ಶೀನಪ್ಪ ಗೌಡ ಮಾಲ ರವರಿಗೆ ಕೆನರಾ ಅಸೋಸಿಯೇಷನ್‌ನ ಅತ್ಯುನ್ನತ ‘ಕೆನರಾ ರತ್ನ’ ಪ್ರಶಸ್ತಿ ಪ್ರದಾನ

0

ಮರ್ದಾಳ: ಕೆನರಾ ಅಸೋಸಿಯೇಷನ್(ರಿ.)ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು ಇವರು ಕೊಡಮಾಡುವ 2024-25ನೇ ಸಾಲಿನ ಪ್ರತಿಷ್ಠಿತ ’ಕೆನರಾ ರತ್ನ’ ಪ್ರಶಸ್ತಿಯನ್ನು ವೃತ್ತಿರಂಗ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಡಬ ತಾಲೂಕಿನ ಬಂಟ್ರ ಗ್ರಾಮದ ಅಲೇರಿ ನಿವಾಸಿ ಶೀನಪ್ಪ ಗೌಡ ಮಾಲ ಅವರಿಗೆ ಜ.11ರಂದು ಅನಂತನಗರ ಅಮೃತಾಯ ಫಂಕ್ಷನ್ ಹಾಲ್‌ನಲ್ಲಿ ನಡೆದ ಕೆನರಾ ಅಸೋಸಿಯೇಷನ್‌ನ 15ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.


ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷರಾದ ಸತೀಶ್ ಕುಮಾರ್ ಅವರು ಅಸೋಸಿಯೇಷನ್ ಬೆಳೆದು ಬಂದ ರೀತಿ, ಉದ್ದೇಶ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಣೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಖ್ಯಾತ ಸಿನಿಮಾ ನಟಿ ಭವ್ಯಶ್ರೀ ರೈ ಅವರು, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತುಳುಭಾಷೆ, ತುಳು ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಕೆನರಾ ಆಸೋಸಿಯೇಷನ್‌ನ ಪಾತ್ರ ಮಹತ್ತರ ಎಂದು ಹೇಳಿದರು.


ಕೆನರಾ ರತ್ನ ಪ್ರಶಸ್ತಿ ಪುರಸ್ಕೃತ ಶೀನಪ್ಪ ಗೌಡರವರು, ಅಸೋಸಿಯೇಷನ್ ಸಮಾಜಕ್ಕೆ ನೀಡಿದ ಸೇವೆಗಳನ್ನು ನೆನಪಿಸಿ ಮುಂದಿನ ಯೋಜನೆಗಳಿಗೆ ಶುಭ ಹಾರೈಸಿ, ಈ ಪ್ರಶಸ್ತಿಯು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಸಾಧನೆ, ಸೇವೆ ಮಾಡಲು ಸ್ಪೂರ್ತಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕೆನರಾ ರತ್ನ ಪ್ರಶಸ್ತಿ ಸಮಾರಂಭವನ್ನು ಅಸೋಸಿಯೇಷನ್‌ನ ಉಪಾಧ್ಯಕ್ಷ ವಿಜಯ್ ಕುಲಾಲ್ ಎಂ. ನೆರವೇರಿಸಿದರು. ತುಳು ಭಾಷಣ ಸ್ಪರ್ಧೆ, ಕೃಷ್ಣ ರಾಧೆ ವೇಷ ಸ್ಪರ್ಧೆ, ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಪುರುಷೋತ್ತಮ ದೇರಾಜೆ, ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಪಾವನಿ ಕೆ.ಎಲ್., ಶಿವಾನಿ ಕೆ.ಎಲ್ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಕು| ಕುಶ್ಮಿತ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ಕು| ವೃದ್ಧಿ ಇವರನ್ನು ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಕೋಶಾಧಿಕಾರಿ ವಿಠ್ಠಲ್ ಗೊಲ್ಲ, ಸಂಘಟನಾ ಕಾರ್ಯದರ್ಶಿ ಯೋಗೇಶ್ ದೇರಾಜೆ, ಜತೆ ಕಾರ್ಯದರ್ಶಿ ಶ್ವೇತಾ ಆರ್ ಹೆಗ್ಡೆ, ಕಾರ್ಯಕಾರಿ ಸಮಿತಿ ಸದಸ್ಯರಾದ ವಸಂತ್ ಪೂಜಾರಿ, ಯಶ್ವಂತ್, ಸುಭಾಷ್ ಉಪಸ್ಥಿತರಿದ್ದರು. ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ ಸ್ವಾಗತಿಸಿದರು. ಜತೆ ಕೋಶಾಧಿಕಾರಿ ಸಚಿನ್ ರೈ ವಂದಿಸಿದರು. ಮಮತ ಲೋಕೇಶ್ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ರಮೇಶ್ಚಂದ್ರ ನೇತೃತ್ವದ ಐಲೆಸಾ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ತುಳುನಾಡ ಶೈಲಿಯ ಭೋಜನವನ್ನು ಏರ್ಪಡಿಸಲಾಗಿತ್ತು. ವಿವೇಕ್ ರೈ ಕಾರ್ಯಕ್ರಮ ನಿರೂಪಿಸಿದರು.

’ಕೆನರಾ ರತ್ನ ’ಪ್ರಶಸ್ತಿ ಪುರಸ್ಕೃತರಾದ ಶೀನಪ್ಪ ಗೌಡ ಮಾಲ ಅವರು ಬೆಂಗಳೂರು ನಾಗನಾಥಪುರ ಸ್ಥಾವರ ಬಾಷ್ ಸಂಸ್ಥೆಯ ನಿವೃತ್ತ ಮಾನವ ಸಂಪನ್ಮೂಲ ವ್ಯವಸ್ಥಾಪಕರಾಗಿದ್ದಾರೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಕರ್ನಾಟಕ ಚಾಪ್ಟರ್ ಇದರ ಗೌರವ ಕಾರ್ಯದರ್ಶಿಯಾಗಿ, ತರಬೇತಿ ಮತ್ತು ಅಭಿವೃದ್ಧಿ ವಿಭಾಗ, ಪರಿಮಳ ಕನ್ಸಲ್ಟೆಂಟ್ಸ್, ಬೆಂಗಳೂರು ಇಲ್ಲಿ ನಿರ್ದೇಶಕರಾಗಿ, ಮಾನವ ಸಂಪನ್ಮೂಲ ಮತ್ತು ಕೈಗಾರಿಕಾ ಸಂಬಂಧಗಳು ಇದರ ಆಡಳಿತ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here