ಬೆಂಗಳೂರು: ಕೊಳವೆಬಾವಿಗಳಲ್ಲಿ ಮಕ್ಕಳು ಬೀಳುವುದನ್ನು ತಡೆಯಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ರೂ.25,೦೦೦ದವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಅಂತರ್ಜಲ(ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಯಮನ ಹಾಗೂ ನಿಯಂತ್ರಣ)(ತಿದ್ದುಪಡಿ)ಮಸೂದೆ? 2024’ಕ್ಕೆ ವಿಧಾನಸಭೆ ಸೋಮವಾರ ಅಂಗೀಕಾರ ನೀಡಿತು.
ಈ ಮಸೂದೆಯು, ಕೊಳವೆಬಾವಿಗಳನ್ನು ಕೊರೆಯುವವರು ಸಕ್ಷಮ ಪ್ರಾಧಿಕಾರಗಳಿಗೆ 15 ದಿನ ಮುಂಚಿತವಾಗಿ ಮಾಹಿತಿ ನೀಡಿ, ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಲಿದೆ. ವಿಫಲ ಕೊಳವೆಬಾವಿಗಳನ್ನು ಮುಚ್ಚಿ, ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಈ ಜವಾಬ್ದಾರಿಯನ್ನು ಅನುಷ್ಠಾನ ಏಜೆನ್ಸಿ ಮತ್ತು ಕೊಳವೆಬಾವಿ ಕೊರೆಯುವವರಿಗೆ ನಿಗದಿಪಡಿಸಲಾಗಿದೆ. ವಿಫಲವಾದಲ್ಲಿ ದಂಡ ಮತ್ತು ಜೈಲು ಶಿಕ್ಷೆ ವಿಽಸಲು ಅವಕಾಶವಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರು ಸದನಕ್ಕೆ ವಿವರಿಸಿದರು.
ಕೊಳವೆಬಾವಿ ಮುಚ್ಚದೇ ಇರುವವರಿಗೆ ಈಗ ಪ್ರಸ್ತಾಪಿಸಿರುವ ದಂಡ ತುಂಬಾ ಕಡಿಮೆಯಾಯಿತು.ರೂ.1 ಲಕ್ಷದಿಂದ ರೂ.5 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಸಲಹೆ ನೀಡಿದರು. ಮಸೂದೆಯು ರೈತರಿಗೆ ಕಿರುಕುಳ ನೀಡುವುದಕ್ಕೆ ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಒತ್ತಾಯಿಸಿದರು. ಪಂಚಾಯಿತಿ ಅಽಕಾರಿಗಳನ್ನೂ ಹೊಣೆ ಮಾಡಬೇಕು ಎಂದು ಕಾಂಗ್ರೆಸ್‌ನ ಕೆ.ಎಂ. ಶಿವಲಿಂಗೇಗೌಡ ಆಗ್ರಹಿಸಿದರು.
ಖನಿಜಕ್ಕೆ ತೆರಿಗೆ: ಖನಿಜ ನಿಕ್ಷೇಪಗಳು ಮತ್ತು ಈಗಾಗಲೇ ತೆಗೆದು ಸಾಗಿಸಿರುವ ಖನಿಜಗಳಿಗೆ 2005ರಿಂದ ಪೂರ್ವಾನ್ವಯವಾಗುವಂತೆ ತೆರಿಗೆ ವಿಧಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವ ‘ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ಮಸೂದೆ-2024’ಅನ್ನು ವಿಧಾನ ಸಭೆಯಲ್ಲಿ ಮಂಡಿಸಲಾಯಿತು. ಇದೇ ಸಂದರ್ಭದಲ್ಲಿ ‘ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ಮಸೂದೆ-2024’ಅನ್ನು ಹಿಂಪಡೆಯಲಾಯಿತು. ರಾಜ್ಯಪಾಲರ ಸಲಹೆಯಂತೆ ಮಸೂದೆ ಹಿಂಪಡೆಯಲಾಗುತ್ತದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.