34 ನೆಕ್ಕಿಲಾಡಿ: ಮೈಂದಡ್ಕ ಕಟ್ಟಡದ ಭೂ ವಿವಾದ ಇತ್ಯರ್ಥ

0

ಅಂಗನವಾಡಿಗೆ ಮಂಜೂರಾದ ಜಾಗ ‘ನಮ್ಮೂರು ನಮ್ಮವರು’ ಸಂಘದ ಕಟ್ಟಡದಿಂದ ಪ್ರತ್ಯೇಕ


ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಮೈಂದಡ್ಕದಲ್ಲಿ ಅಂಗನವಾಡಿ ಕಾರ್ಯಾಚರಿಸುತ್ತಿರುವ ಕಟ್ಟಡಕ್ಕೆ ಸಂಬಂಧಿಸಿದಂತೆ ಇದ್ದ ಭೂ ವಿವಾದವೊಂದು ಭೂ ಸರ್ವೇ ಮೂಲಕ ಬಗೆಹರಿದಿದೆ. ಅಂಗನವಾಡಿಗೆ ಮಂಜೂರಾಗಿರುವ 5 ಸೆಂಟ್ಸ್ ಜಾಗ ಪ್ರಸ್ತುತ ಮೈಂದಡ್ಕದ ‘ನಮ್ಮೂರು-ನಮ್ಮವರು’ ಸಂಘಟನೆಗೆ ಸೇರಿದ ಕಟ್ಟಡವನ್ನು ಬಿಟ್ಟು ಇರುವ ವಿಚಾರ ಭೂಸರ್ವೆ ಮೂಲಕ ಸ್ಪಷ್ಟವಾಗಿದ್ದು, ಈ ಮೂಲಕ, ನಮ್ಮೂರು-ನಮ್ಮವರು ಸಂಘಟನೆ ಮತ್ತು ಅಂಗನವಾಡಿ ನಡುವೆ ಜಾಗದ ವಿಚಾರದಲ್ಲಿ ಇದ್ದ ವಿವಾದ ಬಗೆಹರಿದಿದೆ. ಈ ನಡುವೆ, ಈ ಕಟ್ಟಡಕ್ಕೆ ನಮ್ಮೂರು- ನಮ್ಮವರು ಸಂಘದ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ನೀಡಲು 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಈ ಮೊದಲು ಮೆಸ್ಕಾಂಗೆ ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ಇದೀಗ, ನಿಗದಿತ ದಾಖಲೆಗಳು ಇಲ್ಲದಿರುವುದರಿಂದ ರದ್ದುಪಡಿಸುವಂತೆ ಕೋರಿ ಗ್ರಾಮ ಪಂಚಾಯತ್ ಮೆಸ್ಕಾಂಗೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ.


ಮೈಂದಡ್ಕದಲ್ಲಿ ಅಂಗನವಾಡಿ ಮಂಜೂರುಗೊಳಿಸಬೇಕೆಂಬ ಬೇಡಿಕೆ 34 ನೆಕ್ಕಿಲಾಡಿ ಗ್ರಾಮ ಸಭೆಯಲ್ಲಿ ಹಲವು ಬಾರಿ ಪ್ರಸ್ತಾಪವಾಗಿತ್ತು. ಕೊನೆಗೂ ಅಂಗನವಾಡಿ ಇಲ್ಲಿಗೆ ಮಂಜೂರುಗೊಂಡಿತ್ತು. ಆದರೆ ಕಟ್ಟಡವಿಲ್ಲದ್ದರಿಂದ ಅಲ್ಲೇ ಸಮೀಪದಲ್ಲಿ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ ಕಟ್ಟಡದಲ್ಲಿ ಅಂಗನವಾಡಿ ಕಾರ್ಯಾಚರಿಸುತ್ತಿತ್ತು. ಈ ನಡುವೆ ಮೈಂದಡ್ಕದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಕೋರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು. ಇನ್ನೊಂದೆಡೆ ಮೈಂದಡ್ಕದಲ್ಲಿರುವ 88/1ರ ಸರಕಾರಿ ಜಾಗದಲ್ಲಿ ಕಟ್ಟಡವೊಂದು ನಿರ್ಮಾಣವಾಗಿತ್ತು. ಬಳಿಕ ಅದೇ ಕಟ್ಟಡದಲ್ಲಿ ಅಂಗನವಾಡಿ ಕಾರ್ಯನಿರ್ವಹಿಸುತ್ತಿತ್ತು. ಕಂದಾಯ ಇಲಾಖೆಯು ಸರ್ವೇ ನಂ.88/1ರಲ್ಲಿ 5 ಸೆಂಟ್ಸ್ ಜಾಗವನ್ನು ಅಂಗನವಾಡಿಗೆ ಮಂಜೂರುಗೊಳಿಸಿತು.

ಅಂಗನವಾಡಿ ಕಾರ್ಯಾಚರಿಸುತ್ತಿರುವ, ತಮ್ಮ ಸಂಘಕ್ಕೆ ಸೇರಿದ ಕಟ್ಟಡಕ್ಕೆ ಸಂಘದ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ಕೋರಿ ‘ನಮ್ಮೂರು- ನಮ್ಮವರು’ ಸಂಘಟನೆಯವರು ಮೆಸ್ಕಾಂಗೆ ಅರ್ಜಿ ಸಲ್ಲಿಸಿದ್ದರು.ಇದಕ್ಕೆ ಆಕ್ಷೇಪ ಸಲ್ಲಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು, ಈ ಜಾಗವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಂಜೂರುಗೊಂಡಿದೆ. ಆದ್ದರಿಂದ ಇಲ್ಲಿ ಬೇರೆ ಯಾವುದೇ ಕಾಮಗಾರಿ ನಡೆಯದಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಆಕ್ಷೇಪ ಪತ್ರದಲ್ಲಿ ತಿಳಿಸಿದ್ದರು. ಆ ನಂತರದ ಬೆಳವಣಿಗೆಯಲ್ಲಿ ಇಲ್ಲಿ ಅಂಗನವಾಡಿ ಮತ್ತು ಸಂಘದ ನಡುವೆ ಜಾಗದ ವಿಚಾರದಲ್ಲಿ ಸಮರ ಆರಂಭಗೊಂಡಿತ್ತು. ಇದೀಗ ಭೂ ಸರ್ವೆ ನಡೆಸಿದಾಗ, ನಮ್ಮೂರು ನಮ್ಮವರು ಸಂಘಟನೆಗೆ ಸೇರಿದ ಸದ್ರಿ ಕಟ್ಟಡವನ್ನು ಬಿಟ್ಟು 5 ಸೆಂಟ್ಸ್ ಜಾಗ ಅಂಗನವಾಡಿಗೆ ಮಂಜೂರಾಗಿರುವುದೆಂದು ತಿಳಿದು ಬಂದಿದ್ದು ಈ ಮೂಲಕ ಅಂಗನವಾಡಿ ಮತ್ತು ನಮ್ಮೂರು ನಮ್ಮವರು ಸಂಘಟನೆ ನಡುವಿನ ಜಾಗದ ವಿವಾದ ಬಗೆಹರಿದಂತಾಗಿದೆ.


ನಿರಾಕ್ಷೇಪಣಾ ಪತ್ರ ರದ್ದತಿಗೆ ಗ್ರಾ.ಪಂ.ನಿಂದ ಮೆಸ್ಕಾಂಗೆ ಪತ್ರ:

‘ಮೈಂದಡ್ಕ ಎಂಬಲ್ಲಿರುವ ನಮ್ಮೂರು- ನಮ್ಮವರು ಸಂಘದ ವತಿಯಿಂದ ಸರ್ವೇ ನಂ.88/1ರಲ್ಲಿ 5 ಸೆಂಟ್ಸ್ ವಿಸ್ತೀರ್ಣದ ಕಟ್ಟಡಕ್ಕೆ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯಲು 14.05.2024ರಂದು ಗ್ರಾಮ ಪಂಚಾಯತ್‌ಗೆ ಸಲ್ಲಿಸಿದ್ದ ಅರ್ಜಿಯ ಪ್ರಕಾರ ಸ್ಥಳ ಪರಿಶೀಲನೆ ನಡೆಸಿ, ಈ ಬಗ್ಗೆ ‘ಗ್ರಾ.ಪಂ.ನಿಂದ ಯಾವುದೇ ಆಕ್ಷೇಪಣೆ ಇರುವುದಿಲ್ಲ’ ಎಂದು 34 ನೆಕ್ಕಿಲಾಡಿ ಗ್ರಾ.ಪಂ.ನ ಪಿಡಿಒ ಅವರು ಮೆಸ್ಕಾಂಗೆ ನಿರಾಕ್ಷೇಪಣಾ ಪತ್ರ ನೀಡಿದ್ದರು. ಆದರೆ, ಅಂಗನವಾಡಿ ಮತ್ತು ಸಂಸ್ಥೆಯ ನಡುವೆ ವಿದ್ಯುತ್ ಸಂಪರ್ಕದ ವಿಷಯದಲ್ಲಿ ವಿವಾದವಾಗುತ್ತಿದ್ದಂತೆಯೇ 34 ನೆಕ್ಕಿಲಾಡಿ ಗ್ರಾ.ಪಂ. ಯೂಟರ್ನ್ ಹೊಡೆದಿದ್ದು, ನಮ್ಮೂರು ನಮ್ಮವರು ಸಂಘಟನೆಗೆ ಸೇರಿದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ 21.12.2024ರಂದು ಮೆಸ್ಕಾಂಗೆ ನೀಡಿದ್ದ ನಿರಾಕ್ಷೇಪಣಾ ಪತ್ರ ರದ್ದುಪಡಿಸುವಂತೆ ಮೆಸ್ಕಾಂಗೆ ಪತ್ರ ಬರೆದಿದೆ.

‘ಪುತ್ತೂರು ತಾಲೂಕು 34 ನೆಕ್ಕಿಲಾಡಿ ಗ್ರಾ.ಪಂ.ನ ಮೈಂದಡ್ಕ ಎಂಬಲ್ಲಿರುವ ನಮ್ಮೂರು- ನಮ್ಮವರು ಸಂಘದ, ಸರ್ವೇ ನಂಬರ್ 88/1ರಲ್ಲಿನ ಕಟ್ಟಡಕ್ಕೆ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯಲು 14.05.2024ರಂದು ಗ್ರಾಮ ಪಂಚಾಯತ್‌ಗೆ ಸಲ್ಲಿಸಿರುವ ಅರ್ಜಿಯ ಪ್ರಕಾರ ಸ್ಥಳ ಪರಿಶೀಲನೆ ನಡೆಸಿದ್ದು, ನಿಗದಿತ ದಾಖಲೆಗಳು ಇಲ್ಲದಿರುವುದರಿಂದ ನಿರಾಕ್ಷೇಪಣಾ ಪ್ರಮಾಣಪತ್ರ ರದ್ದುಪಡಿಸುವರೇ ಈ ಮೂಲಕ ವಿನಂತಿಸಲಾಗಿದೆ’ ಎಂದು ಗ್ರಾ.ಪಂ.ಪಿಡಿಒ ಅವರು ಮೆಸ್ಕಾಂಗೆ ಪತ್ರ ಬರೆದಿದ್ದಾರೆ.ಈ ಹಿಂದೆ ವಿದ್ಯುತ್ ಸಂಪರ್ಕಕ್ಕೆ ನಿರಾಕ್ಷೇಪಣಾ ಪತ್ರ ನೀಡಿದ್ದ ಗ್ರಾ.ಪಂ. ಇದೀಗ ಅದನ್ನು ರದ್ದುಪಡಿಸುವಂತೆ ಕೋರಿ ಮೆಸ್ಕಾಂಗೆ ಪತ್ರ ಬರೆದಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

34 ನೆಕ್ಕಿಲಾಡಿಯ ಮೈಂದಡ್ಕದಲ್ಲಿ ಅಂಗನವಾಡಿ ಕಾರ್ಯಾಚರಿಸುತ್ತಿರುವ ಕಟ್ಟಡದ ವಿವಾದದ ಬಗ್ಗೆ ತಿಳಿದಿದೆ.ಭೂ ಸರ್ವೆ ನಡೆಸಿ ಅಂಗನವಾಡಿಗೆ ಅಲ್ಲೇ ಪಕ್ಕದಲ್ಲಿ ಜಾಗವನ್ನು ಗುರುತಿಸಲಾಗಿದೆ.ಈಗ ಆ ಕಟ್ಟಡದ ಜಮೀನು ಸರಕಾರಿ ಭೂಮಿಯಾಗಿದೆ.ಅದನ್ನು ಯಾರಿಗೂ ಮಂಜೂರುಗೊಳಿಸಲಾಗಿಲ್ಲ. ಹಾಗಾಗಿ ಇದು ಅನಧಿಕೃತ ಕಟ್ಟಡ.ಅಂಗನವಾಡಿಗೆ ಕಟ್ಟಡ ನಿರ್ಮಾಣವಾಗಲಿ.ಆ ಬಳಿಕ ಈ ಬಗ್ಗೆ ತೀರ್ಮಾನಿಸಲಾಗುವುದು

ಪುರಂದರ ಹೆಗ್ಡೆ, ತಹಶೀಲ್ದಾರರು, ಪುತ್ತೂರು

ಭೂಸರ್ವೇ ನಡೆಸಿದಾಗ ಅಂಗನವಾಡಿಗೆ ಮಂಜೂರುಗೊಳಿಸಿದ ಜಾಗ ಅಲ್ಲೇ ಪಕ್ಕದಲ್ಲಿ ಬರುತ್ತದೆ.ಈಗ ಇಲ್ಲಿ ನಿರ್ಮಾಣವಾಗಿರುವ ಕಟ್ಟಡದ ಅರ್ಧ ಭಾಗ ಜಿಲ್ಲಾ ಪಂಚಾಯತ್ ರಸ್ತೆ ಮಾರ್ಜಿನ್‌ನಲ್ಲಿ ಬರುತ್ತಿದೆ.
ಮೋಹನ್, ಭೂಮಾಪಕರು ಭೂಮಾಪನ ಇಲಾಖೆ ಪುತ್ತೂರು



LEAVE A REPLY

Please enter your comment!
Please enter your name here