ದ.ಕ.ಜಿಲ್ಲೆಯಲ್ಲಿ 89 ಪ್ರಕರಣ ದಾಖಲು-4 ಪತ್ತೆ
ರೂ.7,83,07,985 ಸೈಬರ್ ವಂಚನೆ-84,73,740 ರೂ.ಪತ್ತೆ
ಸೈಬರ್ ವಂಚನೆ ಪ್ರತಿ ಠಾಣೆಯಲ್ಲೂ ದೂರು ಸ್ವೀಕರಿಸಲು ಕ್ರಮ
ಪುತ್ತೂರು: ಸೈಬರ್ ವಂಚನೆಗೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 89 ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 4 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಸೈಬರ್ ಅಪರಾಧ ಪತ್ತೆಗೆ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಎಂದು ರಾಜ್ಯ ಗೃಹ ಸಚಿವ ಡಾ|ಜಿ.ಪರಮೇಶ್ವರ್ ಅವರು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರಿಗೆ ಲಿಖಿತ ಮಾಹಿತಿ ನೀಡಿದ್ದಾರೆ.
ದ.ಕ.ಜಿಲ್ಲೆಯಲ್ಲಿ 89 ಪ್ರಕರಣಗಳು ದಾಖಲಾಗಿದ್ದು 4 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.ಸೈಬರ್ ವಂಚನೆಯಿಂದ 7,83,07,985 ರೂ. ಕಳೆದುಕೊಂಡಿದ್ದು ಈ ಪೈಕಿ 84,73,740 ರೂ.ಪತ್ತೆ ಮಾಡಲಾಗಿದೆ.ಉಡುಪಿ ಜಿಲ್ಲೆಯಲ್ಲಿ 187 ಪ್ರಕರಣಗಳು ದಾಖಲಾಗಿದ್ದು 5 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.ಸೈಬರ್ ವಂಚನೆಯಿಂದ ಉಡುಪಿ ಜಿಲ್ಲೆಯಲ್ಲಿ 19,15,49,547 ರೂ.ಮೊತ್ತ ಕಳೆದುಕೊಳ್ಳಲಾಗಿದ್ದು, 40,15,800ರೂ.ಪತ್ತೆ ಮಾಡಲಾಗಿದೆ ಎಂದು ಗೃಹ ಸಚಿವರು ಉತ್ತರ ನೀಡಿದ್ದಾರೆ.
ಸೈಬರ್ ಅಪರಾಧ ಪತ್ತೆಗೆ ಪೊಲೀಸರಿಗೆ ವಿಶೇಷ ತರಬೇತಿ: ಸೈಬರ್ ಅಪರಾಧ ನಡೆದ ತಕ್ಷಣ ಪತ್ತೆಗೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸರಿಗೆ ಯಾವ ರೀತಿಯ ತಾಂತ್ರಿಕ ತರಬೇತಿ ಮತ್ತು ಸೌಲಭ್ಯ ನೀಡಲಾಗಿದೆ ಎಂದು ಕಿಶೋರ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವರು, ಸೈಬರ್ ಕ್ರೈಂ ಪ್ರಕರಣಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಆಧುನಿಕ ತಂತ್ರಜ್ಞಾನದ ಕುರಿತಂತೆ ಇಲಾಖಾ ವತಿಯಿಂದ ವಿಶೇಷ ತರಬೇತಿ ನೀಡಲಾಗುತ್ತಿದೆ. ಸಿಸಿಐಟಿಆರ್(ಸೆಂಟರ್ ಫಾರ್ ಸೈಬರ್ ಕ್ರೈಮ್ ಇನ್ವೆಸ್ಟಿಗೇಷನ್ ಟ್ರೈನಿಂಗ್ ಆಂಡ್ ರಿಸರ್ಚ್) ಘಟಕ ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.ಸೈಬರ್ ಅಪರಾಧಗಳ ಬಗ್ಗೆ ಪೊಲೀಸ್ ಸಿಬ್ಬಂದಿಯವರಿಗೆ ಲೆವೆಲ್-1, ಲೆವೆಲ್-2, ಡ್ರೋನ್, ಸಿಮಿಕ್ಸ್, ಬಿಟ್ ಕಾಯಿನ್, ಡ್ರೋನ್, ಫಾರೆನ್ಸಿಕ ಮುಂತಾದ ತರಬೇತಿ ನೀಡಲಾಗಿದೆ. ಸೈಬರ್ ಕ್ರೈಂ ಅಪರಾಧ ಮತ್ತು ತನಿಖೆಗಾಗಿ ಸಂಬಂಧಿಸಿ ಸೈಬರ್ ಕ್ರೈಂ ತನಿಖೆ ಕೈಪಿಡಿಯನ್ನು ಮುದ್ರಿಸಿ ರಾಜ್ಯದ ಎಲ್ಲಾ ಘಟಕಗಳಿಗೆ, ಪೊಲೀಸ್ ಠಾಣೆಗಳಿಗೆ ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳಿಗೆ ಕಳುಹಿಸಿಕೊಡಲಾಗಿದೆ.ಸೈಬರ್ ಕ್ರೈಂನಿಂದ ವಂಚಿತರಾದವರು ದೂರು ನೀಡಲು ಸಹಾಯವಾಣಿ 1930 ತೆರೆಯಲಾಗಿದೆ. ಆನ್‌ಲೈನ್ ಮೂಲಕ ದೂರು ದಾಖಲಿಸಲು ವೆಬ್‌ಸೈಟ್ www.cybercrime.gov.in ತೆರೆಯಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನರು ಸೈಬರ್ ವಂಚನೆಗೊಳಗಾದಲ್ಲಿ ಸ್ಥಳೀಯ ಠಾಣೆಗಳ ಮೂಲಕವೂ ದೂರು ದಾಖಲಿಸುವ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸೈಬರ್ ಆರ್ಥಿಕ ವಂಚನೆಗಳಿಗೆ ಬಲಿಯಾಗದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ|ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಸೈಬರ್ ವಂಚನೆ: ಪ್ರತಿ ಠಾಣೆಯಲ್ಲೂ ದೂರು ಸ್ವೀಕರಿಸಲು ಕ್ರಮ: ಸೈಬರ್ ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಸರಕಾರ ಕೈಗೊಂಡ ಕ್ರಮಗಳ ಕುರಿತ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಸೈಬರ್ ವಂಚನೆಗೊಳಗಾದ ಶೋಷಿತರ ಅನುಕೂಲಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ ಒಂದೊಂದು ಸೈಬರ್ ಪೊಲೀಸ್ ಠಾಣೆ(ಸಿಇಎನ್)ಗಳನ್ನು ಸ್ಥಾಪಿಸಲಾಗಿದ್ದು ಒಟ್ಟು 43 ಸಿಇಎನ್ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಪ್ರತಿ ಪೊಲೀಸ್ ಠಾಣೆಗಳಲ್ಲಿಯೂ ದೂರು ಸ್ವೀಕರಿಸಲು ಕ್ರಮಕೈಗೊಳ್ಳಲಾಗಿದೆ.
ಸೈಬರ್ ಅಪರಾಧಗಳಿಗೆ ಸಂಬಂಧಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲಾ ವರ್ಗದ ಜನರಿಗೂ ಸಾಮಾಜಿಕ ಜಾಲತಾಣ ಮತ್ತು ಎಲ್ಲಾ ಮಾಧ್ಯಮಗಳಿಂದಲೂ ಸಾಮಾನ್ಯ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಅರಿವು ಮೂಡಿಸಲಾಗುತ್ತಿದೆ.ಸೈಬರ್ ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ಸಿಐಡಿ ಕಚೇರಿಯಲ್ಲಿ ಸೆಂಟರ್ ಫಾರ್ ಸೈಬರ್ ಕ್ರೈಂ ಇನ್ವೆಸ್ಟಿಗೇಷನ್ ಟ್ರೈನಿಂಗ್ ಆಂಡ್ ರಿಸರ್ಚ್(ಸಿಸಿಐಟಿಆರ್)ಘಟಕವನ್ನು ಪ್ರಾರಂಭಿಸಲಾಗಿದ್ದು ಹಲವು ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಬ್ಯಾಂಕಿಂಗ್ ಅಪರಾಧಗಳಿಗೆ ಸಂಬಂಧಿಸಿ ಆರ್‌ಬಿಐ ಅಧಿಕಾರಿಗಳು, ಪೊಲೀಸ್ ಅಽಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬ್ಯಾಂಕಿಂಗ್ ಹಾಗೂ ಇತರ ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಪರಿಣಾಮಕಾರಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಸಾರ್ವಜನಿಕರ ಹಿತ ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಸಿಐಡಿ ಕಚೇರಿ ಸಿಸಿಐಟಿಆರ್ ವಿಭಾಗದಲ್ಲಿ 2019ರಿಂದ ಸರ್ಕಾರಿ ಸಂಸ್ಥೆಗಳು ನ್ಯಾಯಾಧೀಶರುಗಳಿಗೆ, ಕಾನೂನು ಅಭಿಯೋಜಕರಿಗೆ, ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಸೈಬರ್ ಅಪರಾಧಗಳನ್ನು ತನಿಖೆ ಮತ್ತು ಪತ್ತೆ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತಿದೆ.
ಸೈಬರ್ ಕ್ರೈಂ ಅಪರಾಧದ ಬಗ್ಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆಪ್, ಟ್ವೀಟರ್‌ಗಳ ಮೂಲಕ ಸೈಬರ್ ಜಾಗೃತಿಯ ಸಂದೇಶಗಳನ್ನು ಸೈಬರ್ ಕ್ರೈಂ ಅಪರಾಧ ಮತ್ತು ತನಿಖೆಗಾಗಿ ಸಂಬಂಧಿಸಿ ಸೈಬರ್ ಅಪರಾಧಗಳ ತನಿಖೆ ಕೈಪಿಡಿಯನ್ನು ಮುದ್ರಿಸಿ ರಾಜ್ಯದ ಎಲ್ಲಾ ಘಟಕಗಳಿಗೆ, ಪೊಲೀಸ್ ಠಾಣೆಗಳಿಗೆ ಮತ್ತು ಇತರೆ ಕಾನೂನು ಜಾರಿ ಸಂಸ್ಥೆಗಳಿಗೆ ಕಳುಹಿಸಿಕೊಡಲಾಗಿದೆ. ರಾಜ್ಯದಲ್ಲಿ ಸುಸಜ್ಜಿತವಾದ ನ್ಯಾಯ ವಿಜ್ಞಾನ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದ್ದು ಸೈಬರ್ ಕ್ರೈಂ ಅಪರಾಧಗಳ ತನಿಖೆಗೆ ಸಂಬಂಧಿಸಿ ತಾಂತ್ರಿಕ ನೆರವು ನೀಡಲಾಗುತ್ತಿದೆ ಎಂದೂ ಗೃಹ ಸಚಿವ ಡಾ|ಜಿ.ಪರಮೇಶ್ವರ ಅವರು ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.