ಸವಣೂರು : ವಾರ್ಷಿಕೋತ್ಸವ ಮಕ್ಕಳ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದ್ದು, ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತದೆ. ಪುಣ್ಚಪ್ಪಾಡಿ ಶಾಲೆಯು ಸಂಸ್ಕಾರಯುತ, ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಂದರಿ ಬಿ.ಎಸ್. ಹೇಳಿದರು.
ಅವರು ತಾಲ್ಲೂಕಿನ ಪುಣ್ಚಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 97ನೇ ವರ್ಷದ ವಾರ್ಷಿಕೋತ್ಸವ “ಸಪ್ತನವತಿ ಸಂಭ್ರಮ” ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕ ಉಪನ್ಯಾಸ ನೀಡಿದ ಪುತ್ತೂರಿನ ವಕೀಲ ಜಯಾನಂದ ಕೆ. ಅವರು, ಮಕ್ಕಳ ಕುತೂಹಲಕ್ಕೆ ಪ್ರೋತ್ಸಾಹ, ರಕ್ಷಣೆ ನೀಡಬೇಕು. ವಿದ್ಯಾರ್ಥಿಗಳು ಬೆಳಿಗ್ಗೆ ಬೇಗ ಎದ್ದು ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆ ಸಾಂಸ್ಕೃತಿಕ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಜೀವನದಲ್ಲಿ ಸಾಧಿಸುವ ಕನಸು ಹೊಂದಿ ಗುರಿ ಸಾಧಿಸಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಶಾಲೆಯ ವಾರ್ಷಿಕ ವರದಿ “ಪುಣ್ಚಾಕ್ಷರಿ” ಬಿಡುಗಡೆಗೊಳಿಸಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್. ಮಾತನಾಡಿ, ಮೊಬೈಲ್ ಗೀಳಿನಿಂದ ಮಕ್ಕಳು ಶಿಕ್ಷದಲ್ಲಿ ಆಸಕ್ತಿ ತೋರಿಸುವುದು ಕುಂಠಿತಗೊಳ್ಳುತ್ತಿದೆ. ಪೋಷಕರು ಇದರ ಬಗ್ಗೆ ನಿಗಾ ವಹಿಸಬೇಕು. ಅವರಲ್ಲಿ ಯುಪಿಎಸ್ಸಿ ಹುದ್ದೆ ಪಡೆಯುವ ಕನಸು ಬಿತ್ತಬೇಕು. ಬಾಲ್ಯದಲ್ಲೇ ಸಂಸ್ಕಾರ ನೀಡಬೇಕು. ಸಮಾಜ ಕೈಜೋಡಿಸಿದರೆ ಸಂಪೂರ್ಣ ಸಾಕ್ಷರತೆ ಸಾಧಿಸಲು ಸಾಧ್ಯ ಎಂದರು.
ದಾನಿ ಎ. ಕೃಷ್ಣ ರೈ ಪುಣ್ಚಪ್ಪಾಡಿ ಮಾತನಾಡಿ, ವಿಶೇಷತೆ, ಉತ್ತಮ ಗುಣಮಟ್ಟ ಹೊಂದಿರುವ ಗ್ರಾಮೀಣ ಸರ್ಕಾರಿ ಶಾಲೆ ಶತಮಾನದ ಹೊಸ್ತಿಲಲ್ಲಿದೆ. ದಾನಿಗಳು, ಊರವರು, ಪೋಷಕರ ಸಹಕಾರದಿಂದ 4 ಎಕ್ರೆ ಜಾಗದಲ್ಲಿ ಅಡಿಕೆ ತೋಟ ರಚನೆ ಮಾಡಿ ಜಿಲ್ಲೆಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಎಸ್ಡಿಎಂಸಿ ಅಧ್ಯಕ್ಷ ರಾಧಾಕೃಷ್ಣ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು. ಸವಣೂರು ಗ್ರಾಮ ಪಂಚಾಯಿತಿ ಸದಸ್ಯ ಗಿರಿಶಂಕರ ಸುಲಾಯ ಅವರು ಶಾಲೆ ನಡೆದು ಬಂದ ಹಾದಿ, ಶತಮಾನೋತ್ಸವದ ಗುರಿ- ಯೋಜನೆಗಳ ಬಗ್ಗೆ ವಿವರಿಸಿದರು. ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು ಮಕ್ಕಳ ಹಸ್ತಪ್ರತಿ “ಪುಣ್ಚಪದ” ಬಿಡುಗಡೆಗೊಳಿಸಿದರು. ದಾನಿ ಪಿ.ಡಿ. ಗಂಗಧರ್ ರೈ ಶಾಲಾ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದತ್ತಿನಿಧಿ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು, ಗ್ರಾ,ಮಸ್ಥರಿಗೆ ಬಹುಮಾನ ವಿತರಿಸಲಾಯಿತು. ದಾನಿಗಳು, ಪ್ರಾಯೋಜಕರನ್ನು ಗೌರವಿಸಲಾಯಿತು. ರೋಟರಿ ಕ್ಲಬ್ ಪುತ್ತೂರು ಈಸ್ಟ್ ಕೊಡುಗೆ ನೀಡಿದ ನ್ಯಾಪ್ಕಿನ್ ಬರ್ನರ್ ಅನ್ನು ಉದ್ಘಾಟಿಸಲಾಯಿತು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ರೈ ಪಿ.ಡಿ, ಸವಣೂರು ಗ್ರಾ.ಪಂ. ಸದಸ್ಯ ರಫೀಕ್, ಶೀನಪ್ಪ ಶೆಟ್ಟಿ ನೆಕ್ರಾಜೆ, ಯಶೋದಾ ನೂಜಾಜೆ, ಪಿಡಿಒ ಸಂದೇಶ್, ಸಿಆರ್ಪಿ ಜಯಂತ್ ವೈ, ಶಾಲಾ ನಾಯಕ ಸವಿನ್ ಎಸ್, ದಾನಿ ಸುರೇಶ್ ರೈ ಸೂಡಿಮುಳ್ಳು, ತಾಲ್ಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ. ಸವಣೂರು ಉಪಸ್ಥಿತರಿದ್ದರು.
ಪ್ರಭಾರ ಮುಖ್ಯಶಿಕ್ಷಕಿ ಶೋಭಾ ಕೆ. ಸ್ವಾಗತಿಸಿದರು. ರಶ್ಮಿತಾ ನರಿಮೊಗರು ನಿರೂಪಿಸಿದರು. ಅತಿಥಿ ಶಿಕ್ಷಕರಾದ ಚಂದ್ರಿಕಾ ಎಸ್, ಸವಿತಾ ಬಿ, ತೃಪ್ತಿ, ಗೌರವ ಶಿಕ್ಷಕಿ ಸವಿತಾ ಎನ್ ಸಹಕರಿಸಿದರು.