ಜ್ಞಾನ ಭಾರತಿ ಶಾಲಾ ವಾರ್ಷಿಕೋತ್ಸವ – ಹುಸೈನ್ ಬಡಿಲರಿಗೆ ‘ಜ್ಞಾನರತ್ನ’, ತನ್ಸೀರಾರಿಗೆ ‘ಜ್ಞಾನ ಶ್ರೀ’ ಪ್ರಶಸ್ತಿ

0

ಉಪ್ಪಿನಂಗಡಿ: ಇಲ್ಲಿನ ಜ್ಞಾನ ಭಾರತಿ ಶಾಲೆಯಲ್ಲಿ 17ನೇ ಶಾಲಾ ವಾರ್ಷಿಕೋತ್ಸವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಶಾಲಾ ಸಂಚಾಲಕ ರವೂಫ್ ಯು.ಟಿ. ಅವರು ತನ್ನ ತಂದೆ ಹಾಗೂ ತಾಯಿಯ ಸ್ಮರಣಾರ್ಥ ಕೊಡಮಾಡುವ ‘ಜ್ಞಾನ ರತ್ನ’ ಪ್ರಶಸ್ತಿಯನ್ನು ಬ್ಯಾರಿ ಪ್ರಶಸ್ತಿ ಪುರಸ್ಕೃತ ಹುಸೈನ್ ಬಡಿಲ ಅವರಿಗೆ ನೀಡಿ ಗೌರವಿಸಲಾಯಿತು.


ಸಂಸ್ಥೆಯ ಟ್ರಸ್ಟಿ ಸುಲೈಮಾನ್ ಬಿ.ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಹಾಗೂ ನೂತನವಾಗಿ ನಿರ್ಮಿಸಿದ ಪ್ರವೇಶ ದ್ವಾರವನ್ನು ಸಂಸ್ಥೆಯ ಉಪಾಧ್ಯಕ್ಷರಾದ ಹುಸೈನ್ ಬಡಿಲ ಉದ್ಘಾಟಿಸಿದರು.


ರೋಟರಿಯ ಅಸಿಸ್ಟೆಂಟ್ ಗವರ್ನರ್, ದಂತ ವೈದ್ಯ ಡಾ. ರಾಜಾರಾಮ್ ಕೆ.ಬಿ. ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಕಾನೂನು ಸಲಹೆಗಾರರಾಗಿರುವ ವಕೀಲ ಅಶ್ರಫ್ ಅಗ್ನಾಡಿ ಮಾತನಾಡಿ, ಸಂಸ್ಥೆಯ ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಿದರು.


ಸಂಸ್ಥೆಯಲ್ಲಿ ಹತ್ತು ವರ್ಷಗಳ ಕಾಲ ಶಿಕ್ಷಕಿಯಾಗಿ, ಪ್ರಾಂಶುಪಾಲೆಯಾಗಿ ಸೇವೆಯನ್ನು ಸಲ್ಲಿಸಿದ ಶ್ರೀಮತಿ ತನ್ಸೀರಾ ಅವರಿಗೆ ‘ಜ್ಞಾನ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ತಸ್ಕೀನ್‌ರಿಗೆ ಹಾಗೂ ವಿಶೇಷ ಸಾಧನೆಗಾಗಿ ಏಳನೇ ತರಗತಿಯ ಹಬೀಬುಲ್ಲಾ, ಎಂಟನೇ ತರಗತಿಯ ಫಾತಿಮಾ ಶನುಮ್ ಮತ್ತು ಆರನೇ ತರಗತಿಯ ಫಾತಿಮಾ ಸಲ್ವಾರಿಗೆ ‘ಜ್ಞಾನ ಅವಾರ್ಡ್’ ನೀಡಿ ಗೌರವಿಸಲಾಯಿತು.


ವೇದಿಕೆಯಲ್ಲಿ ಉಪ್ಪಿನಂಗಡಿ ಮಾಲಿಕ್ ದೀನಾರ್ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಯೂಸುಫ್ ಹಾಜಿ ಹೇಂತಾರ್ ಹಾಗೂ ಸಂಸ್ಥೆಯ ಕೋಶಾಧಿಕಾರಿಯಾದ ಅಬ್ದುಲ್ ಅಝೀಝ್, ಶಾಲಾ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಇಕ್ಬಾಲ್ ಜೋಗಿಬೆಟ್ಟು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿಗಳು ಮತ್ತು ನಾಗರಿಕರಲ್ಲಿ ಜಾಗೃತಿ ಯನ್ನು ಮೂಡಿಸುವ ಸಲುವಾಗಿ ‘ನಾಟ್ ಟು ಡ್ರಗ್ಸ್’ ಮತ್ತು ‘ನಾಟ್ ಟು ಮೊಬೈಲ್’ ಎಂಬ ವಿಶೇಷ ಕಾರ್ಯಕ್ರಮಗಳು ನಡೆದವು.
ಶಾಲಾ ಪ್ರಾಂಶುಪಾಲ ಇಬ್ರಾಹೀಂ ಖಲೀಲ್ ಹೇಂತಾರ್ ವಂದಿಸಿದರು. ಮುಖ್ಯ ಶಿಕ್ಷಕಿಯರಾದ ತಾಹಿರಾ ಹಾಗೂ ಅರುಣಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here