ಶ್ರೀ ರಾಮಕುಂಜೇಶ್ವರ ಸಂಸ್ಕೃತ ಶಾಲಾ ಮಕ್ಕಳ ಹಬ್ಬ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀ ರಾಮಕುಂಜೇಶ್ವರ ಸಂಸ್ಕೃತ ಪಾಠ ಶಾಲೆಯ ’ಮಕ್ಕಳ ಹಬ್ಬ 2024’ ಡಿ.29ರಂದು ನಡೆಯಿತು.


ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು, ಇಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ದೇಶದ ವಿವಿಧ ಕಡೆಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರಿಂದ ಇಂತಹ ಶಿಕ್ಷಣ ಸಂಸ್ಥೆಗಳು ಬಲಗೊಳ್ಳಬೇಕು. ತಮ್ಮ ಸೇವೆಯ ಮೂಲಕ ವಿದ್ಯಾದೇಗುಲದ ರಕ್ಷಣೆಯಾಗಬೇಕು. ಈ ಮೂಲಕ ಸಮಾಜದ ಋಣ ತೀರಿಸಬೇಕೆಂದು ನುಡಿದರು.


ಅತಿಥಿಯಾಗಿದ್ದ ಬೆಂಗಳೂರಿನ ಪೂರ್ಣಪ್ರಜ್ಞ ಆಚಾರ್ಯ ಅವರು ಶೈಕ್ಷಣಿಕ ಸಂದೇಶ ನೀಡಿ, ಮುಂದುವರಿದಿರುವ ತಂತ್ರಜ್ಞಾನವನ್ನು ಹಿತ-ಮಿತವಾಗಿ ಜೀವನಕ್ಕೆ ಪೂರಕವಾಗಿ ಬಳಸಿಕೊಂಡಲ್ಲಿ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯವಿದೆ ಎಂದರು. ಇನ್ನೋರ್ವ ಅತಿಥಿ ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ಸಂತೋಷ್ ಎಚ್.ಜೆ.ಸಂದರ್ಭೋಚಿತವಾಗಿ ಮಾತನಾಡಿದರು.


ಸುಬ್ರಹ್ಮಣ್ಯ ಪೆರಂಪಳ್ಳಿ, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಳೆದ ಸಾಲಿನ ೭ನೇ ತರಗತಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವಿಧ ರೀತಿಯಲ್ಲಿ ಸಹಕರಿಸಿದವರಿಗೆ ಶಾಲು ಹಾಕಿ ಗೌರವಾರ್ಪಣೆ ಮಾಡಲಾಯಿತು. ನಿವೃತ್ತ ಮುಖ್ಯಶಿಕ್ಷಕ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕರೂ ಆದ ಟಿ.ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕ ಸುಶೀಲ ಸ್ವಾಗತಿಸಿ, ನಿರೂಪಿಸಿದರು. ವಿದ್ಯಾರ್ಥಿ ಆದಿತ್ಯ ಸಿ.ಹೆಚ್.ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಹಾಗೂ ನಂತರ ವಿದ್ಯಾರ್ಥಿಗಳಿಂದ ನೃತ್ಯ,ನಾಟಕ ಸಹಿತ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು. ಶಿಕ್ಷಕರ ವಿವಿಧ ಕಾರ್ಯಕ್ರಮ ನಿರೂಪಿಸಿದರು.


94 ಹಿರಿಯ ವಿದ್ಯಾರ್ಥಿಗಳಿಗೆ ವಿಶ್ವೇಶಾನುಗ್ರಹ ಪುರಸ್ಕಾರ:
ವೃಂದಾವನಸ್ಥ ಶ್ರೀ ವಿಶ್ವೇಶತೀರ್ಥರ ಪುಣ್ಯಸ್ಮರಣೆ ಹಾಗೂ ಶ್ರೀಗಳ 94ನೇ ಜನ್ಮ ವರ್ಷದ ಸವಿನೆನಪಿಗಾಗಿ ಅನ್ಯಾನ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 94 ಪ್ರತಿಭಾವಂತ ಹಿರಿಯ ವಿದ್ಯಾರ್ಥಿಗಳಿಗೆ-ಗುರುಸೇವಕರಿಗೆ ಈ ಸಂದರ್ಭದಲ್ಲಿ ವಿಶ್ವೇಶಾನುಗ್ರಹ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಿರಿಯ ವಿದ್ಯಾರ್ಥಿಗಳು ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರಿಗೆ ತುಳಸಿ ಹಾರಾರ್ಪಣೆ ಮಾಡಿ ಗುರುಕಾಣಿಕೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ಸ್ವಾಮೀಜಿ ಹಿರಿಯ ವಿದ್ಯಾರ್ಥಿಗಳಿಗೆ ಶಾಲು,ಸ್ಮರಣಿಕೆ, ಫಲತಾಂಬೂಲ ನೀಡಿ ಪುರಸ್ಕರಿಸಿದರು. ಹಿರಿಯ ವಿದ್ಯಾರ್ಥಿಗಳೂ ಸ್ವಾಮೀಜಿಯವರಿಗೆ ಪೇಟ,ತುಳಸಿ ಹಾರಾರ್ಪಣೆ, ಫಲತಾಂಬೂಲ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here