ಆಲಂಕಾರು: ಸಂಸ್ಕೃತಿ ಬೆಳೆದರೆ ದೇಶ ಉಳಿಯತ್ತದೆ. ಯುವ ಪೀಳಿಗೆ ಸಂಸ್ಕೃತಿಯನ್ನು ಉಳಿಸಿಕೊಂಡು ಜೀವನ ಕಟ್ಟಿಕೊಳ್ಳಬೇಕು. ಸಮಾಜಕ್ಕೆ ಕೊಡುಗೆ ನೀಡುವುದರ ಮೂಲಕ ನಮ್ಮ ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಜ.3ರಂದು ನಡೆದ ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಸಮಾಜಕ್ಕೋಸ್ಕರ ನಾವು ಬದುಕಬೇಕು. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಆಗ ಜೀವನ ಸಾರ್ಥಕವಾಗುತ್ತದೆ. ವಿದ್ಯಾರ್ಥಿಗೆ ಅಕ್ಷರ ಜ್ಞಾನ ನೀಡುವುದಕ್ಕಿಂತ ಹೆಚ್ಚಾಗಿ ಅಂಕದ ಕಡೆ ಒತ್ತು ನೀಡುವ ಪದ್ದತಿ ಬೆಳೆಯುತ್ತಿದೆ. ಜೊತೆಗೆ ಶಿಕ್ಷಣವನ್ನು ವ್ಯವಹಾರಿಕವಾಗಿ ನಡೆಸುವುದರಿಂದ ನಿಜವಾದ ಶಿಕ್ಷಣದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಶಿಕ್ಷಣ ಪದ್ದತಿಯಲ್ಲಿ ಬದಲಾವಣೆಯಾದಾಗ ವಿದ್ಯಾರ್ಥಿಗಳು ಸಂಸ್ಕೃತಿಯ ರಾಯಭಾರಿಗಳಾಗಿ ಹೊರಹೊಮ್ಮುತ್ತಾರೆ ಎಂದರು.
ಸಂಸ್ಥೆಯ ಸ್ಥಾಪಕ ಸಂಚಾಲಕ ಶಂಕರ ಭಟ್ ನಿಸರ್ಗ, ಅಖಿಲ ಭಾರತ ಜನಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ ಸವಣೂರು, ಹಿರಿಯ ವಿದ್ಯಾರ್ಥಿ ರಕ್ಷಿತ್ ರಾಜ್ ಶುಭಹಾರೈಸಿದರು. ಶ್ರೀ ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಸುರೇಶ್ ಕುಮಾರ್ ಕುಡೂರು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಗೌರವಾಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲು, ಕಾರ್ಯದರ್ಶಿ ಇಂದುಶೇಖರ ಶೆಟ್ಟಿ, ಕನ್ನಡ ಮಾಧ್ಯಮ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಲೋಕೇಶ್ ಅರ್ಬಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಪ್ರಸಾದ್ ಉಪಸ್ಥಿತರಿದ್ದರು. ಸಾಧಕ ಹಾಗು ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕನ್ನಡ ವಿಭಾಗದ ಮುಖ್ಯಶಿಕ್ಷಕಿ ಆಶಾ ಎಸ್ ರೈ ವರದಿ ವಾಚಿಸಿದರು. ಸಂಸ್ಥೆಯ ಸಂಚಾಲಕ ಗಂಗಾಧರ ಗೌಡ ಪ್ರಸ್ತಾವಿಸಿ ಸ್ವಾಗತಿಸಿದರು. ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಸತೀಶ್ ಜಿ ಆರ್ ವಂದಿಸಿದರು. ಶಿಕ್ಷಕ ಚಂದ್ರಹಾಸ ಕುಂಟ್ಯಾನ ನಿರೂಪಿಸಿದರು. ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ, ಬಳಿಕ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಕಡಬ ಠಾಣಾ ಹೆಡ್ಕಾನ್ಸ್ಟೇಬಲ್ ಹರೀಶ್ ನೆರವೇರಿಸಿದರು.