ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ, ಮರಾಟಿ ಮಹಿಳಾ ವೇದಿಕೆ ಹಾಗೂ ಮರಾಟಿ ಯುವ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಅವಿಭಜಿತ ಪುತ್ತೂರು ತಾಲೂಕಿನ ಮರಾಟಿ ಸಮಾಜ ಬಾಂಧವರಿಗೆ 2024-25ನೇ ಸಾಲಿನ ಕ್ರೀಡಾಕೂಟವು ಡಿ.15ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.
ದೀಪಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ ಮಾತನಾಡಿ, ಕ್ರೀಡಾಕೂಟಗಳು ಕೇವಲ ಸ್ಪರ್ಧೆಗಾಗಿ ಅಲ್ಲ. ಅದು ಮಕ್ಕಳ ಶೈಕ್ಷಣಿಕ ಪ್ರಗತಿಗೂ ಸಹಕಾರಿಯಾಗಲಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ದೊರೆಯಲಿದೆ. ಹೀಗಾಗಿ ಕ್ರೀಡಾಕೂಟಗಳಲ್ಲಿ ಸ್ಪರ್ಧೆ ಇದ್ದರೂ ಪ್ರತಿಯೊಬ್ಬರೂ ಭಾಗವಹಿಸುವುದು ಬಹುಮುಖ್ಯವಾಗಿದೆ. ಮಕ್ಕಳು ಶೈಕ್ಷಣಕವಾಗಿ ಮಾತ್ರವಲ್ಲ ಎಲ್ಲಾ ಕ್ಷೇತ್ರದಲ್ಲಿಯೂ ಮುಂದುವರಿಯಬೇಕು. ಕ್ರೀಡಾ ಕ್ಷೇತ್ರಗಳ ವಿಶೇಷ ಮೀಸಲಾತಿಯಲ್ಲ ವಿವಿಧ ಇಲಾಖೆಗಳಲ್ಲಿ ನೇಮಕಾತಿಗಳು ನಡೆಯುತ್ತಿದ್ದು ರಾಜ್ಯ, ರಾಷ್ಟ್ರಮಟ್ಟದ ಸಾಧನೆ ಮಾಡಿದವರಿಗೆ ಅವಕಾಶಗಳು ದೊರೆಯಲಿದ್ದು ಇದನ್ನು ಸದುಪಯೊಗಪಡಿಸಿಕೊಳ್ಳುವಂತೆ ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮಾತನಾಡಿ, ಮಕ್ಕಳಿಗೆ ಮಾತ್ರವೇ ಸೀಮಿತವಾಗಿದ್ದ ಕ್ರೀಡಾಕೂಟಗಳನ್ನು ಇಂದು ಎಲ್ಲಾ ಸಮಾಜಗಳಲ್ಲಿಯೂ ಆಯೋಜಿಸುವ ಮೂಲಕ ಎಲ್ಲಾ ವಯಸ್ಸಿನವರಿಗೂ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸಹಕಾರಿಯಾಗಿದೆ. ಮಕ್ಕಳ ಪ್ರತಿಭೆಗಳು ಶೈಕ್ಷಣಿಕ ಮಾತ್ರವಲ್ಲದೇ ಎಲ್ಲಾ ಕ್ಷೇತ್ರದಲ್ಲಿ ಮುಂದುವರಿಯಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್. ದುಗ್ಗಪ್ಪ ನಾಯ್ಕ ಬಡಾವು ಮಾತನಾಡಿ, ಕ್ರೀಡಾ ಕ್ಷೇತ್ರವು ಬೌಗೋಳಿಕ ಜಗತ್ತಿನಷ್ಟೇ ವಿಸ್ತಾರಗೊಂಡಿದೆ. ಮಾನವನ ದೇಹ ಮತ್ತು ಮನಸ್ಸಿನ ಸಮತೋಲನ ಕ್ರೀಡೆ ಬಹುಮುಖ್ಯ. ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಕೊಳ್ಳಬೇಕು. ಅವರಲ್ಲಿ ಸ್ಪರ್ಧೆಯ ಸ್ಪೂರ್ತಿ ಮೂಡಬೇಕು. ಸಮಾಜ ಬಾಂಧವರ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿವರ್ಷ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಗೌರವಾರ್ಪಣೆ:
ಕ್ರೀಡಾಕೂಟದ ತೀರ್ಪುಗಾರರಾಗಿದ್ದ ದೈಹಿಕ ಶಿಕ್ಷಣ ಶಿಕ್ಷಕರಾದ ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಶಾಲಾ ನಿರಂಜನ್, ಅಕ್ಷಯ್, ಮಾಯಿದೇ ದೇವುಸ್ ಶಾಲಾ ಪದ್ಮನಾಭ, ಕಲ್ಲಡ್ಕ ಶ್ರೀರಾಮ ಶಾಲಾ ರಮ್ಯ, ವಿವೇಕಾನಂದ ಶಾಲಾ ಶರಣ್ಯ ಹಾಗೂ ಕ್ರೀಡಾಕೂಟದಲ್ಲಿ ವಿವಿಧ ರೂಪದಲ್ಲಿ ಪ್ರಯೋಜಕರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಂತ ಫಿಲೋಮಿನಾ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸದಾಶಿವ ನಾಯ್ಕ, ಅಬಕಾರಿ ಇಲಾಖೆ ನಿವೃತ್ತ ನಿರೀಕ್ಷಕ ಮಾಯಿಲಪ್ಪ ನಾಯ್ಕ, ಸಂಘದ ಕೋಶಾಧಿಕಾರಿ ಮೋಹನ ನಾಯ್ಕ, ಮಹಿಳಾ ವೇದಿಕೆ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ, ಯುವ ವೇದಿಕೆ ಅಧ್ಯಕ್ಷ ವಸಂತ ಆರ್ಯಾಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೈಷ್ಣವೀ ಎಂ.ಆರ್ ಪರ್ಲಡ್ಕ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಪೂವಪ್ಪ ನಾಯ್ಕ ಕುಂಞಕುಮೇರು ಸ್ವಾಗತಿಸಿದರು. ಕಾರ್ಯದರ್ಶಿ ಶೀನಪ್ಪ ನಾಯ್ಕ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿ, ಕ್ರೀಡಾಕೂಟದ ಸಂಚಾಲಕ ಪರಮೇಶ್ವರ ನಾಯ್ಕ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಪುಟಾಣಿಗಳು, ಕಿ.ಪ್ರಾ ಶಾಲೆ, ಹಿ.ಪ್ರಾ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ, ಯುವಕ-ಯುವತಿಯರಿಗೆ, ಹಿರಿಯರಿಗೆ ವಯಸ್ಸಿನ ಆಧಾರದಲ್ಲಿ ವೈಯಕ್ತಿಕ ಕ್ರೀಡೆಗಳಾದ ಓಟ, ಗುಂಡು ಎಸೆತ, ಉದ್ದ ಜಿಗಿತ, ಲಕ್ಕಿಗೇಮ್, ಗುಂಪು ಸ್ಪರ್ಧೆಗಳಾದ ಪುರುಷರಿಗೆ ಕಬಡ್ಡಿ, ಹಗ್ಗಜಗ್ಗಾಟ, ಮಹಿಳೆಯರಿಗೆ ತ್ರೋಬಾಲ್, ಮಹಿಳೆಯರು ಮತ್ತು ಪುರುಷರಿಗೆ ರಿಲೇ ಓಟ, ಮ್ಯಾರಥಾನ್ ಓಟಗಳು ನಡೆಯಿತು. ಪುತ್ತೂರು ಹಾಗೂ ಕಡಬ ತಾಲೂಕಿನ ಸಮಾಜ ಬಾಂಧವರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.