ಪುತ್ತೂರು: ಅಯ್ಯಪ್ಪ ಸ್ವಾಮಿಯ ಭಕ್ತರಾಗಿರುವ ಮಾಧವ ಸ್ವಾಮಿ ಅವರು ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಳದ ಅನ್ನಪ್ರಸಾದ ವಿತರಣೆಗೆ ಸಂಬಂಧಿಸಿ ಸುಮಾರು ರೂ. 1. 20 ಲಕ್ಷ ವೆಚ್ಚದ ಅಡುಗೆ ಪಾತ್ರೆಗಳನ್ನು ಮಕರಸಂಕ್ರಮಣದ ದಿನವಾದ ಜ.14ರಂದು ದೇವಳಕ್ಕೆ ಸಮರ್ಪಣೆ ಮಾಡಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ಮೂಲಕ ದೇವಳದ ಅಡುಗೆ ವಿಭಾಗಕ್ಕೆ ಸಮರ್ಪಣೆ ಮಾಡಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಳಿನಿ ಪಿ ಶೆಟ್ಟಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ವಕೀಲ ನಾಗರಾಜ್, ರತ್ನಾಕರ ನಾಕ್, ಶ್ರೀಧರ ಪಟ್ಲ ಮತ್ತು ಎ ಮಾಧವ ಸ್ವಾಮಿ ಅವರ ಪತ್ನಿ ನಿರ್ಮಲ ಎ, ಪುತ್ರಿಯರಾದ ಶ್ರುತಿ, ಶ್ವೇತಾ ಜೊತೆಗಿದ್ದರು.
ಪ್ರಾರ್ಥನೆಗೆ ಪೂರಕ ಭಕ್ತರ ಸಹಕಾರ ಸಿಗುತ್ತಿದೆ
ನಮ್ಮ ವ್ಯವಸ್ಥಾಪನಾ ಸಮಿತಿ ಬಂದ ಬಳಿಕ ನಾವು ಮೊದಲು ಅನ್ನಪ್ರಸಾದಕ್ಕೆ ಮಹತ್ವ ಕೊಟ್ಟಿದ್ದೇವೆ. ಅದಕ್ಕೆ ಸರಿಯಾಗಿ ಭಕ್ತರ ಸ್ಪಂದನೆ ಸಿಕ್ಕಿದೆ. ಹೆಚ್ಚಿನ ಭಕ್ತರ ಮನವಿಯಂತೆ ಅನ್ನಪ್ರಸಾದಕ್ಕೆ ಏನೆಲ್ಲ ಬೇಕೋ ಅದಕ್ಕೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ. ಅದಕ್ಕೆ ಪೂರಕವಾಗಿ ದೇವರು ಎಲ್ಲಾ ರೀತಿಯಲ್ಲಿ ಅನುಗ್ರಹ ಕೊಡುತ್ತಿದ್ದಾರೆ. ದೇವಳದಲ್ಲಿ ಅನ್ನಪ್ರಸಾದಕ್ಕೆ ಅಗತ್ಯವಾಗಿ ಬೇಕಾದ ರೂ. 14ಲಕ್ಷ ವೆಚ್ಚದ ಸ್ಟೀಮ್ ಬಾಯ್ಲರ್ ಕೂಡಾ ಬರಲಿದೆ. ಭಕ್ತರು ಅನ್ನಪ್ರಸಾದ ಸ್ವೀಕರಿಸಿದ ಬಳಿಕ ಕೈ ತೊಳೆಯುವ ಟ್ಯಾಪ್ ಕೂಡ ಉತ್ತಮ ರೀತಿಯಲ್ಲಿ ಆಗಿದೆ. ಪರಮಾನ್ನ ಸೇವೆಯನ್ನು ಹಮ್ಮಿಕೊಂಡಿದ್ದೇವೆ. ದೇವಳದ ಅನ್ನಪ್ರಸಾದ ವಿತರಣೆಗೆ ಎರಡು ಪ್ರತ್ಯೇಕ ಕೌಂಟರ್ ಅಗತ್ಯವಿತ್ತು. ಅದಕ್ಕೂ ಮಹಾಲಿಂಗೇಶ್ವರನಲ್ಲಿ ಪ್ರಾರ್ಥನೆ ಮಾಡಿದ್ದೆವು. ಇವತ್ತು ದೇವರು ಸ್ವಾಮಿ ಕಲಾಮಂದಿರ ಮಾಧವ ಸ್ವಾಮಿ ಅವರ ಮೂಲಕ ಪಾತ್ರಗಳ ಕೊರತೆಯನ್ನು ನೀಗಿಸಿದ್ದಾರೆ.
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು