ಉಪ್ಪಿನಂಗಡಿ: ಹೆದ್ದಾರಿಯ ಸೇಡಿಯಾಪು ಸಮೀಪದ ಕಾಪು ಎಂಬಲ್ಲಿ ಕಾರೊಂದು ರಸ್ತೆ ಅಂಚಿನ ಕಂದಕಕ್ಕೆ ಉರುಳಿ ಸಂಪೂರ್ಣ ಜಖಂಗೊಂಡ ಘಟನೆ ಜ.2ರಂದು ಮುಂಜಾನೆ ನಡೆದಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರಿನಲ್ಲಿದ್ದವರು ಒತ್ತೆಕೋಲದಲ್ಲಿ ಭಾಗವಹಿಸಿ ವಾಪಸ್ಸು ಮನೆಗೆ ತೆರಳುತ್ತಿದಾಗ ಈ ದುರ್ಘಟನೆ ನಡೆದಿದೆ.
ಮಾರುತಿ ಕಾರು ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ ಚಲಿಸುತ್ತಿದ್ದ ವೇಳೆ, ಸೇಡಿಯಾಪು ಜಂಕ್ಷನ್ ನಿಂದ 250 ಮೀ ದೂರದ ಕಾಪು ಎಂಬಲ್ಲಿ ಎಡ ಬದಿಗೆ ಚಲಿಸಿ ತೋಟದ ನೀರು ಹರಿಯುವ ಕಾಲುವೆಗೆ ಬಿದ್ದಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆಯ ಪಾರ ನಿವಾಸಿ ಚರಣ್ ಎಂಬವರು ಕಾರನ್ನು ಚಾಲನೆ ಮಾಡುತ್ತಿದ್ದು, ಕಾರಿನಲ್ಲಿ ಚರಣ್, ಅವರ ತಂದೆ, ಬಾವ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು. ಮುಂಡೂರಿನಲ್ಲಿ ನಡೆಯುತ್ತಿದ್ದ ಒತ್ತೆ ಕೋಲದಲ್ಲಿ ಭಾಗವಹಿಸಿ ಬರುತ್ತಿದ್ದಾಗ ಘಟನೆ ನಡೆದಿದೆ. ಐವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪುತ್ತೂರಿನ ಖಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.