ಮಸೀದಿಗಳು ಶಾಂತಿ, ಸೌಹಾರ್ದತೆ ಸಾರುವ ಕೇಂದ್ರ-ಪುತ್ತೂರು ತಂಙಳ್
ಪುತ್ತೂರು: ಕುಂಬ್ರ ಸಮೀಪದ ಸಾರೆಪುಣಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮುಹಿಯುದ್ದೀನ್ ಜುಮಾ ಮಸೀದಿ ಕಟ್ಟಡದ ಉದ್ಘಾಟನೆ ಜ.10ರಂದು ನಡೆಯಿತು.
ದಾರುಲ್ ಉಲೂಮ್ ಮದರಸ ಮತ್ತು ಜಮಾಅತ್ ಕಮಿಟಿ ಸಾರೆಪುಣಿ ಇದರ ಗೌರವಾಧ್ಯಕ್ಷರಾದ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಹಾಗೂ ಮಹಮ್ಮದ್ ಮಸೂದ್ ಸಾರೆಪುಣಿ ಅಲೈನ್ ಅಬುದಾಬಿ, ಮಸೀದಿಯನ್ನು ಉದ್ಘಾಟಿಸಿದರು. ಬಳಿಕ ವಕ್ಫ್ ನಿರ್ವಹಣೆ ಮತ್ತು ಖುತುಬಾ ಪಾರಾಯಣ ನಿರ್ವಹಿಸಿದ ಪುತ್ತೂರು ತಂಙಳ್ ಮಾತನಾಡಿ, ಒಂದು ಊರಿನಲ್ಲಿ ಮಸೀದಿ ನಿರ್ಮಾಣವಾಗುವುದೆಂದರೆ ಅದು ಆ ಊರವರ ಭಾಗ್ಯ, ಈ ಪ್ರದೇಶದ ಸತ್ಯ ವಿಶ್ವಾಸಿಗಳು ಶುಕ್ರವಾರ ಹಾಗೂ ಇತರ ದಿನಗಳಲ್ಲಿ ಇದೇ ಮಸೀದಿಯಲ್ಲಿ ನಮಾಜು ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದರು.
ಅರಬಿ ಅವರು ಇಲ್ಲಿಗೆ ಮಸೀದಿ ನಿರ್ಮಿಸಿಕೊಟ್ಟರೂ ಅದರಲ್ಲಿ ಅಲ್ಪ ಅಂಶವನ್ನು ಊರವರು ಸೇರಿ ಕೊಟ್ಟಿರುವುದು ಒಳ್ಳೆಯ ವಿಚಾರ, ನಿಮ್ಮ ಸೇವೆ ಅಲ್ಲಾಹನಿಗೆ ಇಷ್ಟದಾಯಕ ಸೇವೆಯಾಗಿದೆ, ಮಸೀದಿ ನಿರ್ಮಿಸಿಕೊಡುವುದು, ಅದಕ್ಕಾಗಿ ಸಹಕಾರ ನೀಡುವುದು ಪುಣ್ಯದ ಕರ್ಮವಾಗಿದೆ, ಮಸೀದಿ ಒಂದು ಊರಿನ ಶಾಂತಿ, ಸೌಹಾರ್ದಯತೆಯ ಕೇಂದ್ರವಾಗಿದೆ ಎಂದು ಅವರು ಹೇಳಿದರು.
ಮಸೀದಿ ನಿರ್ಮಾಣ ಆದ ಮಾತ್ರಕ್ಕೆ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ, ಪ್ರತಿ ನಿತ್ಯ ಮಸೀದಿಯಲ್ಲಿ ನಮಾಜು ಮಾಡುವುದು, ಸತ್ಕರ್ಮಗಳನ್ನು ಹೆಚ್ಚಿಸುವ ಮುಖಾಂತರ ಮಸೀದಿಯನ್ನು ನಿತ್ಯ ಧನ್ಯಗೊಳಿಸುತ್ತಿರಬೇಕು, ಈ ಮಸೀದಿಯ ನಿರ್ಮಾಣಕ್ಕೆ ಯಾರೆಲ್ಲಾ ಸಹಕಾರ ನೀಡಿದ್ದಾರೋ ಅವರಿಗೆಲ್ಲಾ ಅರ್ಹವಾದ ಪ್ರತಿಫಲ ಅಲ್ಲಾಹು ನೀಡುವುದರಲ್ಲಿ ಸಂಶಯವಿಲ್ಲ ಎಂದು ಪುತ್ತೂರು ತಂಙಳ್ ಹೇಳಿದರು.
ಈ ಸಂದರ್ಭದಲ್ಲಿ ಅರಿಯಡ್ಕ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಸ್ವಾಗತ ಸಮಿತಿ ಚೇರ್‌ಮೆನ್ ಅಬ್ದುಲ್ ಅಝೀಝ್ ಕಟ್ಟತ್ತಾರು, ಕನ್ವೀನರ್ ಮುನೀರ್ ನ್ಯಾಷನಲ್, ಸಾರೆಪುಣಿ ದಾರುಲ್ ಉಲೂಮ್ ಮದರಸ ಮತ್ತು ಜಮಾಅತ್ ಕಮಿಟಿಯ ಅಧ್ಯಕ್ಷ ಅಶ್ರಫ್ ಸಾರೆಪುಣಿ ಹಾಗೂ ಸಾರೆಪುಣಿ ದಾರುಲ್ ಉಲೂಮ್ ಮದರಸ ಮತ್ತು ಜಮಾಅತ್ ಕಮಿಟಿಯ ಪದಾಧಿಕಾರಿಗಳು, ಸ್ವಾಗತ ಸಮಿತಿಯ ಪದಾಧಿಕಾರಿಗಳು, ಜಮಾಅತರು, ಊರವರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.