ಎಸ್‌.ಐ ಆಗಿ ನೇಮಕಗೊಂಡ ಬಸವರಾಜ್ ಮುದವಿಯವರಿಗೆ ವಿದ್ಯಾಮಾತಾದಲ್ಲಿ ಸನ್ಮಾನ

0

ಇಡೀ ಜಗತ್ತಿನಲ್ಲೇ ವಿದ್ಯೆ ಪವಿತ್ರವಾಗಿರುವಂತದ್ದು-ಆಂಜನೇಯ ರೆಡ್ಡಿ

ಪುತ್ತೂರು: ಪರಿಶ್ರಮ,ಛಲ, ಪ್ರಯತ್ನ ಹಾಗೂ ಸ್ಪಷ್ಟವಾದ ಗುರಿ ಹೊಂದಿಲ್ಲದಿದ್ದರೆ, ಬಲ್ಬ್ ಕಂಡುಹಿಡಿದು ಕತ್ತಲನ್ನೂ ಬೆಳಗಿಸುವಂತ ಅದ್ಬುತ ಕಾರ್ಯವೂ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್ ರವರಿಂದ ನಡೆಯವುದು ಅಸಾಧ್ಯವಾಗಿರುತ್ತಿತ್ತು. ವಿದ್ಯಾರ್ಥಿಗಳೆಲ್ಲರೂ ತಮ್ಮ ಪ್ರಾಮಾಣಿಕ ಪ್ರಯತ್ನ, ಬುದ್ಧಿ ಶಕ್ತಿಯ ಅಗಾಧ ಬೆಳವಣಿಗೆ ಜೊತೆಗೆ ಸ್ಪಷ್ಟ ಗುರಿಯನ್ನು ಹೊಂದಿ ಸಾಧನೆಯ ಹಾದಿಯನ್ನು ದಾಪುಗಾಲು ಇಟ್ಟು ದಾಟುವಂತಾಗಬೇಕು. ಈ ಜಗತ್ತಿನಲ್ಲಿ ಅತೀ ಪವಿತ್ರವಾಗಿರುವುದೆಂದರೇ ಅದು ವಿದ್ಯೆ ಮಾತ್ರ ಎಂದು ಪುತ್ತೂರು ನಗರ ಠಾಣಾ ಉಪ ನಿರೀಕ್ಷಕ ಆಂಜನೇಯ ರೆಡ್ಡಿ ಹೇಳಿದರು.


ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿ, ಸುಳ್ಯ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿದ್ದು ಇದೀಗ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡ ಬಸವರಾಜ್ ಮುದವಿಯವರಿಗೆ ಅಭಿನಂದನೆ ನೆರವೇರಿಸಿ ಮಾತನಾಡಿದ ಅವರು, ನನ್ನ ಸಾಲಿನಲ್ಲಿ ಬಂದು ನಿಂತಿರುವ ಮುದವಿಯವರಿಗೆ ಅಭಿನಂದನೆ ಸಲ್ಲಿಸುತ್ತಾ, ಸಮಾಜ ಮೆಚ್ಚುವಂತ ಕಾರ್ಯ ನಿಮ್ಮಿಂದಾಗಲಿ ಜೊತೆಗೆ ಸಮಾಜಕ್ಕೂ ಕೊಡುಗೆ ಸಿಗಲಿಯೆಂದು ಹೇಳಿದರು. ಯುವ ಸಮೂಹ ವಿನಯತೆಯನ್ನು ಮೈಗೂಡಿಸಿಕೊಂಡಾಗ ವಿದ್ಯೆ ಖಂಡಿತವಾಗಿಯೂ ಬರುತ್ತದೆ. ಮಾತ್ರವಲ್ಲದೇ ಅರ್ಜುನನ ಹಾಗೇ ಶಕ್ತಿ -ಭಕ್ತಿ ಜೊತೆಗೆ ಸ್ಪಷ್ಟ ನಿಲುವು ಇರಲಿ. ಅಧ್ಯಾತ್ಮ ಮತ್ತು ಅತ್ಯುತ್ತಮ ಆಹಾರ ಪದ್ಧತಿಯೂ ಕೂಡ ನಿಮ್ಮ ವಿದ್ಯಾಭ್ಯಾಸಕ್ಕೆ ಉತ್ತಮ ಬೆಂಬಲ ನೀಡಬಲ್ಲವು. ಸ್ವಸ್ಥ, ಸಧೃಢ ಹಾಗೂ ಸುಂದರ ಸಮಾಜದ ನಿರ್ಮಾಣ ನಮ್ಮೆಲ್ಲರ ಮೂಲ ಕಾಯಕವಾಗಿರಲಿಯೆಂದು ಆಂಜನೇಯ ರೆಡ್ಡಿ ಹೇಳಿದರು.


ವಿದ್ಯಾಮಾತಾ ಅಕಾಡೆಮಿ ಅಧ್ಯಕ್ಷ ಭಾಗ್ಯೇಶ್ ರೈ ಮಾತನಾಡಿ, ಅಕಾಡೆಮಿಯಲ್ಲಿ ತರಬೇತಿ ಪಡೆದು ಇದೀಗ ಎಸ್.ಐ ಹುದ್ದೆಗೆ ನೇಮಕಗೊಂಡು ಸನ್ಮಾನವನ್ನು ಸ್ವೀಕರಿಸುತ್ತಿರುವಂತದ್ದು ನಿಜವಾಗಿಯೂ ವಿದ್ಯಾಮಾತದ ಸಾಧನೆಯ ಹಬ್ಬ ಹಾಗೂ ಮುದವಿಯವರ ಕನಸು ನನಸ್ಸಾದ ದಿನ. ನಾವುಗಳು ಯಾವಾಗ ಸಾಧನೆಯ ಹಾದಿ ತುಳಿಯುತ್ತೇವೆಯೋ , ಆಗಲೇ ಸಮಾಜ ನಮ್ಮನ್ನು ಗುರುತಿಸುತ್ತದೆ. ಶಿಕ್ಷಣದ ಜೊತೆ-ಜೊತೆಗೆ ವಿದ್ಯಾರ್ಥಿಗಳು ಉದ್ಯೋಗ ಕೌಶಲ್ಯ ತರಬೇತಿ ಪಡೆದುಕೊಂಡರೆ, ಸಾಧನೆಯೆಂಬ ಶಿಖರವೇರಲು ಸಾಧ್ಯವೆಂದು ಹೇಳಿದರು.


ಎಸೈ ಆಗಿ ನೇಮಕಗೊಂಡ ಬಸವರಾಜ್ ಮುದವಿ, ನಗರ ಠಾಣಾ ಎಸೈ ಆಂಜನೇಯ ರೆಡ್ಡಿ , ಅರಣ್ಯ ಇಲಾಖೆಯ ಜಾಲ್ಸೂರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸನತ್ ಕುಮಾರ್ ರೈ ಇವರುಗಳನ್ನು ಅಕಾಡೆಮಿ ಅಧ್ಯಕ್ಷ ಭಾಗ್ಯೇಶ್ ರೈ ಸನ್ಮಾನಿಸಿದರು. ಈ ವೇಳೆ ವಿದ್ಯಾರ್ಥಿಗಳು , ಶಿಕ್ಷಕ ವೃಂದ ,ಸಿಬಂದಿ ವರ್ಗ ಇದ್ದರು.

ವಿದ್ಯಾಮಾತಾದ ತರಬೇತಿ , ಎಸೈ ಹುದ್ದೆಗೆ ಮುದವಿ
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾದ ಪರಿಚಯವಾಗಿದ್ದು ನನಗೆ ನನ್ನ ಗುರುಗಳಾದ ಎಸೈ ಆಂಜನೇಯ ರೆಡ್ಡಿಯವರಿಂದ. ಪೊಲೀಸ್ ಇಲಾಖೆಯಲ್ಲೇ ಕರ್ತವ್ಯ ಸಲ್ಲಿಸಬೇಕೆಂಬ ಆಸೆ, ಹಂಬಲ ಯಾವತ್ತೋ ಇತ್ತು. ಅದೀಗ ನನಸಾಗಿದೆ. ವಿದ್ಯಾಮಾತಾದಲ್ಲಿ ಈ ಹಿಂದೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆದ್ದು ,ನಾನೂ ಬಹುಮಾನ ಪಡೆದುಕೊಂಡಿದ್ದೆ. ಮುಂದಿನ ದಿನಗಳಲ್ಲಿ ಅಕಾಡೆಮಿಯು ಅಂತಹದ್ದೇ ಪರೀಕ್ಷೆಯನ್ನು ಆಯೋಜಿಸಿದರೆ, ಮೊದಲ ಬಹುಮಾನವನ್ನು ನಾನು ನೀಡುವೆಯೆಂದು ಬಸವರಾಜ್ ಮುದವಿ ಅವರು ವೇದಿಕೆಯಲ್ಲಿ ಘೋಷಣೆ ಮಾಡಿ, ಯಾವ ರೀತಿ ಸಾಗಿದರೆ ಬದುಕಿನಲ್ಲಿ ಸಾಧನೆಯ ತೇರು ಏರಲು ಸಾಧ್ಯವೆಂಬುದನ್ನು ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

LEAVE A REPLY

Please enter your comment!
Please enter your name here