*ಸಾವಯವಕ್ಕೆ ಪ್ರಥಮ ಹೆಗ್ಗಳಿಗೆ ಸುಹಾಸ್ – ಮುಳಿಯ ಕೇಶವಪ್ರಸಾದ್
*ಸಾವಯವ ಎಲ್ಲರ ಜೀವನ ಬೆಳಗಿಸುತ್ತದೆ – ಶ್ರೀದೇವಿ ಕಾನಾವು
*ಮರಿಕೆ ದೊಡ್ಡ ಬ್ರ್ಯಾಂಡ್ ಆಗಿ ಮೂಡಿ ಬರಲಿ – ಕೃಷ್ಣಪ್ರಸಾದ್ ಅಮ್ಮಂಕಲ್ಲು
*ಮರಿಕೆಯ ಹಲವಾರು ಶಾಖೆ ತೆರೆಯಲಿ – ರೂಪಲೇಖ
*ಸಾವಯವ ಪ್ರೊಡಕ್ಟ್ ಅಲ್ಲ ಇದೊಂದು ಪದ್ದತಿ – ಕೃಷ್ಣನಾರಾಯಣ ಮುಳಿಯ
*ಸುಹಸ್ ಅವರ ಕೈಗುಣ ಒಳ್ಳೆಯದಿದೆ – ವೆಂಕಟೇಶ್ ಭಟ್
ಪುತ್ತೂರು: ಕಳೆದ 7 ವರ್ಷಗಳಿಂದ ಯಶಸ್ವಿಯಾಗಿ ಸಾಗುತ್ತಿರುವ ಮರಿಕೆ ಸಾವಯವ ಮಳಿಗೆಯು ಜ.14ರ ಮಕರ ಸಂಕ್ರಮಣದ ಶುಭ ದಿನದಂದು ಎಪಿಎಂಸಿ ರಸ್ತೆ ಆದರ್ಶ ಆಸ್ಪತ್ರೆಯ ಎದುರಿನಲ್ಲಿರುವ ‘ತ್ರಿನೇತ್ರ ಕಾಂಪ್ಲೆಕ್ಸ್’ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.
ಶ್ಯಾಮ ಜ್ಯುವೆಲ್ಸ್ ಗ್ರೂಪ್ನ ಚೇಯರ್ಮ್ಯಾನ್ ಆಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ ದೀಪ ಪ್ರಜ್ವಲನೆ ಮಾಡಿದರು. ಪುತ್ತೂರು ಶಾರದಾ ನೇತ್ರಾಲಯದ ಶ್ರೀದೇವಿ ಕಾನಾವು ಅವರು ಒಲೆಗೆ ಅಗ್ನಿಸ್ಪರ್ಶ ಮಾಡಿ ಹಾಲು ಉಕ್ಕಿಸುವ ಮೂಲಕ ಸಂಸ್ಥೆಯ ಕಾರ್ಯಗಳಿಗೆ ಅಧೀಕೃತ ಚಾಲನೆ ನೀಡಿದರು.
ಸಾವಯವಕ್ಕೆ ಪ್ರಥಮ ಹೆಗ್ಗಳಿಗೆ ಸುಹಾಸ್ :
ಶ್ಯಾಮ ಜ್ಯುವೆಲ್ಸ್ ಗ್ರೂಪ್ನ ಚೇಯರ್ಮ್ಯಾನ್ ಆಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ ಅವರು ಮಾತನಾಡಿ ದೇಶದಲ್ಲಿ ಯುವಕರು ಯಾವ ರೀತಿಯಲ್ಲಿ ಜನರ ಆರೋಗ್ಯ ಸುಧಾರಣೆ ಮಾಡುತ್ತಾರೆ ಎಂಬುದಕ್ಕೆ ಮರಿಕೆ ಸಂಸ್ಥೆ ಉದಾಹರಣೆಯಾಗಿದೆ. ಈ ಸಂಸ್ಥೆಯ ಮಾನಸ ಮತ್ತು ಸುಹಾಸ್ ಅವರಿಗೆ ಅಭಿನಂದನೆ ಸಲ್ಲಿಸಬೇಕು. ಪುತ್ತೂರಿನಲ್ಲಿ ಸಾವಯವಕ್ಕೆ ಪ್ರಥಮ ಹೆಗ್ಗಳಿಕೆಯಾಗಿ ಸುಹಾಸ್ ನಮಗೆ ಕಾಣುತ್ತಿದ್ದಾರೆ. ಕೊರೋನಾ ನಮಗೆ ಹೊಸತನ ಕೊಟ್ಟಿದೆ. ಇವತ್ತು ಸಾತ್ವಿಕ ಆಹಾರದಿಂದ ಸಾತ್ವಿಕತೆ ಕಾಣುತ್ತಿದ್ದೇವೆ. ಸಾವಯವದಲ್ಲಿ ಸಾತ್ವಿಕತೆ ಇದೆ ಎಂದರು.
ಸಾವಯವ ಎಲ್ಲರ ಜೀವನ ಬೆಳಗಿಸುತ್ತದೆ:
ಶಾರದಾ ನೇತ್ರಾಲಯದ ಶ್ರೀದೇವಿ ಕಾನಾವು ಅವರು ಮಾತನಾಡಿ, ಸುಹಾಸ್ ಸಾವಯವದ ಮೂಲಕ ಎಲ್ಲರಿಗೂ ಉತ್ತಮ ಆರೋಗ್ಯವಂತ ದಾರಿ ತೋರಿಸಿದ್ದಾರೆ. ಸಾವಯವೇ ಇವತ್ತು ಜನರ ಜೀವನ ಬೆಳಗಿಸುತ್ತದೆ. ಅವರ ಸಂಸ್ಥೆಯಲ್ಲಿ ಗುಣಮಟ್ಟದಲ್ಲಿ ರಾಜಿಯಿಲ್ಲ. ಇದು ಗ್ರಾಹಕರಲ್ಲಿ ವಿಶ್ವಾಸ ಮೂಡುತ್ತದೆ ಎಂದರು.
ಮರಿಕೆ ದೊಡ್ಡ ಬ್ರ್ಯಾಂಡ್ ಆಗಿ ಮೂಡಿ ಬರಲಿ:
ಗ್ರಾಮರಾಜ್ಯ ಟ್ರಸ್ಟ್ ಸಂಯೋಜಕ ಕೃಷ್ಣಪ್ರಸಾದ್ ಅಮ್ಮಂಕಲ್ಲು ಅವರು ಮಾತನಾಡಿ ಸುಹಾಸ್ ಅವರ ಕಾರ್ಯಗಳಿಗೆ ಆರಂಭದಲ್ಲಿ ಸಾಕಷ್ಡು ಜನ ಅವಮಾನ ತಮಾಷೆ ಮಾಡುತ್ತಿದ್ದರು. ಆದರೆ ಅವರ ಕಷ್ಟಗಳ ಕೊನೆಯಲ್ಲಿ ಯಶಸ್ಸು ಸಿಕ್ಕಿದೆ. ಸುಹಾಸ್ ಅವರು ವ್ಯವಹಾರವಾಗಿ ಮಾಡುತ್ತಿರಲಿಲ್ಲ. ಹೃದಯವಂತಿಕೆಯಾಗಿ ಮಾಡುತ್ತಿದ್ದರು.ಗ್ರಾಹಕರು 7 ವರ್ಷದಲ್ಲಿ ಕೊಟ್ಟ ಪ್ರೀತಿ ಅವರಿಗೆ ಸಿಕ್ಕಿದೆ. ಸಾವಯವ ಮಾರ್ಕೆಟ್ ಪ್ರಾರಂಭದಲ್ಲಿ ಅತ್ಯಂತ ಕಷ್ಟ. ಇವತ್ತು ಬೇರೆ ಬೇರೆ ಆಡಂಬರಕ್ಕೆ ದುಂದು ವೆಚ್ಚ ಮಾಡುವ ಬದಲು ನಾವು ತಿನ್ನುವ ವಸ್ತುವಿಗೆ ಪ್ರಾಮುಖ್ಯತೆ ಕೊಡಬೇಕು. ಆ ಬದಲಾವಣೆ ಈಗ ಆಗುತ್ತಿದೆ. ಮುಂದೆ ಮರಿಕೆ ದೊಡ್ಡ ಬ್ರ್ಯಾಂಡ್ ಆಗಿ ಮೂಡಿ ಬರಲಿ ಎಂದು ಹೇಳಿದರು.
ಮರಿಕೆಯ ಹಲವಾರು ಶಾಖೆ ತೆರೆಯಲಿ:
ಎಸ್ಡಿಪಿ ರೆಮೆಡೀಸ್ ನಿರ್ದೇಶಕಿ ರೂಪಾಲೇಖ ಅವರು ಮಾತನಾಡಿ ಯುವ ಉದ್ಯಮಿ ಸುಹಾಸ್ ಅವರ ಕಲ್ಪಣೆಯಲ್ಲಿ ಸಾವಯವ ಮಳಿಗೆ ಯಶಸ್ಸು ಕಂಡಿದೆ. ವಿಷಮುಕ್ತ ಆಹಾರವನ್ನು ಅವರು ಜನರಿಗೆ ಕೊಡುತ್ತಿದ್ದಾರೆ. ಇಂತಹ ಹಲವಾರು ಶಾಖೆಯನ್ನು ಅವರು ತೆರೆಯಲಿ ಎಂದರು.
ಸುಹಾಸ್ ಅವರ ಕೈಗುಣ ಒಳ್ಳೆಯದಿದೆ:
ತ್ರಿನೇತ್ರ ಕಾಂಪ್ಲೆಕ್ಸ್ನ ಪಾಲುದಾರ ವೆಂಕಟೇಶ್ ಭಟ್ ಅವರು ಮಾತನಾಡಿ, ನಾವು ಇಲ್ಲಿ ಕಟ್ಟಡ ಪ್ರಾರಂಭ ಮಾಡುವಾಗ ಮೊದಲಿಗೆ ಬಂದದ್ದು ಸುಹಾಸ್. ಅವರು ಬಂದು ಬೋನಿ ಮಾಡಿದರು. ಅವರ ಕೈಗುಣವೋ ಏನೋ ಕಟ್ಟಡದ ಎಲ್ಲಾ ಕೊಠಡಿಗಳು ಸೇಲ್ ಆಗಿದೆ. ಇವರ ವ್ಯವಸ್ಥೆ ಉತ್ತಮವಾಗಿದ್ದ ಹಿನ್ನಲೆಯಲ್ಲಿ ಈ ಸಂಸ್ಥೆ ಜನ ಬೆಂಬಲದೊಂದಿಗೆ ದೇಶಕ್ಕೆ ಮಾದರಿಯಾಗಿರಲಿ ಎಂದರು.
ಸಾವಯವ ಪ್ರೊಡಕ್ಟ್ ಅಲ್ಲ ಇದೊಂದು ಪದ್ದತಿ:
ಶ್ಯಾಮ ಜ್ಯುವೆಲ್ಸ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಅವರು ಮಾತನಾಡಿ ಸಾವಯವ ಒಂದು ಪ್ರೊಡಕ್ಟ್ ಅಲ್ಲ ಇದೊಂದು ಪದ್ದತಿ. ಇದನ್ನು ಪರಿಚಯ ಮಾಡಿದ್ದು ಸದಾಶಿವಣ್ಣ. ಸಾವಯವನ್ನು ನಾವು ಹಿಂದೆ ಆರಂಭಿಸಿದ್ದೆವೆ ಆಗ ಜಾಗೃತಿ ಇರಲಿಲ್ಲ. ಮುಳಿಯ ಫಾರ್ಮ್ಸ್ನಲ್ಲಿ ಭತ್ತ ಬೆಳೆಸಿದ್ದೇವೆ. ಹಲವಾರು ರೀತಿಯಲ್ಲಿ ಪ್ರಯತ್ನ ಮಾಡಿ ಕೈ ಸುಟ್ಟು ಬಿಟ್ಟಿದ್ದೆವು. ಆದರೆ ಅದನ್ನೇ ಮುಂದುವರಿಸಿದ ಸುಹಾಸ್ ಅವರಲ್ಲಿ ನನ್ನನ್ನೇ ಕಂಡೆ. 40 -50 ವರ್ಷದ ಹಿಂದಿನ ಜೀವನ ಪದ್ಧತಿ. ಇವತ್ತಿನ ಪದ್ಧತಿಗೂ ವ್ಯತ್ಯಾಸವಿದೆ. ಇವತ್ತು ನಾವೆಲ್ಲ ವಿಷ ತಿಂದು ಬೆಳೆದಿದ್ದೇವೆ. ನಮ್ಮ ಹಿರಿಯರು ಉತ್ತಮ ಆಹಾರ ಸೇವಿಸಿ ಇವತ್ತಿಗೂ ಆರೋಗ್ಯವಂತರಾಗಿದ್ದಾರೆ. ಇವತ್ತು ಮರಿಕೆ ಸಂಸ್ಥೆಯಿಂದಾಗಿ ನಮ್ಮ ಮನೆ ಮತ್ತು ಸಂಸ್ಥೆ ವಿಷಮುಕ್ತ ಆಹಾರವಾಗಿದೆ. ಈ ನಿಟ್ಟಿನಲ್ಲಿ ಜಗತ್ತಿನ ಎಲ್ಲಾ ಕಡೆ ಮರಿಕೆ ಸಾವಯವ ಮಳಿಗೆ ತೆರೆದುಕೊಳ್ಳಲಿ ಎಂದರು.
ಗ್ರಾಹಕರೇ ನಮ್ಮ ಶಕ್ತಿ :
ಮರಿಕೆ ಸಾವಯವ ಮಳಿಗೆಯ ಪ್ರವರ್ತಕ ಸುಹಾಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಎಳವೆಯಲ್ಲಿ ಯಾವುದೇ ಆಲೋಚನೆ ಇಲ್ಲದ ನನಗೆ ದೊಡ್ಡಪ್ಪ ಚಂದ್ರಶೇಖರ್ ಅವರ ಮೈಸೂರಿನ ಮನೆಯಲ್ಲಿ ತಯಾರು ಮಾಡಿದ ಪ್ರೊಡಕ್ಟ್ಗಳನ್ನು ಅವರೊಂದಿಗೆ ಸ್ಟಾಲ್ಗಳಿಗೆ ಹೋಗುವ ಸಂಭ್ರಮ ಬೆಳೆಯಿತು. ಕಾಲೇಜು ವಿದ್ಯಾಭ್ಯಾಸ ಆದ ಬಳಿಕ ಕೃಷಿಯಲ್ಲೇ ಇರಬೇಕೆಂದು ಯೋಚನೆ ಮಾಡಿ ಆ ಸಂದರ್ಭದಲ್ಲಿ ನನಗೆ ನನ್ನ ಮಾವ ಮಾಡುತ್ತಿದ್ದ ಐಸ್ಕ್ರೀಮ್ ಅನ್ನು ನಾನು ಮಾರ್ಕೆಟ್ ಮಾಡಲು ಹೊರಟೆ. ಆದರೆ ಅಂಗಡಿ ಮಾಡಲು ಧೈರ್ಯ ಇಲ್ಲದಾಗ ಮುಳಿಯ ಕೃಷ್ಣನಾರಾಯಣ ಅವರು ಆ ಧೈರ್ಯ ಕೊಟ್ಟರು. ಆಗ ಸ್ಟಾಲ್ಗೆ ಹೋಗುತ್ತಿದ್ದ ವೇಳೆ ನನ್ನನ್ನು ಹಗುರವಾಗಿ ಮಾತನಾಡಿದ್ದೂ ಇದೆ. ಇಂತಹ ನೆಗೆಟಿವ್ ಕಮೆಂಟ್ಸ್ಗಳನ್ನು ಕೇಳಿ ಅದನ್ನು ತಂದೆಯಲ್ಲಿ ಹೇಳುತ್ತಿದ್ದೆ. ಆಗ ಕಮೆಂಟ್ಸ್ಗೆ ಉತ್ತರ ಕೆಲಸದಲ್ಲಿ ಕೊಡಬೇಕೆಂದು ತಂದೆ ಹೇಳಿದಂತೆ. ಯಾವುದೇ ನೆಗೆಟಿವ್ ಕಮೆಂಟ್ಸ್ಗಳಿಗೆ ಬಾಯಿಯಲ್ಲಿ ಉತ್ತರ ಕೊಡದೆ ಕೆಲಸದಲ್ಲಿ ಮಾಡಿ ತೋರಿಸಿದ್ದೇವೆ. ಮುಂದೆ ಕೋವಿಡ್ ನಮಗೆ ಜನರಲ್ಲಿ ಆರೋಗ್ಯದ ಕಾಳಜಿ ಮೂಡಿಸಿತು. ಆಗ ನಮ್ಮ ಮಳಿಗೆಗೆ ಗ್ರಾಹಕರ ಸಂಖ್ಯೆ ಹೆಚ್ಚಾಯಿತು. ಹಾಗೆ 7 ವರ್ಷ ಹೇಗೆ ಹೋಗಿದೆ ಎಂಬುದು ಗೊತ್ತಾಗಿಲ್ಲ. ಮುಂದೆ ಸ್ವಂತ ಜಾಗಕ್ಕೆ ಚಿಂತನೆ ಮಾಡಿದಾಗ ಅದೂ ಕೂಡಾ ಕೈಗೂಡಿ ಬಂತು. ನಮ್ಮ ಶಕ್ತಿ ನಮ್ಮ ಗ್ರಾಹಕರು. ಮಳಿಗೆಯಲ್ಲಿ ಏನು ಉತ್ಪನ್ನವಿದೆಯೋ ಅದರ ಬಗ್ಗೆ ಉತ್ತಮ ಅಭಿಪ್ರಾಯ ತಿಳಿಸಿದ್ದಾರೆ.
ವೇದಿಕೆಯಲ್ಲಿ ತ್ರಿನೇತ್ರ ಕಾಂಪ್ಲೆಕ್ಸ್ನ ಪಾಲುದಾರರಾದ ಗಿರಿಧರ ಹೆಗ್ಡೆ, ಸೃಜನ್ ಊರುಬೈಲು ಉಪಸ್ಥಿತರಿದ್ದರು. ಇದೇ ಸಂದರ್ಭ ಕಟ್ಟಡ ಕೊಠಡಿಯನ್ನು ಖರೀದಿಸಲು ಮಾಲಕರನ್ನು ಪರಿಚಯಿಸಿದ ಶಾಕೀರ್ ಕೂರ್ನಡ್ಕ, ಸುಹಾಸ ಅವರ ಭಾವ ಕೃಷ್ಣ, ಸಂಸ್ಥೆಯ ಒಳಾಂಗಣ ವಿನ್ಯಾಸಗಾರ ಭವಿತ್, ಧನ್ವಿತ್, ತೇಜಸ್ವಿನಿ, ನಿಶಾಂತ್ ಅವರನ್ನು ಗೌರವಿಸಲಾಯಿತು.
ಸಂಸ್ಥೆಯ ಮಾಲಕ ಸುಹಾಸ್ ಮರಿಕೆ ಅವರ ತಾಯಿ ಉಮಾಶಂಕರಿ ಅವರು ಬರೆದ ಆಶಯಗೀತೆಯನ್ನು ಸೊಸೆ ಮಾನಸ ಸುಹಾಸ್ ಮರಿಕೆ ಮತ್ತು ಸ್ಮಿತಾ ಹಾಡಿದರು. ಮಾನಸ ಸುಹಾಸ್ ಸ್ವಾಗತಿಸಿ. ಸುಹಾಸ್ ಅವರ ತಂದೆ ಸದಾಶಿವ ಅವರು ವಂದಿಸಿದರು. ಮರಿಕೆ ಸಾವಯವ ಮಳಿಗೆಯ ಉತ್ತೇಜಕ ಶಿವಸುಬ್ರಹ್ಮಣ್ಯ ಪೆಲತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾವಯವದಿಂದ ತಯಾರಿಸಿದ ಮೆಂತೆಫಲಾವ್ , ಹೆಸರು ಉಪಹಾರವಾಗಿ ನೀಡಲಾಯಿತು. ಇದೊರಂದಿಗೆ ಎಳ್ಳು ಜ್ಯೂಸ್ ಕೂಡಾ ವಿಶೇಷತೆಯನ್ನು ಪಡೆದುಕೊಂಡಿತು. ಈ ಸಂದರ್ಭ ಸುಹಾಸ್ ಅವರ ಅತ್ತೆ, ಮಾವ, ಬಂಧುಗಳು, ಸಹಿತ ಹಿತೈಷಿಗಳು, ಗ್ರಾಹಕರು ಉಪಸ್ಥಿತರಿದ್ದರು.
‘ನ್ಯಾಚುರಲ್’ ಮತ್ತು ‘ಆರ್ಗಾನಿಕ್’ ಎಂಬೆರಡು ಪದಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನಮನ್ನಣೆಯನ್ನು ಗಳಿಸುತ್ತಿದೆ. ನಾವು ವಾಸಿಸುವ ಪರಿಸರದಿಂದ ಹಿಡಿದು ನಾವು ತಿನ್ನುವ ಆಹಾರ ಮತ್ತು ಕುಡಿಯುವ ನೀರಿನವರೆಗೆ ಎಲ್ಲವೂ ಕಲುಷಿತಗೊಂಡಿರುವುದೇ ಇದಕ್ಕೆ ಕಾರಣವಾಗಿದೆ. ರೋಗ ಮುಕ್ತ ಆರೋಗ್ಯಕರ ಜೀವನಕ್ಕಾಗಿ ಇಂದು ನಮಗೆ ಪ್ರಕೃತಿ ಜನ್ಯ ಆಹಾರ ಪದಾರ್ಥಗಳು ಬಹಳ ಮುಖ್ಯವಾಗಿದೆ. ಹಾಗಾಗಿ,ಮಹಾನಗರಗಳಲ್ಲಿ ಮಾತ್ರವಲ್ಲದೇ ಪುತ್ತೂರಿನಂತಹ ಗ್ರಾಮೀಣ ಪ್ರದೇಶಗಳಲ್ಲೂ ಸಹ ಇಂದು ಈ ಆರ್ಗಾನಿಕ್ ಉತ್ಪನ್ನಗಳು ಜನರ ದೈನಂದಿನ ಜೀವನದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಲಾರಂಭಿಸಿವೆ.
ಮಳಿಗೆಯಲ್ಲಿ ಗ್ರಾಹಕರಿಗೆ ಈ ಎಲ್ಲಾ ‘ಆರ್ಗಾನಿಕ್’ ಸೇವಾ-ಸೌಲಭ್ಯಗಳು ಲಭ್ಯ:
ವಿಶಾಲವಾದ ಮಳಿಗೆ ಮತ್ತು ವಿಶಾಲವಾದ ಪಾರ್ಕಿಂಗ್ ಸೌಲಭ್ಯ, ಪ್ರತೀ ಮಂಗಳವಾರ ಮಧ್ಯಾಹ್ನ ನಂತರ ಸಾವಯವ ಹಣ್ಣು ಮತ್ತು ತರಕಾರಿ ಸಂತೆ, ಸಾವಯವ ಧಾನ್ಯಗಳು, ಅಕ್ಕಿ-ಬೇಳೆ ಕಾಳು, ಎಲ್ಲಾ ಬಗೆಯ ಸಿರಿ ಧಾನ್ಯಗಳು ಅತೀ ಕಡಿಮೆ ಬೆಲೆಯಲ್ಲಿ, ಸಾಂಪ್ರದಾಯಿಕ ತಿಂಡಿ ತಿನಸುಗಳು ಮತ್ತು ಮನೆಯಲ್ಲೇ ತಯಾರಿಸಿದ ಹುಡಿ, ದೇಸಿ ಗೋವಿನ ಉತ್ಪನ್ನಗಳು ದೇಸಿ ಹಸುವಿನ ಹಾಲು, ತುಪ್ಪ, ಮಜ್ಜಿಗೆ, ಪನೀರ್.. ಇತ್ಯಾದಿ. ಗೃಹ ಉಪಯೋಗಿ ಸಲಕರಣೆಗಳು, ಗಾರ್ಡನ್ ಇಕ್ಯುಪ್ಮೆಂಟ್ಗಳು, ಆರ್ಟಿಫಿಷಿಯಲ್ ರಹಿತ ಪರ್ಫ್ಯೂಮ್ಗಳು, ಬಾಡಿ ವಾಶ್ ಹಾಗೂ ಶಾಂಪೂಗಳು, ಶುದ್ಧ ಕುಂಕುಮ ಮತ್ತು ಅರಶಿನ, ಶುದ್ಧ ಅಗರ್ ಬತ್ತಿ ಧೂಪಗಳು, ಡ್ರೈ ಫ್ರೂಟ್ಸ್ ಮತ್ತು ನಟ್ಸ್, ಮರಿಕೆ ನ್ಯಾಚುರಲ್ ಐಸ್ ಕ್ರೀಂ ಲಭ್ಯವಿದೆ.