ನಾಳೆ (ಜ.18) ಶ್ರೀ ಬೈದೇರುಗಳ ಜಾತ್ರೋತ್ಸವ ಸಂಭ್ರಮ
‘ರಾಮಜಾಲು ಗರಡಿ ಗೌರವ’ ಪ್ರಶಸ್ತಿ ಪ್ರದಾನ
ಏರ್ಲಾ ಗ್ಯಾರಂಟಿ ಅತ್ತ್… ತುಳು ಹಾಸ್ಯಮಯ ನಾಟಕ
ಪುತ್ತೂರು: ಹಲವು ಕಾರಣಿಕತೆಗಳ ಮೂಲಕ ಹತ್ತೂರಿನಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲುವಿನಲ್ಲಿರುವ ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಶ್ರೀ ಬೈದೇರುಗಳ ಜಾತ್ರೋತ್ಸವವು ಜ.18 ರಂದು ನಡೆಯಲಿದ್ದು, ಇದರ ಅಂಗವಾಗಿ ಪರ್ಪುಂಜ ಪೇಟೆ ಶೃಂಗಾರಗೊಂಡಿದೆ.
ಕಂಕನಾಡಿ ಮತ್ತು ಎಣ್ಮೂರು ಗರಡಿಗಳ ಮಧ್ಯದಲ್ಲಿ ಇರುವ ರಾಮಜಾಲು ಗರಡಿಯ ನೇಮೋತ್ಸವಕ್ಕೆ ಊರುಪರವೂರುಗಳಿಂದ ಸಹಸ್ತ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈಗಾಗಲೇ ಪರ್ಪುಂಜ ಪೇಟೆ ತುಂಬಾ ಕೇಸರಿ ಬಂಟಿಂಗ್ಸ್,ಪತಾಕೆ, ಪ್ಲೆಕ್ಸ್ಗಳನ್ನು ಅಳವಡಿಸಲಾಗಿದ್ದು, ಗರಡಿಗೆ ಹೋಗುವ ದಾರಿಯಲ್ಲಿ ದೊಡ್ಡದಾದ ಸ್ವಾಗತ ದ್ವಾರವನ್ನು ಹಾಕಲಾಗಿದೆ. ಇದಲ್ಲದೆ ಗರಡಿಗೆ ತೆರಳುವ ದಾರಿಯುದ್ದಕ್ಕೂ ದಾರಿಯ ಇಕ್ಕೆಲಗಳಲ್ಲಿ ಹಾಗೇ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಪರ್ಪುಂಜ ಪೇಟೆಯ ತುಂಬಾ ಬಣ್ಣದ ವಿದ್ಯುತ್ ಲೈಟ್ಗಳಿಂದ ಶೃಂಗಾರ ಮಾಡಲಾಗಿದೆ. ಗರಡಿಯನ್ನು ಸಂಪೂರ್ಣವಾಗಿ ಆಕರ್ಷಕ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಪರ್ಪುಂಜ ತುಂಬಾ ಜಾತ್ರೋತ್ಸವದ ಕಳೆ ಎದ್ದು ಕಾಣುತ್ತಿದೆ.
ಜ.18 ರಂದು ಬೈದೇರುಗಳ ಜಾತ್ರೋತ್ಸವ ನಡೆಯಲಿದ್ದು, ಬೆಳಿಗ್ಗೆ ವೈಧಿಕ ಕಾರ್ಯಕ್ರಮಗಳು, ಬ್ರಹ್ಮಬೈದೇರುಗಳಿಗೆ, ಶ್ರೀ ಕೋಟಿ ಚೆನ್ನಯರಿಗೆ ತಂಬಿಲ ಸೇವೆ, ಮಹಾಪೂಜೆ ನಡೆದು ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ, ಸಭಾ ಕಾರ್ಯಕ್ರಮ ನಡೆಯಲಿದ್ದು ರಾಮಜಾಲು ಗರಡಿ ಗೌರವ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಂಸದ ಬ್ರಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಎಮ್ಎಲ್ಸಿ ಕಿಶೋರ್ ಕುಮಾರ್ ಸಹಿತ ಹಲವು ಮಂದಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಕೋಟಿ ಚೆನ್ನಯರು ಗರಡಿ ಇಳಿಯುವ ಕಾರ್ಯಕ್ರಮ, ಸುಡುಮದ್ದು ಪ್ರದರ್ಶನ ಸೇರಿದಂತೆ ದೈವೀ ಕಾರ್ಯಕ್ರಮ ನಡೆದು ಮಧ್ಯರಾತ್ರಿ ಚಾ ಪರ್ಕ ಕಲಾವಿದರಿಂದ ‘ಏರ್ಲಾ ಗ್ಯಾರಂಟಿ ಅತ್ತ್’ ಎನ್ನುವ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರ ಆಡಳಿತದಲ್ಲಿ ಊರಪರವೂರ ಭಕ್ತಾಧಿಗಳ ಸಂಪೂರ್ಣ ಸಹಕಾರದೊಂದಿಗೆ ನಡೆಯುವ ಈ ಜಾತ್ರೋತ್ಸವಕ್ಕೆ ಪ್ರತಿವರ್ಷದಂತೆ ಈ ವರ್ಷವೂ ಸಹಸ್ರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಲಿದ್ದು, ಭಕ್ತಾಧಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ವಿನಂತಿಸಿಕೊಂಡಿದ್ದಾರೆ.
“ ಇಲ್ಲಿ ನಾನು ನಿಮಿತ್ತ ಮಾತ್ರ ಎಲ್ಲವೂ ದೈವ ದೇವರುಗಳ ಕೃಪೆ. ಊರಪರವೂರ ಭಕ್ತಾಧಿಗಳ ಸಂಪೂರ್ಣ ಸಹಕಾರದೊಂದಿಗೆ ಎಲ್ಲರ ಸಹಕಾರ ಪಡೆದುಕೊಂಡು ಈ ಬೈದೇರುಗಳ ಜಾತ್ರೋತ್ಸವವನ್ನು ಮಾಡುತ್ತಿದ್ದೇನೆ. ಪ್ರತಿವರ್ಷದಂತೆ ಈ ವರ್ಷವೂ ಅತ್ಯಂತ ವಿಜೃಂಭಣೆಯಿಂದ ನೇಮೋತ್ಸವ ನಡೆಯಲಿದೆ. ಸಮಸ್ತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವ ದೇವರ ಪ್ರಸಾದ, ಅನ್ನಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ.”
ಕೆ.ಸಂಜೀವ ಪೂಜಾರಿ ಕೂರೇಲು, ಆಡಳಿತ ಮೊಕ್ತೇಸರರು, ರಾಮಜಾಲು ಗರಡಿ