ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಾವರ್ಕರ್ ಸಭಾಭವನ’ ಉದ್ಘಾಟನೆ

0


ಪುತ್ತೂರು:ದೇಶಕ್ಕೋಸ್ಕರ ಜಗತ್ತಿನ ಒಬ್ಬನೇ ಒಬ್ಬ ವ್ಯಕ್ತಿಗೆ ಎರಡು ಬಾರಿ ಜೀವಾವಧಿ ಶಿಕ್ಷೆ ಆಗಿದ್ದರೆ ಅದು ವಿನಾಯಕ ದಾಮೋದರ್ ಸಾವರ್ಕರ್ ಮಾತ್ರ.ಅವರು ಇಡೀ ಸಮಾಜವನ್ನು ಒಂದುಗೂಡಿಸುವಂತಹ ಭಾರೀ ದೊಡ್ಡ ಪ್ರಯತ್ನ ಮಾಡಿದ್ದ ಸಾಹಸಿ.ಎಲ್ಲಾ ಮುಖದಲ್ಲೂ ಸಾವರ್ಕರ್ ಸರ್ವಶ್ರೇಷ್ಠ.ಅಂತಹ ವೀರ ಸಾವರ್ಕರ್ ಹೆಸರನ್ನು ಈ ಸಭಾಂಗಣಕ್ಕೆ ಇಟ್ಟಿರುವುದು ಉತ್ತಮ ನಿರ್ಧಾರ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಹೇಳಿದರು.

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಕೃಷ್ಣಚೇತನ ಕಟ್ಟಡದಲ್ಲಿ ಡಿ.14ರಂದು ಸುಸಜ್ಜಿತ ಹವಾನಿಯಂತ್ರಿತ ‘ಸಾವರ್ಕರ್ ಸಭಾಂಗಣ’ದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತ ವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯದ ಬಳಿಕವೂ ತನ್ನನ್ನು ಜೈಲಿಗೆ ಹಾಕಿದರೂ ಸಾವರ್ಕರ್ ಹಿಂದುತ್ವಕ್ಕಾಗಿ, ಸಮಾಜಕ್ಕಾಗಿ ಕೆಲಸ ಮಾಡುತ್ತಾ ಬಂದರು. ಅಸ್ಪೃಶ್ಯತೆಯನ್ನು ನಿವಾರಣೆ ಮಾಡಲು ಭಾರತ್ ಮಾತಾ ಮಂದಿರ ಕಟ್ಟಿದರು.ಎಲ್ಲಾ ಸಮಾಜದವರಿಗ ಅಲ್ಲಿ ಅರ್ಚನೆ ಮಾಡಲು ಅವಕಾಶ ಕಲ್ಪಿಸಿದರು.ಅಂದು ದೇಶಕ್ಕೋಸ್ಕರ ಕೆಲಸ ಮಾಡಿದರೆ ದೇಶ ದ್ರೋಹ ಆಗುತ್ತಿತ್ತು. ಸ್ವಾತಂತ್ರ್ಯ ಸಿಕ್ಕಿ ಇವತ್ತು 76 ವರ್ಷ ದಾಟಿ ಆಗಿದೆ.ಇವತ್ತಿನ ಸ್ಥಿತಿಗತಿ ಅಂದಿನ ಸ್ಥಿತಿಗತಿಗಿಂತ ಭಿನ್ನವಾಗಿಲ್ಲ.ಆ ಸಂದರ್ಭದಲ್ಲಿ ಒಂದಷ್ಟು ಜನ ದೇಶ ಭಕ್ತರು ಇದ್ದರು.ಇವತ್ತು ದೇಶಕ್ಕಾಗಿ ಬದುಕುವ ಜನ ಎಷ್ಟಿದ್ದಾರೆ?, ಮಾರ್ಗದರ್ಶಕರು ಯಾರು?, ಮೇಲ್ಪಂಕ್ತಿ ಯಾರು?,ರಾಜಕೀಯ ನಾಯಕರಾಗಿ ನರೇಂದ್ರ ಮೋದಿ ಮಾತ್ರ ಒಬ್ಬರು ಇದ್ದಾರೆ.ಆದರೆ ಇಲ್ಲಿ ಯಾರಿದ್ದಾರೆ.ಹುಡುಕಿದರೆ ಸಿಗುವುದಿಲ್ಲ.ಸಮಾಜದಲ್ಲಿ ಸ್ವಾರ್ಥ ಬಿಟ್ಟು ದೇಶಕ್ಕಾಗಿ, ಸಮಾಜಕ್ಕಾಗಿ ಕೆಲಸ ಮಾಡುವವರು ಸಿಗುತ್ತಿಲ್ಲ.ಅದನ್ನು ನಿರ್ಮಾಣ ಮಾಡಲು ಸಾವರ್ಕರ್ ಅವರಂಥವರು ಇರಬೇಕು ಎಂದರು.


ಜೈಲಿನಲ್ಲೂ ಹೂವಿನ ಹಾಸಿಗೆಯಲ್ಲಿದ್ದವರು ನಮಗೆ ತ್ಯಾಗಿಗಳು:
ಸಾವರ್ಕರ್ ಅವರು ದೇಶಕ್ಕಾಗಿ ಹೋರಾಟಕ್ಕಿಳಿದಾಗ ಅವರನ್ನು ಬ್ರಿಟೀಷರು ಜೈಲಿಗೆ ಹಾಕಿದರು.ಆದರೆ ಸಾವರ್ಕರ್ ಜೈಲಿನಲ್ಲೂ ಹಲವು ಬದಲಾವಣೆ ತಂದರು.ಅಲ್ಲಿ ಧರ್ಮದ ಬಗ್ಗೆ ನಿಜವಾದ ಅರ್ಥವನ್ನು ತೋರಿಸಿದರು.ದೇಶದ ಇತಿಹಾಸದಲ್ಲಿ ಒಬ್ಬ ಈ ರೀತಿಯಾಗಿ 14 ವರ್ಷ ಅಂಡಮಾನ್‌ನ ಜೈಲಿನಲ್ಲಿ ಕಠಿಣ ಶಿಕ್ಷೆ ಪಡೆದಂತೆ ಗಾಂಧಿಜಿ, ಜವಾಹಾರ್‌ಲಾಲ್ ನೆಹರೂ ಸಹಿತ ಕಾಂಗ್ರೆಸ್‌ನ ಯಾರೂ ಪಡೆದಿಲ್ಲ.ಗಾಂಧಿಜಿ ಮತ್ತು ನೆಹರು ಅವರನ್ನು ಮನವಲಿಯಲ್ಲಿ ಜೈಲಿಗೆ ಹಾಕಿದ್ದರು.ಅಲ್ಲಿ ಅವರಿಗೆ ರಾಜನ ಬಂಗಲೆ ಒಳಗೆ ಹೂವಿನ ಹಾಸಿಗೆ ಕೊಟ್ಟಿದ್ದರು.ಇಂತಹ ಜನರು ನಮಗೆ ಇವತ್ತು ದೇಶ ತ್ಯಾಗಿಗಳು.ಆದರೆ ನಿಜವಾಗಿ ತ್ಯಾಗ ಮಾಡಿದವರನ್ನು ವಿರೋಧಿಸುತ್ತಾರೆ ಎಂದು ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.


ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಲಹಾ ಸಮಿತಿ ಸದಸ್ಯರಾಗಿರುವ ‘ಸೇತುಬಂಧು’ ಬ್ರಿಜ್‌ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರು ತುಳಸಿ ಗಿಡಕ್ಕೆ ನೀರು ಹಾಕಿ ನೂತನ ಸಭಾಂಗಣವನ್ನು ಉದ್ಘಾಟಿಸಿದರು.‌


ವಿಕಸಿತ ಭಾರತದ ಕಡೆ ಗುರಿಯಿರಲಿ:
ಕಾಲೇಜಿನ ಸಲಹಾ ಸಮಿತಿ ಸದಸ್ಯ, ಸ್ವಿಸ್ ಸಿಂಗಾಪುರ ಓವರ್‌ಸೀಸ್ ಎಂಟರ್‌ಪ್ರೈಸಸ್ ಸಿಂಗಾಪುರ ಇದರ ಮಾಜಿ ಅಧ್ಯಕ್ಷ ಚಂದ್ರಕಾಂತ್ ರಾವ್ ಐ ಅವರು ಮಾತನಾಡಿ, ರಾಷ್ಟ್ರೀಯ ಯೋಜನೆಗಳು,ಆದ್ಯತೆಗಳು ಮತ್ತು ದೇಶದ ಗುರಿಗಳನ್ನು ರೂಪಿಸುವಲ್ಲಿ ದೇಶದ ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಪ್ರಧಾನ ಮಂತ್ರಿ ಅವರ ದೂರ ದೃಷ್ಟಿಯಾಗಿದೆ.ಇದನ್ನು ಎಲ್ಲಾ ಸಂಸದರು, ಶಾಸಕರು ಚಿಂತನೆ ಮಾಡಬೇಕು.ಇದಕ್ಕೆ ಪೂರಕವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಂದಿನ ಫ್ಯೂಚರ್ ಎಂದರು.ಇವತ್ತು ಜಗತ್ತು ಬದಲಾವಣೆಯತ್ತ ಹೋಗುತ್ತಿದೆ.ಹೊಸ ಹೊಸ ಅವಿಷ್ಕಾರಗಳು ಹುಟ್ಟುತ್ತಿವೆ. ಸಹಯೋಗ, ಸಂವಹನ, ನಾವೀನ್ಯತೆ, ಸಂಶೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಬೇಕು ಎಂದವರು ಕರೆ ನೀಡಿದರು.‌


2025ಕ್ಕೆ ಅಟಾನಮಸ್, ನ್ಯಾಕ್‌ಗೆ ಅರ್ಹತೆ:
ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ|ಮಹೇಶ್‌ಪ್ರಸನ್ನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ನಡೆಸಲ್ಪಡುವ ಸಂಸ್ಥೆಗಳಲ್ಲಿ ಕರಾವಳಿ ಕರ್ನಾಟಕದ ಉತ್ತಮ ತಾಂತ್ರಿಕ ಶಿಕ್ಷಣ ಸಂಸ್ಥೆ ಎಂದು ಹೆಸರಾಗಿರುವ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯೂ ಒಂದು. ಆರು ಪದವಿ ವಿಭಾಗಗಳು ಮತ್ತು ಎರಡು ಸ್ನಾತಕೋತ್ತರ ವಿಭಾಗಳಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.ವಿದ್ಯಾರ್ಥಿಗಳು ಪ್ರತಿ ವರ್ಷವೂ ಉತ್ತಮ ಫಲಿತಾಂಶವನ್ನು ದಾಖಲಿಸುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಕ್ಯಾಂಪಸ್ ನೇಮಕಾತಿಯ ಮೂಲಕ ಪ್ರತಿಷ್ಠಿತ ಕಂಪೆನಿಗಳಲ್ಲಿ ಹುದ್ದೆ ಪಡೆಯುತ್ತಿದ್ದಾರೆ.ಎನ್‌ಬಿಎ ಇರುವ ಹಿನ್ನೆಲೆಯಲ್ಲಿ ನಮ್ಮಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಹೊರ ದೇಶದಲ್ಲೂ ಉತ್ತಮ ಅವಕಾಶವಿದೆ.ಸಂಸ್ಥೆಯು ಅಟಾನಮಸ್ ಮತ್ತು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತು(ನ್ಯಾಕ್)ಶ್ರೇಣಿ ಪಡೆಯುವಲ್ಲಿ ಅರ್ಹತೆ ಹೊಂದಿದೆ.2025ರಲ್ಲಿ ಅದೂ ಕೂಡಾ ನೆರವೇರಲಿದೆ ಎಂದು ಹೇಳಿದರು.


ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಸ್ಥೆಯ ಕೋಶಾಧಿಕಾರಿ ಮುರಳೀಧರ ಭಟ್, ಪ್ರಾಂಶುಪಾಲ ಡಾ|ಮಹೇಶ್ ಪ್ರಸನ್ನ, ಡಾ|ಗೋವಿಂದರಾಜ್, ಡಾ|ನಿಶ್ಚಯ್ ಕುಮಾರ್, ಡಾ|ಶ್ರೀಕಾಂತ್, ಡಾ|ರಾಬಿನ್ ಮನೋಹರ್, ಪ್ರೊ|ಪ್ರಶಾಂತ್ ಅತಿಥಿಗಳನ್ನು ಗೌರವಿಸಿದರು.ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಆಡಳಿತ ಮಂಡಳಿ ಸಂಚಾಲಕ ಸುಬ್ರಹ್ಮಣ್ಯ ಭಟ್ ಟಿ.ಎಸ್ ಸ್ವಾಗತಿಸಿದರು.ಸಂಸ್ಥೆಯ ಕೋಶಾಧಿಕಾರಿ ಮುರಳೀಧರ ಭಟ್ ವಂದಿಸಿದರು. ಕಾರ್ತಿಕ್ ಶ್ಯಾಮ್, ಸುಮನ, ವೈಷ್ಣವ್ ಪ್ರಾರ್ಥಿಸಿದರು.ಮಾಧ್ಯಮ ವಿಭಾಗದ ಸಹ ಸಂಯೋಜಕ ಹರಿಪ್ರಸಾದ್ ಡಿ ಕಾರ್ಯಕ್ರಮ ನಿರೂಪಿಸಿದರು.

ಸಭಾಂಗಣ ನಿರ್ಮಾಣದ ಗುತ್ತಿಗೆದಾರ ಹರಿಪ್ರಸಾದ್ ಪಡ್ಡಾಯೂರು ಅವರನ್ನು ಗೌರವಿಸಲಾಯಿತು.ಸಭಾ ಕಾರ್ಯಕ್ರಮದ ಆರಂಭದಲ್ಲಿ ಭೂಮಿಕಾ ಕಲಾ ಬಳಗದಿಂದ ವೀರ ಸಾವರ್ಕರ್ ನೃತ್ಯರೂಪಕ ಪ್ರದರ್ಶನಗೊಂಡಿತು.ಇದೇ ಸಂದರ್ಭ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಶ್ರೀರಾಮ ಮಂದಿರ, ವಿನಾಯಕ ದಾಮೋದರ್ ಸಾವರ್ಕರ್ ಅವರ ಚಿತ್ರವನ್ನು ಬಿಡಿಸಿ ಕಾಲೇಜಿಗೆ ಸಮರ್ಪಣೆ ಮಾಡಿದರು.ಹಿಂದು ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರು, ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜಿನ ನಿರ್ದೇಶಕರು, ಸಲಹಾ ಸಮಿತಿ ಸದಸ್ಯ ರಾಮ್ ಕುಮಾರ್ ಸಹಿತ ಹಲವಾರು ಮಂದಿ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಹವಾನಿಯಂತ್ರಿತ ಸಭಾಭವನ
ಕೃಷ್ಣಚೇತನ ಕಟ್ಟಡದ ಹೊರ ಭಾಗದಿಂದ ಸಭಾಂಗಣಕ್ಕೆ ತೆರಳಲು ಪ್ರತ್ಯೇಕ ವ್ಯವಸ್ಥೆ ಮತ್ತು ಸುಮಾರು 500 ಮಂದಿ ಆಸನದ ವ್ಯವಸ್ಥೆಯುಳ್ಳ ಸಭಾಭವನಕ್ಕೆ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಲಾಗಿದೆ.ಪ್ರೊಜೆಕ್ಟರ್ ಸೌಲಭ್ಯವೂ ಇದೆ.

LEAVE A REPLY

Please enter your comment!
Please enter your name here