ಪುತ್ತೂರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್ ರಾಜ್ ಇಲಾಖೆ, ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಜಿಲ್ಲಾ ನೆರವು ಘಟಕ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಪುತ್ತೂರು, ಒಳಮೊಗ್ರು ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚ ಸಂಸ್ಕೃತಿ, ನಮ್ಮ ಸಂಸ್ಕೃತಿ ಎಂಬ ಧ್ಯೇಯದೊಂದಿಗೆ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದ ಬಗ್ಗೆ ಜ.21ರಂದು ಒಳಮೊಗ್ರು ಗ್ರಾಪಂ ಕಛೇರಿ ಸಭಾಂಗಣದಲ್ಲಿ ಸಭೆ ನಡೆಸಲಾಯಿತು.
ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ನೊಡೇಲ್ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು. ಬಳಿಕ ಮಾತನಾಡಿದ ನವೀನ್ ಭಂಡಾರಿಯವರು, ಸ್ವಚ್ಛತೆ ನಮ್ಮೆಲ್ಲರ ಜೀವನ ಕ್ರಮವಾಗಬೇಕು, ಗ್ರಾಮವನ್ನು ಸ್ವಚ್ಛತೆಯನ್ನಿಡುವ ನಿಟ್ಟಿನಲ್ಲಿ ನಾವೆಲ್ಲರೂ ಸಹಕಾರ ನೀಡಬೇಕು, ಪ್ಲಾಸ್ಟಿಕ್ ಬಳಕೆಯನ್ನು ನಾವೇ ಕಡಿಮೆ ಮಾಡಬೇಕು ಅಲ್ಲದೆ ಎಲ್ಲಿಯೂ ಕಸ,ಕಡ್ಡಿ, ಪ್ಲಾಸ್ಟಿಕ್‌ಗಳನ್ನು ಸುಡಬಾರದು ಇದರಿಂದ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂಬಿತ್ಯಾದಿ ವಿಷಯಗಳನ್ನು ತಿಳಿಸಿದರು.ಸ್ವಚ್ಛತಾ ಶ್ರಮದಾನದಲ್ಲಿ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳು ಸಹಕಾರ ನೀಡುವಂತೆ ಅವರು ಕೇಳಿಕೊಂಡರು.
ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, ನಮ್ಮ ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಲಾಗುತ್ತಿದೆ. ನಮ್ಮ ಸಂಸ್ಕೃತಿ, ಸ್ವಚ್ಛ ಸಂಸ್ಕೃತಿ ಎಂಬ ಧ್ಯೇಯದೊಂದಿಗೆ ನಡೆಯುವ ಈ ಸ್ವಚ್ಛತಾ ಶ್ರಮದಾನಕ್ಕೆ ಎಲ್ಲಾ ಸಂಘ ಸಂಸ್ಥೆಯವರು ಹಾಗೇ ಪ್ರತಿಯೊಬ್ಬರು ತಮ್ಮ ಸ್ವ ಇಚ್ಛಾಶಕ್ತಿಯಿಂದ ಪಾಲ್ಗೊಳ್ಳುವ ಮೂಲಕ ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿ ಮಾಡುವಲ್ಲಿ ಪಂಚಾಯತ್‌ನೊಂದಿಗೆ ಸಹಕರಿಸುವಂತೆ ಕೇಳಿಕೊಂಡರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳರವರು ಸ್ವಾಗತಿಸಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಸ್ವಚ್ಚತಾ ಶ್ರಮದಾನದಲ್ಲಿ ಪ್ರತಿಯೊಬ್ಬರು ಭಾಗವಹಿಸುವ ಮೂಲಕ ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿ ಮಾಡಲು ಸಹಕರಿಸುವಂತೆ ಕೇಳಿಕೊಂಡರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪಂಚಾಯತ್ ಸದಸ್ಯರುಗಳಾದ ಲತೀಫ್ ಕುಂಬ್ರ, ವಿನೋದ್ ಶೆಟ್ಟಿ, ಶಾರದಾ, ರೇಖಾ ಯತೀಶ್, ಸುಂದರಿ ಹಾಗೇ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ರಾಜೇಶ್ ರೈ ಪರ್ಪುಂಜ, ಎಸ್.ಮಾಧವ ರೈ ಕುಂಬ್ರ, ಯೂಸುಫ್ ಹಾಜಿ ಕೈಕಾರ, ರಕ್ಷಿತ್ ರೈ ಮುಗೇರು, ಅನುಗ್ರಹ ಸಂಜೀವಿನಿ ಒಕ್ಕೂಟದ ಎಂಬಿಕೆ ಚಂದ್ರಿಕಾ ಹಾಗೂ ಪದಾಧಿಕಾರಿಗಳು ಹಾಗೇ ಕುಂಬ್ರ ಕೆಪಿಎಸ್ ಶಾಲೆ ಸೇರಿದಂತೆ ಗ್ರಾಮದ ಶಾಲೆಗಳ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಸಭೆಯಿಂದ ಬಂದ ವಿವಿಧ ಸಲಹೆ ಸೂಚನೆಗಳನ್ನು ದಾಖಲಿಸಿಕೊಳ್ಳಲಾಯಿತು.
ಭಾಗವಹಿಸುವ ವಿವಿಧ ಸಂಘ ಸಂಸ್ಥೆಗಳು
ಸ್ವಚ್ಚತಾ ಶ್ರಮದಾನದಲ್ಲಿ ಗ್ರಾಮದ ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಲಿವೆ. ಅದರಲ್ಲಿ ಮುಖ್ಯವಾಗಿ ವರ್ತಕರ ಸಂಘ ಕುಂಬ್ರ, ಬಾಂತಲಪ್ಪ ಜನ ಸೇವಾ ಸಮಿತಿ, ಸ್ಪಂದನಾ ಸೇವಾ ಬಳಗ ಕುಂಬ್ರ, ವಿಶ್ವ ಯುವಕ ಮಂಡಲ ಕುಂಬ್ರ, ಎಸ್‌ಎಸ್‌ಎಫ್, ಎಸ್‌ಕೆಎಸ್‌ಎಸ್‌ಎಫ್, ಎಸ್‌ವೈಎಸ್, ಖಿದ್ಮತುದ್ದೀನ್ ಯಂಗ್‌ಮೆನ್ಸ್ ಕುಂಬ್ರ, ಕೆಐಸಿ ಕುಂಬ್ರ, ಮರ್ಕಝ್ ಮಹಿಳಾ ಕಾಲೇಜ್, ಶೇಖಮಲೆ ಜಮಾಅತ್ ಕಮೀಟಿ, ಅನುಗ್ರಹ ಸಂಜೀವಿನಿ ಒಕ್ಕೂಟ ಕುಂಬ್ರ, ಸ್ತ್ರೀಶಕ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕುಂಬ್ರ ವಲಯ, ಶ್ರೀರಾಮ ಭಜನಾ ಮಂದಿರ ಮತ್ತು ಭಜನಾ ಮಂಡಳಿ ಕುಂಬ್ರ, ಜ್ಞಾನ ವಿಕಾಸ ಕುಂಬ್ರ, ಎಸ್‌ಪಿವೈಎಸ್‌ಎಸ್ ಕುಂಬ್ರ, ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರ ಸಂಘ ಕುಂಬ್ರ, ಸ್ನೇಹ ಯುವಕ ಮಂಡಲ ಮತ್ತು ಮಹಿಳಾ ಮಂಡಲ, ಸ್ನೇಹ ಸಂಗಮ ರಿಕ್ಷಾ ಚಾಲಕ ಮಾಲಕರ ಸಂಘ ಪರ್ಪುಂಜ, ಕರ್ನಾಟಕ ಮುಸ್ಲೀಂ ಜಮಾಅತ್ ಕುಂಬ್ರ ವಲಯ, ಪರ್ಪುಂಜ ಜಮಾಅತ್ ಕಮೀಟಿ, ಮೈದಾನಿಮೂಲೆ ಜಮಾಅತ್ ಕಮೀಟಿ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇಂದಿನಿಂದ ಗ್ರಾಮ ವ್ಯಾಪ್ತಿ ಸ್ವಚ್ಛತಾ ಶ್ರಮದಾನ
ಒಂದು ವಾರಗಳ ನಡೆಯುವ ಈ ಸ್ವಚ್ಛತಾ ಶ್ರಮದಾನದಲ್ಲಿ ಒಳಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಸ್ವಚ್ಚತಾ ಶ್ರಮದಾನದ ದಿನಾಂಕಗಳು ಈ ರೀತಿ ಇದೆ. ಜ.22ರಂದು ಬೆಳಿಗ್ಗೆ 7.30 ಕ್ಕೆ ಕುಂಬ್ರ ಜಂಕ್ಷನ್‌ನಲ್ಲಿ ಉದ್ಘಾಟನೆ ನಡೆದು ಬಳಿಕ ಸ್ವಚ್ಛತಾ ಶ್ರಮದಾನ ನಡೆಯಲಿದೆ. ಜ.23ರಂದು ಬೆಳಿಗ್ಗೆ 7.30 ಕ್ಕೆ ಪರ್ಪುಂಜದಿಂದ ಕುಟ್ಟಿನೋಪಿನಡ್ಕ ತನಕ, ಜ.24ರಂದು ಕೈಕಾರದಿಂದ ಮಿನಿಪದವು ತನಕ, ಜ.25ರಂದು ಕೈಕಾರದಿಂದ ಉಪ್ಪಳಿಗೆ ತನಕ, ಜ.26ರಂದು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್, ಪಂಚಾಯತ್ ವಠಾರ, ಜ.27 ಬೆಳಿಗ್ಗೆ 8ಕ್ಕೆ ಅಜ್ಜಿಕಲ್ಲು ಪರಿಸರ, ಜ.28ಬೆಳಿಗ್ಗೆ 8ಕ್ಕೆ ದರ್ಬೆತ್ತಡ್ಕ ಶಾಲಾ ಸುತ್ತಮುತ್ತ, ಜ.29 ಕುಂಬ್ರದಿಂದ ಶೇಖಮಲೆ ತನಕ, ಜ.30 ಬೆಳಿಗ್ಗೆ 7.30 ಕ್ಕೆ ಕುಂಬ್ರದಿಂದ ಉಜಿರೋಡಿ ತನಕ, ಜ.31 ರಂದು ಬೆಳಿಗ್ಗೆ 8.30ಕ್ಕೆ ಅಜಲಡ್ಕದಲ್ಲಿ ಸ್ವಚ್ಚತಾ ಶ್ರಮದಾನ ನಡೆಯಲಿದೆ.
‘ಒಂದು ವಾರಗಳ ಕಾಲ ನಡೆಯುವ ಸ್ವಚ್ಚತಾ ಶ್ರಮದಾನದಲ್ಲಿ ನಮ್ಮ ಒಳಮೊಗ್ರು ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿಸುವ ಸಲುವಾಗಿ ವಿವಿಧ ಸಂಘ ಸಂಸ್ಥೆಯವರು ಹಾಗೂ ಪ್ರತಿಯೊಬ್ಬರು ಸ್ವ ಇಚ್ಛಾಶಕ್ತಿಯಿಂದ ಪಾಲ್ಗೊಂಡು ಸ್ವಚ್ಛತಾ ಶ್ರಮದಾನಕ್ಕೆ ಸಹಕರಿಸುವ ಮೂಲಕ ಸ್ವಚ್ಚ ಗ್ರಾಮವನ್ನಾಗಿಸಲು ಪಂಚಾಯತ್‌ನೊಂದಿಗೆ ಕೈಜೋಡಿಸಬೇಕಾಗಿ ವಿನಂತಿ’
–ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಮ ಪಂಚಾಯತ್