ಧರ್ಮದ ತಿರುಳನ್ನು ಅರಿತು ಪಾಲಿಸಬೇಕು: ಮಹೇಶ್ ಕಜೆ
ರಾಮಕುಂಜ: ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀರಾಮ ಭಜನಾ ಮಂದಿರದ 16ನೇ ವರ್ಷದ ವಾರ್ಷಿಕೋತ್ಸವದ ಡಿ.24ರಂದು ನಡೆಯಿತು.
ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಪುತ್ತೂರಿನ ನ್ಯಾಯವಾದಿ, ಜಾರಿ ನಿರ್ದೇಶನಾಲಯದ ವಿಶೇಷ ಸರಕಾರಿ ಅಭಿಯೋಜಕ ಮಹೇಶ್ ಕಜೆಯವರು ಮಾತನಾಡಿ, ಭಜನೆಯಿಂದ ದೊರೆಯುತ್ತಿರುವ ಸಂಸ್ಕಾರ, ಧಾರ್ಮಿಕ ಜಾಗೃತಿ ಹೀಗೇ ಮುಂದುವರಿದರೆ ಭಾರತ ಮತ್ತೊಮ್ಮೆ ಧರ್ಮಯುಗವನ್ನು ಕಾಣಬಹುದು. ನಮ್ಮ ಸಂಸ್ಕೃತಿ ವಿನಾಶದಲ್ಲಿದೆ ಎಂದು ಹೇಳುವವರು ಬೇರೆ ಎಲ್ಲಿಯೂ ಹೋಗದೆ ಹಳ್ಳಿಗೆ ಬರಬೇಕು, ಹಳ್ಳಿಗಳಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಭಜನಾ ಮಂದಿರಗಳ ಮೂಲಕ ಜನ ಧರ್ಮದ ಮೂಲ ಸತ್ವದೊಂದಿಗೆ ಸಮ್ಮಿಳಿತರಾಗಿ ಬದುಕುತ್ತಿದ್ದಾರೆ ಎಂದರು. ಮಕ್ಕಳನ್ನು ಧಾರ್ಮಿಕ ಬದ್ದತೆಯಿಂದ ಬೆಳೆಸಿದಾಗ ಅವರಲ್ಲಿ ಸಂಸ್ಕಾರ ಬೆಳೆದು ಸತ್ಪ್ರಜೆಗಳಾಗುತ್ತಾರೆ. ನಾವು ಇನೊಬ್ಬರ ಬಗ್ಗೆ ಬೊಟ್ಟು ಮಾಡುವುದನ್ನು ಬಿಟ್ಟು ನಮ್ಮ ಧರ್ಮದ ತಿರುಳನ್ನು ಅರಿತು ಪಾಲಿಸಬೇಕು ಎಂದು ಹೇಳಿದರು.
ಧಾರ್ಮಿಕ ಉಪನ್ಯಾಸ ನೀಡಿದ ಪುಣ್ಚಪ್ಪಾಡಿ ಜನಸೇವಾ ಟ್ರಸ್ಟ್ನ ಅಧ್ಯಕ್ಷ ಗಿರಿಶಂಕರ ಸುಲಾಯ ಅವರು, ಒತ್ತಡದ ಬದುಕಿನಲ್ಲಿ ನಾವು ದೇವರನ್ನು ನೆನೆಯುವ ಕಾರ್ಯವನ್ನು ಮರೆಯುತ್ತೇವೆ. ಭಜನಾ ಮಂದಿರಗಳಲ್ಲಿ ಸಂಸ್ಕಾರವನ್ನು ಕಲಿಸುವ ಕಾರ್ಯಗಳೊಂದಿಗೆ ನಮ್ಮ ಸಂಸ್ಕೃತಿಯ ಪುನರುತ್ಥಾನದ ಕಾರ್ಯಗಳಾಗುತ್ತಿವೆ ಎಂದರು. ಭಜನಾ ಮಂದಿರದ ಗೌರವಾಧ್ಯಕ್ಷ ಬೆಳಿಯಪ್ಪ ಗೌಡ ತಿಮರೆಗುಡ್ಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಬಳೂರು ಒಕ್ಕೂಟದ ಅಧ್ಯಕ್ಷ ಪುರಂದರ ಪೂಜಾರಿ ತುಂಬೆತಡ್ಕ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಯತಿನ್ ಸಬಳೂರು, ಸಬಳೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶೇಖರ ಗೌಡ ಪಾಪುದಮಂಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾಯೋಜಕತ್ವ ನೀಡಿದ ಮಹನೀಯರನ್ನು ಗೌರವಿಸಲಾಯಿತು. ಭಜನಾ ಮಂದಿರದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಗೌಡ ಪ್ರಸ್ತಾವನೆಗೈದು, ಸ್ವಾಗತಿಸಿದರು. ಕಾರ್ಯದರ್ಶಿ ರಾಧಾಕೃಷ್ಣ ನಾಯ್ಕ ತುಂಬೆತಡ್ಕ ವಂದಿಸಿದರು. ಶಿಕ್ಷಕ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಇರ್ಕಿಮಠ ನರಹರಿ ಉಪಾಧ್ಯಯ ಅವರ ನೇತೃತ್ವದಲ್ಲಿ ಗಣಹೋಮ, ಸಂಜೆ ಸತ್ಯನಾರಾಯಣ ಪೂಜೆ, ಶ್ರೀರಾಮ ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ಬಳಿಕ ಬಪ್ಪನಾಡು ಮೇಳದವರಿಂದ ಬಂಟನ ಬಲಿಸುತ್ತು ಎನ್ನುವ ಯಕ್ಷಗಾನ ಬಯಲಾಟ ನಡೆಯಿತು.