ಪುತ್ತೂರು: ಕಡಬ ತಾಲೂಕಿನ ಐತ್ತೂರು ಗ್ರಾಮ ಪಂಚಾಯತ್ನ ವಿಶೇಷಚೇತನರ ಸಮನ್ವಯ ಗ್ರಾಮ ಸಭೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷೆ ವತ್ಸಲಾ ಜೆ.ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಭಾರ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಮಾರ್ಗದರ್ಶಕ ಆಧಿಕಾರಿಯಾಗಿ ಮಾತನಾಡಿ, ವಿಕಲಚೇತನರ ಮಾಶಾಸನ, ವಿದ್ಯಾರ್ಥಿವೇತನ, ಇಲಾಖೆಯಿಂದ ದೊರಕುವ ಸಾಧನ ಸಲಕರಣೆಗಳು, ವಿವಾಹ ಪ್ರೋತ್ಸಾಹಧನ, ನಿರಾಮಯ ಆರೋಗ್ಯ ವಿಮಾ ಯೋಜನೆಗಳು ಹಾಗೂ ಇತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುಜಾತ ಕೆ. ಪಂಚಾಯತ್ನಿಂದ ಸಿಗುವ ಶೇ.5 ಅನುದಾನದ ಬಗ್ಗೆ ಮಾಹಿತಿ ನೀಡಿ ವಿಕಲಚೇತನರಿಗೆ ಏನಾದರೂ ಸಮಸ್ಯೆಗಳು ಇದ್ದಲ್ಲಿ ತಿಳಿಸುವಂತೆ ಹೇಳಿದರು.
ಐತ್ತೂರು ಗ್ರಾಮದ ಶಿವಾಜಿಗರ ನಿವಾಸಿ ಮಹಮ್ಮದ್ ಆಸಿಫ್ ಹಾಗೂ ಅವರ ತಾಯಿಗೆ ಪಂಚಾಯತ್ನ ಶೇ.5 ಅನುದಾನದಿಂದ ವೈದ್ಯಕೀಯ ಸಹಾಯಧನದ ಚೆಕ್ನ್ನು ವಿತರಿಸಲಾಯಿತು. ಆರೋಗ್ಯ ಸಹಾಯಕಿ ಉಷಾ ಹಾಗೂ ವನಿತಾರವರಿಂದ ವಿಕಲಚೇತನರಿಗೆ ಹಾಗೂ ಅವರ ಪಾಲಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಮೇಲ್ವಿಚಾರಕಿ ವನಿತಾ ಶಿವರಾಮ, ಪಂಚಾಯತ್ ಉಪಾಧ್ಯಕ್ಷೆ ಜಯಲಕ್ಷ್ಮಿ ಹಾಗೂ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ವಿಕಲಚೇತನರು ಹಾಗೂ ಪಾಲಕರು ಉಪಸ್ಥಿತರಿದ್ದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸಂತೋಷ್ ಪಿ.ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಸಂತೋಷ್.ಪಿ ವಂದಿಸಿದರು.