ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಹೆತ್ತವರ ಸಭೆ

0

ಮಕ್ಕಳು ವಿದ್ಯಾವಂತರು ಮಾತ್ರವಲ್ಲದೆ ಸಂಸ್ಕಾರವಂತರೂ ಆಗಬೇಕು : ಸುಬ್ರಹ್ಮಣ್ಯ ನಟ್ಟೋಜ


ಪುತ್ತೂರು: ಮಕ್ಕಳು ಕೇವಲ ವಿದ್ಯಾವಂತರು ಮಾತ್ರವಲ್ಲದೆ ಸಂಸ್ಕಾರವಂತರೂ ಆಗಬೇಕು. ಈ ನಿಟ್ಟಿನಲ್ಲಿ ಧಾರ್ಮಿಕ ಶಿಕ್ಷಣವನ್ನು ಮಕ್ಕಳಿಗೆ ನೀಡುವುದು ಅತ್ಯಂತ ಅಗತ್ಯವೆನಿಸಿದೆ. ಯೋಗ ಪ್ರಾಣಾಯಾಮಗಳಂತಹ ಚಟುವಟಿಕೆಗಳನ್ನು ಮಕ್ಕಳ ದಿನಚರಿಯಲ್ಲಿ ಅಳವಡಿಸಿದಾಗ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಸಾಧ್ಯ ಎಂದರಲ್ಲದೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಭಾನುವಾರ ನಡೆದ ಹೆತ್ತವರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸತ್ಯನಾರಾಯಣ ಶರ್ಮ ಮಾತನಾಡಿ ಪ್ರತಿಯೊಂದು ಮಗುವೂ ವಿಭಿನ್ನ, ಪ್ರತಿಯೊಂದು ಮಗು ಕೂಡ ಈ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ಕೊಡುವ ಸಾಮರ್ಥ್ಯವನ್ನು ಹೊಂದಿದೆ. ಹೆತ್ತವರು ಮಕ್ಕಳ ಆಸಕ್ತಿ ಅಭಿರುಚಿಗಳನ್ನು ಆಗಾಗ ಗಮನಿಸುತ್ತಾ ಅವರ ಕೌಶಲ್ಯಕ್ಕೆ ತಕ್ಕಂತೆ ಪ್ರೋತ್ಸಾಹವನ್ನು ಕೊಡಬೇಕು. ಅಂತೆಯೇ ಮಕ್ಕಳು ವಿದ್ಯಾಭ್ಯಾಸದೊಂದಿಗೆ ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಮಾತನಾಡಿ ವಿದ್ಯಾರ್ಥಿಗಳು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಪರೀಕ್ಷಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳನ್ನು ಸದಾ ಹುರಿದುಂಬಿಸಬೇಕು ಎಂದರಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ, ನೀಟ್ ಪರೀಕ್ಷೆಗಳ ಮಹತ್ವವನ್ನು ವಿವರಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳ ಸಂಯೋಜಕ ಹಾಗೂ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ. ಕಿಶೋರ್ ಭಟ್ ಸ್ಪರ್ಧಾತ್ಮಕ ಪರೀಕ್ಷೆಗಳ ವಿವರಣೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಪ್ರಸಾದ್, ಕ್ಯಾಂಪಸ್ ನಿರ್ದೇಶಕ ರಾಜೇಂದ್ರ ಪ್ರಸಾದ್, ಉಪನ್ಯಾಸಕರು ಮತ್ತು ಉಪನ್ಯಾಸಕೇತರ ವರ್ಗದವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಸುಚಿತ್ರ ಪ್ರಭು ಸ್ವಾಗತಿಸಿದರು. ಉಪ ಪ್ರಾಂಶುಪಾಲ ಗಣೇಶ್ ಪ್ರಸಾದ್ ವಂದಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ಗೀತಾ ಸಿ.ಕೆ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here