ಕೊನೆಯ ದಿನ ಸಾವಿರಕ್ಕೂ ಮಿಕ್ಕಿ ಭಕ್ತರಿಂದ ದೇವರ ದರುಶನ
ಬೆಟ್ಟಂಪಾಡಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದ ಧನುಪೂಜೆಯು ಜ.14 ರಂದು ಸಮಾಪ್ತಿಗೊಂಡಿತು. ಕೊನೆಯ ದಿನವಾದ ಜ.14 ರಂದು ಬೆಳ್ಳಂಬೆಳಗ್ಗೆಯೇ ಕ್ಷೇತ್ರದಲ್ಲಿ ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಬಂದು ದೇವರ ದರುಶನ ಪಡೆದರು.
ಡಿ.16ರಂದು ಆರಂಭಗೊಂಡ ಧನುಪೂಜೆಯ ಪ್ರಯುಕ್ತ ದಿನನಿತ್ಯ ನೂರಾರು ಭಕ್ತರಿಂದ ಧನುಪೂಜೆ ಸೇವೆ ನಡೆಯಿತು. ಹತ್ತಾರು ಭಜನಾ ಮಂಡಳಿಗಳಿಂದ ಪ್ರತಿದಿನ ಭಜನಾ ಸೇವೆ ಜರಗಿತು. ರುದ್ರಾಧ್ಯಾಯಿಗಳಿಂದ ಭಗದ್ಗೀತೆ ಪಾರಾಯಣ, ಬಿಲ್ವ ಸ್ತ್ರೋತ್ರ ಪಾರಾಯಣ ತಂಡದವರಿಂದ ಬಿಲ್ವಾಷ್ಟೋತ್ತರ ಸ್ತ್ರೋತ್ರ, ಶಿವ ಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರ ಪಾರಾಯಣ, ರುದ್ರಪಾರಾಯಣಗಳು ಧನುಪೂಜೆ ವಿಶೇಷವಾಗಿತ್ತು. ಯಕ್ಷ ಭಜನೆಯೂ ಜರಗಿತು. ಪ್ರತಿದಿನ ಬೆಳಿಗ್ಗೆ ಅನೇಕ ದಾನಿಗಳ ಪ್ರಾಯೋಜಕತ್ವದಲ್ಲಿ ಫಲಾಹಾರದ ವ್ಯವಸ್ಥೆ ಏರ್ಪಡಿಸಲಾಗಿತ್ತು.
680ಕ್ಕೂ ಅಧಿಕ ಧನುಪೂಜೆ ಸೇವೆ
ಒಂದು ತಿಂಗಳ ಕಾಲ ನಡೆದ ಧನುಪೂಜೆ ಪ್ರಯುಕ್ತ 680ಕ್ಕೂ ಮಿಕ್ಕಿ ಭಕ್ತಾದಿಗಳು ಧನುಪೂಜೆ ಸೇವೆ ಮಾಡಿದರು.
ಪ್ರತಿದಿನ ಫಲಾಹಾರ
ಧನುಪೂಜೆಯ ಅಂಗವಾಗಿ ದಿನನಿತ್ಯ ಅನೇಕ ದಾನಿಗಳಿಂದ ಫಲಾಹಾರ ಸೇವೆ ನಡೆಯಿತು. ಪೂರಿ, ಉಪ್ಪಿಟ್ಟು ಅವಲಕ್ಕಿ, ಕೊಟ್ಟಿಗೆ, ಮೈಸೂರು ಪಾಕ್, ಕೇಸರಿಬಾತ್, ಹೆಸ್ರು ಕಾಳು, ಇಡ್ಲಿ ವಡೆ, ಕಡ್ಲೆ ಫಲಾಹಾರದ ವಿಶೇಷ ಐಟಂಗಳಾಗಿತ್ತು. ಕೊನೆಯ ದಿನ ಸ್ಥಳೀಯ ಶಿಕ್ಷಕ ವೃಂದ ಸೇರಿದಂತೆ ಅನೇಕ ಭಕ್ತಾದಿಗಳ ಪ್ರಾಯೋಜಕತ್ವದಲ್ಲಿ ಸೆಟ್ದೋಸೆ, ಗೋಳಿಬಜೆ, ಕೇಸರಿಬಾತ್, ಚಹಾ ನೀಡಲಾಯಿತು. ಅಲ್ಲದೇ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಿತು.
ದೇವಾಲಯದ ಪ್ರಧಾನ ಅರ್ಚಕ ವೇದಮೂರ್ತಿ ವೆಂಕಟ್ರಮಣ ಭಟ್ ಕಾನುಮೂಲೆ ಪೂಜಾವಿಧಿವಿಧಾನ ನೆರವೇರಿಸಿದರು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು, ಆಡಳಿತ ಸಮಿತಿ, ಅಭಿವೃದ್ದಿ ಸಮಿತಿ, ಪದಾಧಿಕಾರಿಗಳು ಹಾಗೂ ಊರಪರವೂರ ಭಕ್ತಾಭಿಮಾನಿಗಳು ಧನುಪೂಜೆಯಲ್ಲಿ ಪಾಲ್ಗೊಂಡು ದೇವರ ಪೂಜೆ ಕಣ್ತುಂಬಿಕೊಂಡರು.