರಾಗಿ ಉಳಿಯುತ್ತೀರಿ. ನೀವು ಪಕ್ಷೇತರರಾಗಿ ನಿಂತರೂ ಯಾವುದೇ ಪಕ್ಷದಿಂದ ನಿಂತರೂ ಹಣ ಹಂಚದೇ ಶಾಸಕರಾಗುತ್ತೀರಿ. ಹಾಗೆ ಆಗಬೇಕಾದರೆ, ನಿಮ್ಮ ಹೋರಾಟ ಯಶಸ್ವಿಯಾಗಬೇಕಾದರೆ ಬೆಳ್ತಂಗಡಿಯ ಗ್ರಾಮ-ಗ್ರಾಮಗಳಲ್ಲಿ ‘ಭ್ರಷ್ಟಾಚಾರ ಮುಕ್ತ ನಮ್ಮ ಗ್ರಾಮ, ನಮ್ಮ ಹೆಮ್ಮೆ’ ಕಾರ್ಯಕ್ರಮ ನಡೆಯಬೇಕು. ಆ ಕಾರ್ಯಕ್ರಮಗಳ ನೇತೃತ್ವ ಶಾಸಕರಾದ ನೀವು ವಹಿಸಿಕೊಳ್ಳಬೇಕು.


ಬಳಂಜ ಗ್ರಾಮದಲ್ಲಿ ನಮ್ಮ ಊರು ನಮ್ಮ ಹೆಮ್ಮೆ ಕಾರ್ಯಕ್ರಮ ಪ್ರಾರಂಭವಾಗಿದೆ. ಮಾಜಿ ಜಿ.ಪಂ. ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳದ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷರಾಗಿರುವ ವಸಂತ್ ಸಾಲ್ಯಾನ್ ಚಾಲನೆ ನೀಡಿದ್ದಾರೆ. ಬೆಳ್ತಂಗಡಿ ತಾಲೂಕು ಭ್ರಷ್ಟಾಚಾರ ಮುಕ್ತವಾಗಲಿ ಎಂದು ಹಾರೈಸಿದ್ದಾರೆ. ಮಾಜಿ ತಾ.ಪಂ. ಸದಸ್ಯರಾದ ಧರ್ಣಪ್ಪ ಪೂಜಾರಿ ಸ್ವಚ್ಛ ಭಾರತ ಆಗಬೇಕಾದರೆ ಮನೆ ಮತ್ತು ನಾವು ಸ್ವಚ್ಛವಾಗಬೇಕು, ಅದಕ್ಕಾಗಿ ಆಂದೋಲನಕ್ಕೆ ಕೈ ಜೋಡಿಸುತ್ತೇವೆ ಎಂದಿದ್ದಾರೆ. ಬಳಂಜ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್, ಬಳಂಜದಲ್ಲಿ ಕಾರ್ಯಕ್ರಮ ಆಗಿರುವುದು ಖುಷಿ ತಂದಿದೆ ಎಂದಿದ್ದಾರೆ. ಪಿಡಿಓ ಗಣೇಶ್ ಶೆಟ್ಟಿ ನಮ್ಮ ಊರು ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದಿದ್ದಾರೆ. ಆರ್‌ಎಸ್‌ಎಸ್ ಮುಂದಾಳು ಮತ್ತು ಸಾಮಾಜಿಕ ಧುರೀಣ ಸಂತೋಷ್ ಕುಮಾರ್ ಕಾಪಿನಡ್ಕ ಮನೆ ಮನೆಯಲ್ಲಿ ಉತ್ತಮ ವ್ಯಕ್ತಿ ನಿರ್ಮಾಣವಾದರೆ ಉತ್ತಮ ದೇಶ ನಿರ್ಮಾಣವಾಗುತ್ತದೆ, ಸುದ್ದಿ ಬಿಡುಗಡೆಯವರು ಪತ್ರಿಕೆಯನ್ನು ಉದ್ಯಮವನ್ನಾಗಿ ನೋಡದೆ ಪತ್ರಿಕಾ ಧರ್ಮವನ್ನು ಆಚರಿಸುತ್ತಾರೆ ಎಂದಿದ್ದಾರೆ. ಭಾಗವಹಿಸಿದ ಎಲ್ಲರೂ ಮುಕ್ತ ಮನಸ್ಸಿನಿಂದ ‘ಲಂಚ ಭ್ರಷ್ಟಾಚಾರ ಮುಕ್ತ, ನಮ್ಮ ಊರು, ನಮ್ಮ ಹೆಮ್ಮೆ’ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ. ಪರವೂರಲ್ಲಿರುವ ದೇಶ-ವಿದೇಶಗಳಲ್ಲಿ ಇರುವ ಬಳಂಜದವರು ಊರಿನ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಕರೆ ನೀಡಿದ್ದಾರೆ.


ತಾಲೂಕಿನಾದ್ಯಂತ ನಡೆಯಬೇಕಾಗಿರುವ ‘ಭ್ರಷ್ಟಾಚಾರ ಮುಕ್ತ ನಮ್ಮ ಊರು ನಮ್ಮ ಹೆಮ್ಮೆ’ ಕಾರ್ಯಕ್ರಮಕ್ಕೆ ನೇತೃತ್ವವನ್ನು ಶಾಸಕ ಹರೀಶ್ ಪೂಂಜರು ವಹಿಸಿಕೊಳ್ಳಬೇಕು. ಆ ಕಾರ್ಯಕ್ರಮದಲ್ಲಿ ಪೂಂಜರು ತಮ್ಮ ಸುದ್ದಿ ಉದಯ ಪತ್ರಿಕೆಯನ್ನು ಮಾತ್ರವಲ್ಲದೆ ತಾಲೂಕಿನ ಎಲ್ಲಾ ಪತ್ರಿಕೆಗಳನ್ನು, ಮಾಧ್ಯಮಗಳನ್ನು ತೊಡಗಿಸಿಕೊಂಡು ಜನಪರವಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜನರ ಪರವಾಗಿ ಕೇಳಿಕೊಳ್ಳುತ್ತಿದ್ದೇವೆ. ಸುದ್ದಿ ಮಾಧ್ಯಮ ಅದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸುತ್ತಿದ್ದೇವೆ.

LEAVE A REPLY

Please enter your comment!
Please enter your name here