ತನ್ನ ಮೂವರು ಮಕ್ಕಳನ್ನು ಕೊಲೆ ಮಾಡಿದ್ದ ಪ್ರಕರಣ:ಹಿತೇಶ್ ಶೆಟ್ಟಿಗಾರ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಮಂಗಳೂರು ಕೋರ್ಟ್

0

ಪುತ್ತೂರು: ತನ್ನ ಮೂವರು ಮಕ್ಕಳನ್ನು ಬಾವಿಗೆ ಹಾಕಿ ಕೊಲೆ ಮಾಡಿದ ಬಳಿಕ ಪತ್ನಿಯ ಕೊಲೆಗೆ ಪ್ರಯತ್ನಿಸಿದ ಆರೋಪಿಗೆ ಮಂಗಳೂರು ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರವಾಗಿ ಈ ಹಿಂದೆ ಪುತ್ತೂರಿನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ಮಂಗಳೂರು ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾಗಿರುವ ಉಪ್ಪಿನಂಗಡಿ ಮೂಲದ ಮೋಹನ್ ಕುಮಾರ್ ಬಿ.ರವರು ವಾದ ಮಂಡಿಸಿ ಅಪರಾಧಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಘಟನೆಯ ವಿವರ:
ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕಿನ ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ಎಂಬಲ್ಲಿ 2022ರ ಜೂನ್ 23ರಂದು ಹಿತೇಶ್ ಶೆಟ್ಟಿಗಾರ್ ಯಾನೆ ಹಿತೇಶ್ ಕುಮಾರ್ (43ವ) ಎಂಬಾತ ತನ್ನ ಮಕ್ಕಳಾದ ರಶ್ಮಿತಾ ( 14 ವ), ಉದಯ ಕುಮಾರ್ ( 11 ವ) ಮತ್ತು ದಕ್ಷಿತ್ ಕುಮಾರ್( 4 ವ) ಎಂಬವರನ್ನು ತನ್ನ ಮನೆಯ ಬಳಿ ಇರುವ ಅಶೋಕ್ ಶೆಟ್ಟಿಗಾರ್ ಎಂಬವರ ನೀರು ತುಂಬಿದ್ದ ಬಾವಿಗೆ ಹಾಕಿ ಕೊಲೆ ಮಾಡಿದ್ದಲ್ಲದೆ ನಂತರ ಕೆಲಸದಿಂದ ಬಂದು ತನ್ನ ಮಕ್ಕಳನ್ನು ಹುಡುಕುತ್ತಿದ್ದ ಹೆಂಡತಿ ಲಕ್ಷ್ಮೀಯವರನ್ನು ಸಂಜೆ ಸುಮಾರು 5.35 ಗಂಟೆಗೆ ಅದೇ ಬಾವಿಗೆ ದೂಡಿ ಹಾಕಿ ಕೊಲೆ ಮಾಡಲು ಯತ್ನಿಸಿದ್ದ. ತನ್ನ ಉದಾಸೀನ ಪ್ರವೃತ್ತಿಯಿಂದ ಯಾವುದೇ ಕೆಲಸಕ್ಕೆ ಹೋಗದೆ ಹೆಂಡತಿ ಮತ್ತು ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ ಎಂದು ಹೆಂಡತಿ ಹಾಗೂ ಮಕ್ಕಳನ್ನು ಸಾಯಿಸಿದ್ದಲ್ಲಿ ತನಗೆ ಹೇಗೆ ಬೇಕಾದರೂ ಜೀವಿಸಬಹುದೆಂದು ಯೋಚಿಸಿ ತನ್ನ ಮೂವರು ಮಕ್ಕಳನ್ನು ಬಾವಿಗೆ ಹಾಕಿ ಕೊಲೆ ಮಾಡಿ ಬಳಿಕ ತನ್ನ ಹೆಂಡತಿಯನ್ನು ಬಾವಿಗೆ ದೂಡಿ ಹಾಕಿ ಕೊಲೆಗೆ ಪ್ರಯತ್ನಿಸಿದ್ದ ಬಗ್ಗೆ ಹಿತೇಶ್ ಶೆಟ್ಟಿಗಾರ್ ವಿರುದ್ಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಮೊಕದ್ದಮೆ ನಂಬರ್ 42/2022ರಂತೆ ಪ್ರಕರಣ ದಾಖಲಾಗಿತ್ತು. ಬಳಿಕ ಆತನನ್ನು ಬಂಧಿಸಲಾಗಿದ್ದು ನಂತರ ಪೊಲೀಸ್ ಠಾಣೆಯ ನಿರೀಕ್ಷಕ ಕುಸುಮಾಧರ್ ಕೆ. ಅವರು ತನಿಖೆ ಪೂರ್ಣಗೊಳಿಸಿ ಆರೋಪಿತನ ವಿರುದ್ಧ ಕಲಂ 302 ಮತ್ತು 307 ಐಪಿಸಿಯಡಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಜಿಲ್ಲೆಯಲ್ಲಿ ಸಂಚಲನ ಸೃಷ್ಠಿಸಿದ್ದ ಈ ಪ್ರಕರಣದ ವಿಚಾರಣೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು ಅಭಿಯೋಜನೆ ಪರ ಒಟ್ಟು 32 ಸಾಕ್ಷಿದಾರರನ್ನು ವಿಚಾರಿಸಲಾಗಿತ್ತು. ಈ ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಆರೋಪಿಯ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ಘೋಷಿಸಿದೆ. 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧಿಶರಾದ ಸಂಧ್ಯಾ ಎಸ್.ರವರು ಆರೋಪಿತನಿಗೆ ಭಾರತೀಯ ದಂಡ ಸಂಹಿತೆ ಕಲಂ 302 ರಡಿಯ ಅಪರಾಧಕ್ಕೆ ಗಲ್ಲು ಶಿಕ್ಷೆ ಮತ್ತು ಭಾರತೀಯ ದಂಡ ಸಂಹಿತೆ ಕಲಂ 307ರಡಿಯ ಅಪರಾಧಕ್ಕೆ 10 ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದ್ದಾರೆ. ನೊಂದ ಲಕ್ಷ್ಮೀ ಅವರಿಗೆ ಸೂಕ್ತ ಪರಿಹಾರವನ್ನು ಕಾನೂನು ಸೇವೆಗಳ ಪ್ರಾಧಿಕಾರ ನೀಡಬೇಕೆಂದೂ ನ್ಯಾಯಾಧಿಶರು ಆದೇಶಿಸಿದ್ದಾರೆ.


ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಎಲ್ಲಾ ಸಾಕ್ಷಿದಾರರ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕರಾದ ಮೋಹನ್ ಕುಮಾರ್ ಬಿ. ನಡೆಸಿದ್ದರು. ಮೋಹನ್ ಕುಮಾರ್ ಅವರು ಉಪ್ಪಿನಂಗಡಿ ಮೂಲದವರಾಗಿದ್ದು ಈ ಹಿಂದೆ ಪುತ್ತೂರಿನಲ್ಲಿ ವಕೀಲರಾಗಿದ್ದರು.

LEAVE A REPLY

Please enter your comment!
Please enter your name here