ಉಪ್ಪಿನಂಗಡಿ: ಕಳೆದೆರಡು ದಿನಗಳ ಹಿಂದೆ ಕಾಡಾನೆಯೊಂದು ಕುಮಾರಧಾರ ನದಿ ದಾಟಿ ಹಿರೇಬಂಡಾಡಿ ಗ್ರಾಮಕ್ಕೆ ಬಂದಿದ್ದು, ಭಾನುವಾರ ತಡರಾತ್ರಿ ಮತ್ತೆ ನದಿ ದಾಟಿ ಬೀರಮಂಗಲದತ್ತ ತೆರಳಿದ ಸುಳಿವು ಸಿಕ್ಕಿದೆ.
ಮೊದಲಿಗೆ ನಟ್ಟಿಬೈಲ್ ಸಮೀಪದ ಕುರ್ಪೆಲು ಗೋವಿಂದ ಭಟ್ ಎಂಬವರ ತೋಟದ ಬದಿಯಾಗಿ ಕಾಡಾನೆಯು ಅಡೆಕ್ಕಲ್, ಪೆರಾಬೆಯತ್ತ, ಕಂಪದಕಲ್ಲಿನತ್ತ ತೆರಳಿದೆ. ರಾತ್ರಿಯ ಸಮಯದಲ್ಲಿ ಆನೆ ಬರುತ್ತಿರುವುದನ್ನು ನದಿ ದಡದಲ್ಲಿ ವಾಸ್ತವ್ಯ ಹೂಡಿದ್ದ ಮೀನು ಹಿಡಿಯುವವರ ತಂಡ ಕಂಡಿದ್ದು, ಕೂಡಲೇ ಅವರು ಅಲ್ಲಿಂದ ಸಮೀಪದ ಮನೆಯೊಂದಕ್ಕೆ ಓಡಿ ತಪ್ಪಿಸಿಕೊಂಡಿದ್ದಾರೆ, ಅಲ್ಲದೇ, ಭಯಭೀತರಾದ ಅವರ ತಂಡ ಮರುದಿನವೇ ಅಲ್ಲಿಂದ ಬೇರೆ ಕಡೆಗೆ ಬದಲಾಯಿಸಿದ್ದಾರೆ.
ಕಾಡಾನೆ ಬಂದಿರುವ ಸುದ್ದಿ ತಿಳಿದು ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಬಂದಿದ್ದು, ಪರಿಸರದಲ್ಲಿ ಬೀಡು ಬಿಟ್ಟು ಸ್ಥಳೀಯರಲ್ಲಿ ಧೈರ್ಯ ತುಂಬುವ ಕಾರ್ಯ ನಡೆಸಿದರು. ಆನೆಯ ಹೆಜ್ಜೆ ಗುರುತು ಆಧರಿಸಿ ಆನೆಯು ರವಿವಾರ ತಡರಾತ್ರಿ ಕುಮಾರಧಾರ ನದಿ ದಾಟಿ ಬೀರಮಂಗಲದತ್ತ ತೆರಳಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.