ವೈಭವದ ಶೋಭಾಯಾತ್ರೆ | ಕುಣಿತ ಭಜನೆ | ಸುಜ್ಞಾನ ದೀಪಿಕೆ ಪುಸ್ತಕ ಬಿಡುಗಡೆ | ಸಾಂಸ್ಕೃತಿಕ ವೈಭವ
*ಮಕ್ಕಳಲ್ಲಿ ಧಾರ್ಮಿಕ ಶಿಕ್ಷಣದ ಅರಿವು ಮೂಡಿಸುವುದು ಅಗತ್ಯ : ಮುಳಿಯ ಕೇಶವ ಪ್ರಸಾದ್
*ಸುಜ್ಞಾನ ದೀಪಿಕೆಯಿಂದ ಬದುಕು ಸುಜ್ಞಾನದ ಕಡೆಗೆ ಸಾಗಲಿ: ಕಡಮಜಲು ಸುಭಾಷ್ ರೈ
*ಹಿಂದೂ ಎನ್ನುವುದು ಜ್ಞಾನದ ಸಾಗರ :ಮುರಳೀಕೃಷ್ಣ ಹಸಂತಡ್ಕ
*ಕುಂಬ್ರದ ಮಾರಮ್ಮನ ಉಲ್ಲೇಖ ಈಜಿಷ್ಟ್‌ನ ಗ್ರಂಥದಲ್ಲಿದೆ: ಕುಂಬ್ರ ದುರ್ಗಾಪ್ರಸಾದ್ ರೈ
*ಸ್ಪಂದನಾದ ಕೆಲಸ ರಾಜ್ಯಕ್ಕೆ ಮಾದರಿಯಾಗಲಿ : ಸಾಜ ರಾಧಾಕೃಷ್ಣ ಅಳ್ವ
*ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವುದೇ ಶ್ರೀರಾಮ ಲೀಲೋತ್ಸವದ ಉದ್ದೇಶ : ರತನ್ ರೈ ಕುಂಬ್ರ
*ದೇವರ ಫೋಟೋಗಳನ್ನು ಎಲ್ಲೆಂದರೆಲ್ಲಿ ಬಿಸಾಡಬೇಡಿ: ಕಿಶೋರ್ ಶೆಟ್ಟಿ ಅರಿಯಡ್ಕ
ಪುತ್ತೂರು: ಹಿಂದೂ ಧರ್ಮ ಕೇವಲ ಆಚರಣೆಯ ಧರ್ಮವಲ್ಲ ಅದು ನಮ್ಮ ಜೀವನ ಮೌಲ್ಯಗಳನ್ನು ಕಲಿಸುವ ಜೀವನ ಪಾಠವಾಗಿದೆ. ಇಂತಹ ಧರ್ಮ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ಕಲಿಸುವ ಅಗತ್ಯತೆ ತುಂಬಾ ಇದೆ. ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಅರಿವು ಮೂಡಬೇಕೆಂದು ಪ್ರತಿಯೊಬ್ಬರು ಹೇಳುತ್ತಾರೆ ಆದರೆ ವ್ಯವಸ್ಥೆ ಮಾಡುವವರು ಕಡಿಮೆ ಇದ್ದಾರೆ. ಸ್ಪಂದನಾ ಸೇವಾ ಬಳಗದವರು ಸುಜ್ಞಾನ ದೀಪಿಕೆ ಪುಸ್ತಕದ ಮೂಲಕ ಧಾರ್ಮಿಕ ಶಿಕ್ಷಣದ ಅರಿವು ಅನ್ನು ಮೂಡಿಸಲು ಹೊರಟಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಹೇಳಿದರು.
ಅವರು ಜ.26 ರಂದು ಸ್ಪಂದನಾ ಸೇವಾ ಬಳಗ ಕುಂಬ್ರ ಇದರ ಆಶ್ರಯದಲ್ಲಿ ಕುಂಬ್ರದ ಅಲ್ಲಂಗಾರ್ ಗದ್ದೆಯಲ್ಲಿ ನಡೆದ ಧರ್ಮ ಜಾಗೃತಿಗಾಗಿ ರಾಮ ಸಂಕೀರ್ತನೆ ಶ್ರೀರಾಮ ಲೀಲೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇಂದಿನ ಮಕ್ಕಳಿಗೆ ಜಾಗಟೆ ಬಾರಿಸುವುದು ಹೇಗೆ, ಶಂಖ ಊದುವುದು ಹೇಗೆ ?ಎಂಬುದೇ ಗೊತ್ತಿಲ್ಲ. ಇದನ್ನು ತಿಳಿಸುವ ಕೆಲಸ ಪುಸ್ತಕದಿಂದ ಆಗಲಿದೆ ಎಂದ ಕೇಶವ ಪ್ರಸಾದ್‌ರವರು ಸುಮಾರು 25 ವಾರಕ್ಕೆ ಹೇಳಿಕೊಡುವ ಪಾಠ ಇದರಲ್ಲಿದೆ. ಹಿಂದೂ ಧರ್ಮದ ಎಲ್ಲಾ ವಿಚಾರಗಳನ್ನು ಸೇರಿಸಿಕೊಂಡು ಮಾಡಿದ ಪುಸ್ತಕ ಇದಾಗಿದೆ ಎಂದು ಅವರು ಹೇಳಿದರು. ಇದೇ ಎಪ್ರೀಲ್ ತಿಂಗಳಿನಲ್ಲಿ ಕಿರಿಯರ ಧಾರ್ಮಿಕ ಸಮ್ಮೇಳನ ಮಾಡುವ ಯೋಚನೆ ಇದೆ ಎಂಬ ವಿಷಯವನ್ನು ಮುಳಿಯ ಕೇಶವ ಪ್ರಸಾದ್‌ರವರು ಈ ಸಂದರ್ಭದಲ್ಲಿ ಹೇಳಿದರು.

ಸುಜ್ಞಾನ ದೀಪಿಕೆಯಿಂದ ಬದುಕು ಸುಜ್ಞಾನದ ಕಡೆಗೆ ಸಾಗಲಿ: ಕಡಮಜಲು ಸುಭಾಷ್ ರೈ
ಸುಜ್ಞಾನ ದೀಪಿಕೆ ಪುಸ್ತಕ ಕಾರ್ಯಕ್ರಮದ ಮಹಾಪೋಷಕರಾಗಿದ್ದು, ಪುಸ್ತಕ ಅನಾವರಣ ಮಾಡಿದ ರಾಷ್ಟ್ರೀಯ ಕೃಷಿ ಪ್ರಶಸ್ತಿ ಹಾಗೂ ಚಿನ್ನದ ಪದಕ ಪುರಸ್ಕೃತರಾದ ಕಡಮಜಲು ಸುಭಾಷ್ ರೈಯವರು ಮಾತನಾಡಿ, ಧರ್ಮದ ಅರಿವು ಮೂಡಿಸುವ ಸಲುವಾಗಿ ಪ್ರಕಟಗೊಂಡ ಒಂದು ಒಳ್ಳೆಯ ಪುಸ್ತಕ ಇದಾಗಿದೆ. ಇದನ್ನು ಓದಿದ ನಮ್ಮೆಲ್ಲರ ಬದುಕು ಸುಜ್ಞಾನದ ಕಡೆಗೆ ಸಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಹಿಂದೂ ಎನ್ನುವುದು ಜ್ಞಾನದ ಸಾಗರ :ಮುರಳೀಕೃಷ್ಣ ಹಸಂತಡ್ಕ
ಮುಖ್ಯ ಅತಿಥಿಗಳಾಗಿದ್ದ ಹಿಂದೂ ಮುಖಂಡ ಮುರಳೀಕೃಷ್ಣ ಹಸಂತಡ್ಕರವರು ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠೆಯ ದಿನದ ನೆನಪು ಮಾಡುವ ಕೆಲಸ ಸ್ಪಂದನಾದಿಂದ ಆಗಿರುವುದು ಖುಷಿ ತಂದಿದೆ. ಹಿಂದೂ ಎನ್ನುವುದು ಜ್ಞಾನದ ಸಾಗರವಾಗಿದೆ. ಇಡೀ ಜಗತ್ತು ಹಿಂದೂ ಧರ್ಮದ ಕಡೆಗೆ ನಮ್ಮ ಭಾರತದ ಕಡೆಗೆ ನೋಡುತ್ತಿದೆ ಇದು ನಮೆಗಲ್ಲರಿಗೂ ಹೆಮ್ಮೆ, ಇಂತಹ ಹಿಂದೂ ಧರ್ಮದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಆಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಕುಂಬ್ರದ ಮಾರಮ್ಮನ ಉಲ್ಲೇಖ ಈಜಿಷ್ಟ್‌ನ ಗ್ರಂಥದಲ್ಲಿದೆ: ಕುಂಬ್ರ ದುರ್ಗಾಪ್ರಸಾದ್ ರೈ
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ಕುಂಬ್ರದ ಅಲ್ಲಂಗಾರ್ ಗದ್ದೆಗೆ ಒಂದು ಇತಿಹಾಸವಿದೆ. ತುಳುನಾಡಿನ ಸಂಸ್ಕೃತಿ ಗದ್ದೆಯಿಂದ ಆರಂಭವಾಗುತ್ತದೆ ಎನ್ನುತ್ತಾರೆ. ಅದೇ ರೀತಿ ಧರ್ಮ ಜಾಗೃತಿಯ ಕೆಲಸ ಇಂದು ಗದ್ದೆಯಿಂದ ಆರಂಭವಾಗಿದೆ. ಇದು ಅತ್ಯಂತ ಯಶಸ್ವಿಯಾಗಲಿ ಎಂದರು. ಇದೇ ಗದ್ದೆಯ ಬದಿಯಲ್ಲಿರುವ ಶ್ರೀ ಮಾರಮ್ಮ ದೇವಿಯ ಕಟ್ಟೆಗೂ ಒಂದು ಇತಿಹಾಸವಿದ್ದು ಇದರ ಉಲ್ಲೇಖ ಈಜಿಷ್ಟ್‌ನಲ್ಲಿ ದೊರೆತ ಒಂದು ದಾಖಲೆಯಲ್ಲಿರುವುದು ಕುಂಬ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಕುಂಬ್ರವು ಇಂತಹ ನೂರಾರು ಸಮಾಜಮಿಖಿ ಕೆಲಸಗಳಿಗೆ ಸಾಕ್ಷಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಸ್ಪಂದನಾದ ಕೆಲಸ ರಾಜ್ಯಕ್ಕೆ ಮಾದರಿಯಾಗಲಿ : ಸಾಜ ರಾಧಾಕೃಷ್ಣ ಅಳ್ವ
ಮುಖ್ಯ ಅತಿಥಿಯಾಗಿದ್ದ ಬಿಜೆಪಿ ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ, ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ಧರ್ಮ ಜಾಗೃತಿಗಾಗಿ ಸ್ಪಂದನಾ ಸೇವಾ ಬಳಗ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸ್ಪಂದನಾದ ಶಕ್ತಿ ಎಷ್ಟೆಂಬುದು ಅರ್ಥವಾಗಿದೆ. ಇವರು ಮಾಡಿದ ಈ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು.
ದೇವರ ಫೋಟೋಗಳನ್ನು ಎಲ್ಲೆಂದರೆಲ್ಲಿ ಬಿಸಾಡಬೇಡಿ: ಕಿಶೋರ್ ಶೆಟ್ಟಿ ಅರಿಯಡ್ಕ
ಸುಜ್ಞಾನ ದೀಪಿಕೆ ಕಾರ್ಯಕ್ರಮದ ಮಹಾಪೋಷಕರು, ಸುಜ್ಞಾನ ದೀಪಿಕೆ ಪುಸ್ತಕಕ್ಕೆ ಚಾಲನೆ ನೀಡಿದ ಉದ್ಯಮಿ ಕಿಶೋರ್ ಶೆಟ್ಟಿ ಅರಿಯಡ್ಕ ಮಾತನಾಡಿ, ನಾವು ನಮ್ಮ ಧರ್ಮದ ಬಗ್ಗೆಯೇ ಕೆಲವೊಂದು ತಾತ್ಸಾರವಾಗಿ ಕಾಣುತ್ತೇವೆ ಇದು ಸರಿಯಲ್ಲ ನಮ್ಮ ದೇವರ ಫೋಟೋಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತೇವೆ. ನಮ್ಮ ದೈವ ದೇವರ ಮೇಲೆ ಹಾಗೇ ನಮ್ಮ ಧರ್ಮದ ಮೇಲೆ ನಾವು ನಂಬಿಕೆ ಇಟ್ಟುಕೊಂಡಾಗ ಮಾತ್ರ ಧರ್ಮ ಜಾಗೃತಿ ಸಾಧ್ಯ. ಇದನ್ನು ತಿಳಿಸುವ ಕೆಲಸ ಸುಜ್ಞಾನ ದೀಪಿಕೆಯಿಂದ ಆಗಲಿ ಎಂದು ಹೇಳಿ ಶುಭ ಹಾರೈಸಿದರು.
ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವುದೇ ಶ್ರೀರಾಮ ಲೀಲೋತ್ಸವದ ಉದ್ದೇಶ : ರತನ್ ರೈ ಕುಂಬ್ರ
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರರವರು, ಸ್ಪಂದನಾ ಎನ್ನುವುದು ಕೆದಂಬಾಡಿ,ಒಳಮೊಗ್ರು ಮತ್ತು ಅರಿಯಡ್ಕ 3 ಗ್ರಾಮಗಳ ಜನರ ಸ್ಪಂದನೆಯಾಗಿದೆ. ಈ ಕಾರ್ಯಕ್ರಮ ಕೇವಲ ರತನ್ ರೈ ಒಬ್ಬನ ಆಲೋಚನಯಲ್ಲ, ಸ್ಪಂದನಾ ಬಳಗದ ಎಲ್ಲರ ಆಲೋಚನೆಯಾಗಿದೆ. ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಧರ್ಮದ ಬಗ್ಗೆ ಅರಿವು ಮೂಡಿಸುವುದು ಜೊತೆಗೆ ಧಾರ್ಮಿಕ ಶಿಕ್ಷಣ ನೀಡುವುದೇ ಈ ಶ್ರೀರಾಮ ಲೀಲೋತ್ಸವದ ಉದ್ದೇಶವಾಗಿದೆ. ಸುಜ್ಞಾನ ದೀಪಿಕೆ ಪುಸ್ತಕದ ಮೂಲಕ 3 ಗ್ರಾಮದ ಹಿಂದೂ ಬಾಂಧವರಿಗೆ ಧಾರ್ಮಿಕ ಶಿಕ್ಷಣದ ಅರಿವು ಮೂಡಿಸುವ ಕೆಲಸ ಮಾಡಲಿದ್ದೇವೆ. ಇದರ ಹಿಂದೆ ಬಹಳಷ್ಟು ಮಂದಿಯ ಸಹಕಾರವಿದೆ. ಸಹಕರಿಸಿದ ಪ್ರತಿಯೊಬ್ಬರಿಗೂ ಮನದಾಳದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ರತನ್ ರೈ ಹೇಳಿದರು.
ಸಾಧಕರಿಗೆ ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ಇಬ್ಬರು ಸಾಧಕರನ್ನು ಗೌರವಿಸಲಾಯಿತು. ವೈದ್ಯಕೀಯ ಕ್ಷೇತ್ರ ಮತ್ತು ಸಮಾಜಸೇವೆ ಸಾಧಕರು, ಪುತ್ತೂರು ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಕೆ ಪ್ರಸಾದ್ ಹಾಗೂ ಧಾರ್ಮಿಕ ಕ್ಷೇತ್ರದ ಸಾಧಕರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಗೌರವಾರ್ಪಣೆ ನಡೆಸಿಕೊಟ್ಟರು.
ಕುಣಿತ ಭಜನಾ ತಂಡದ ಗುರುಗಳಿಗೆ ಸನ್ಮಾನ
ಕುಣಿತ ಭಜನಾ ತಂಡದ ಗುರುಗಳಾಗಿರುವ ಮೋಹನ ದರ್ಬೆತ್ತಡ್ಕ, ರವಿರಾಜ್ ಪಾಟಾಳಿ, ಮಲ್ಲಿಕಾ ಪ್ರಸಾದ್ ಅಲಂತ್ತಡ್ಕ, ಕಾರ್ತಿಕ್ ಆರ್ಯಾಪು, ಉಮೇಶ್ ನಾಯ್ಕ ಬಳ್ಳಮಜಲು, ವೈಷ್ಣವಿ ಅನ್ಯಾಡಿ, ಸದಾನಂದ ಆಚಾರ್ಯ ಕಣಿಯಾರು, ತೇಜಸ್ ನಾಯ್ಕ್, ಮೀನಾಕ್ಷಿ ವಿ.ರೈ, ಕಾರ್ತಿಕ್ ಆರ್ಯಾಪುರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ವಿಶೇಷತೆಗಳು
ಹಿಂಗಾರು ಅರಳಿಸುವ ಮೂಲಕ ಚನಿಲ ತಿಮ್ಮಪ್ಪ ಶೆಟ್ಟಿಯವರು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಿಮೋಟ್ ಒತ್ತುವ ಮೂಲಕ ರಾಮನ ಮೂರ್ತಿಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಲ್ಲಿಗೆ ಮಾಲಾರ್ಪಣೆ ಮಾಡಿದರು. ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಹೊಸ ವಿಧಾನವನ್ನು ಪರಿಚಯಿಸಿದ್ದರು. ಸಭಾ ಕಾರ್ಯಕ್ರಮ ಮುಗಿದ ಬಳಿಕ ಊಟದ ವ್ಯಸಸ್ಥೆಯನ್ನು ಮಾಡಲಾಗಿತ್ತು. ಸಾಂಸ್ಕೃತಿಕ ವೈಭವದಲ್ಲಿ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಪ್ರಕಾರಗಳು ಮೂಡಿಬಂದವು. ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ಯ ಹಿಂದಾರುರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸ್ಪಂದನಾದ ಗೌರವ ಮಾರ್ಗದರ್ಶಕರುಗಳಾದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕರ್ನಾಟಕ ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪ್ರಗತಿ ಪರ ಕೃಷಿಕ, ಸುಜ್ಞಾನ ದೀಪಿಕೆ ಪುಸ್ತಕದ ಮಹಾಪೋಷಕರಾದ ಯತೀಂದ್ರ ಕೊಚ್ಚಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷ ಗುಂಡ್ಯಡ್ಕ ವಾಸು ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಇದರ ಯೋಜನಾಧಿಕಾರಿ ಶಶಿಧರ ಎಂ, ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು, ಪೆರಿಗೇರಿಯ ಉದ್ಯಮಿ ಶ್ರೀನಿವಾಸ ಗೌಡ ಕನ್ನಯ, ಬ್ರೈಟ್ ವೇ ಇಂಡಿಯದ ಆಡಳಿತ ನಿರ್ದೇಶಕ ಹರ್ಷ ಕುಮಾರ್ ರೈ ಮಾಡಾವು,ಉದ್ಯಮಿ ಎಮ್.ಡಿ ವೆಂಕಟೇಶ್ ಹಿಂದಾರು, ಪ್ರಗತಿಪರ ಕೃಷಿಕ ಮನಮೋಹನ್ ರೈ ಕುಂಬ್ರ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್, ಕುಂಬ್ರ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ವಿನೋದ್ ಶೆಟ್ಟಿ ಅರಿಯಡ್ಕ, ನಿವೃತ್ತ ಸೈನಿಕ ಕಣ್ಣೂರುಗುತ್ತು ಶ್ರೀನಿವಾಸ ರೈ ಕುಂಬ್ರ, ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೀನಪ್ಪ ರೈ ಕೊಡಂಕೀರಿ, ಬೆಂಗಳೂರು ಉದ್ಯಮಿ ಗುರುಪ್ರಸಾದ್ ರೈ ಮೊರಂಗಲ್ಲು, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಭಾಸ್ಕರ ಬಲ್ಯಾಯ ಮದ್ಲ,ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಸನ್ಯಾಸಿಗುಡ್ಡೆ ಭಜನಾ ಮಂದಿರದ ಅಧ್ಯಕ್ಷ ಜೈಶಂಕರ ರೈ ಬೆದ್ರುಮಾರು, ತಿಂಗಳಾಡಿ ಭಜನಾ ಮಂದಿರದ ಜಯರಾಮ ರೈ ಮಿತ್ರಂಪಾಡಿ, ಕೌಡಿಚ್ಚಾರು ಭಜನಾ ಮಂದಿರದ ರಾಮದಾಸ್ ರೈ ಮದ್ಲ, ಮಡ್ಯಂಗಳ ಭಜನಾ ಮಂದಿರದ ಪ್ರವೀಣ್ ರೈ ಪನೆಕ್ಕಳ, ತಿಂಗಳಾಡಿಯ ಸುಂದರ ಗಾಂಧಿನಗರ, ಕೌಡಿಚ್ಚಾರು ಮುತ್ತುಮಾರಿಯಮ್ಮ ದೇವಿದೇವಸ್ಥಾನದ ರವಿಕುಮಾರ್, ದರ್ಬೆತ್ತಡ್ಕ ಭಜನಾ ಮಂದಿರದ ವಾಸು ಮಣಿಯಾಣಿ, ಸ್ವಾಮಿನಗರದ ಸತೀಶ್ ಕಕೇರ, ಸದಾಶಿವನಗರ ಭಜನಾ ಮಂದಿರದ ರಮೇಶ್ ಆಳ್ವ ಕಲ್ಲಡ್ಕ, ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಅರುಣ್ ಆಳ್ವ ಬೋಳೋಡಿ, ಅಜ್ಜಿಕಲ್ಲು ಭಜನಾ ಮಂದಿರದ ಅಜಿತ್ ಹೊಸಮನೆ, ಮುಂಡೋವುಮೂಳೆ ಭಜನಾ ಮಂದಿರದ ಈಶ್ವರ ನಾಯ್ಕ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಸ್ಮೃತಿ ಪಲ್ಲತ್ತಾರು, ಶಾರ್ವಿ ಮತ್ತು ಯಶಸ್ ಪ್ರಾರ್ಥಿಸಿದರು. ಸ್ಪಂದನಾ ಸೇವಾ ಬಳಗ ಗೌರವ ಸಲಹೆಗಾರ ತಿಲಕ್ ರೈ ಕುತ್ಯಾಡಿ ಸ್ವಾಗತಿಸಿದರು. ಶ್ರೀರಾಮ ಲೀಲೋತ್ಸವ ಸಮಿತಿಯ ಸಂಚಾಲಕ ಸುಧಾಕರ ರೈ ಕುಂಬ್ರ ಪ್ರಾಸ್ತಾವಿಕ ಮಾತುಗನ್ನಾಡಿದರು. ಸ್ಪಂದನಾ ಸೇವಾ ಬಳಗದ ಗೌರವಾಧ್ಯಕ್ಷ, ಉದ್ಯಮಿ ಮೋಹನದಾಸ ರೈ ಕುಂಬ್ರ, ಅಧ್ಯಕ್ಷ ರತನ್ ರೈ ಕುಂಬ್ರ, ಕಾರ್ಯಾಧ್ಯಕ್ಷ ಅಶೋಕ್ ತ್ಯಾಗರಾಜನಗರ, ಶ್ರೀರಾಮ ಲೀಲೋತ್ಸವ ಸಮಿತಿ ಸಹ ಸಂಚಾಲಕಿ ಉಷಾ ನಾರಾಯಣ್‌ರವರುಗಳು ಅತಿಥಿಗಳಿಗೆ ಶಾಲು, ಹೂ ಗುಚ್ಛ ನೀಡಿ ಸ್ವಾಗತಿಸಿದರು. ಸ್ಪಂದನಾ ಸೇವಾ ಬಳಗದ ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಜಾರತ್ತಾರು ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಸ್ಪಂದನಾ ಸೇವಾ ಬಳಗದ ಸರ್ವ ಪದಾಧಿಕಾರಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
260 ಭಜನಾರ್ಥಿಗಳಿಂದ ಭಕ್ತಿಭಾವ ಮೂಡಿಸಿದ ಕುಣಿತ ಭಜನೆ
ಶ್ರೀ ರಾಮ ಲೀಲೋತ್ಸವದ ವಿಶೇಷ ಆಕರ್ಷಣೆಯೇ ಕುಣಿತ ಭಜನೆಯಾಗಿತ್ತು. ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈಯವರು ದೀಪ ಪ್ರಜ್ವಲನೆಯ ಮೂಲಕ ಕುಣಿತ ಭಜನೆಗೆ ಚಾಲನೆ ನೀಡಿದರು. ಅಲ್ಲಂಗಾರ್ ಗದ್ದೆಯಲ್ಲಿ ಹಾಕಿದ 15 ವೃತ್ತದಲ್ಲಿ 13 ಭಜನಾ ಮಂದಿರದ ವ್ಯಾಪ್ತಿಯ ಸುಮಾರು 260 ಕುಣಿತ ಭಜನಾರ್ಥಿಗಳು 7 ಹಾಡುಗಳಿಗೆ ಕುಣಿತ ಭಜನೆ ನಡೆಸಿಕೊಟ್ಟರು. ಪ್ರತಿ ವೃತ್ತಕ್ಕೂ ರಾಮ, ಲಕ್ಷ್ಮಣ, ಸೀತೆ, ದಶರಥ, ವಾಲ್ಮಿಕಿ ಹೀಗೆ ಪುರಾಣದ ಹೆಸರುಗಳನ್ನು ಬರೆಯಲಾಗಿತ್ತು. ಪ್ರತಿ ವೃತ್ತದಲ್ಲೂ ದೀಪ ಪ್ರಜ್ವಲನೆ ಮೂಲಕ ಭಜನೆ ನಡೆಯಿತು. ಪುಟಾಣಿ ಮಕ್ಕಳ ಕುಣಿತ ಭಜನೆಯು ನೋಡುಗರ ಮನಸ್ಸಲ್ಲಿ ಭಕ್ತಿಭಾವ ಮೂಡಿಸಿತು. ಕುಣಿತ ಭಜನೆ ನಿರ್ವಾಹಣಾ ಸಮಿತಿಯ ಸಂಚಾಲಕ ಅರುಣ್ ರೈ ಬಿಜಳ, ಸಹ ಸಂಚಾಲಕ ನೇಮಿರಾಜ್ ರೈ ಕುರಿಕ್ಕಾರ ತಂಡದವರು ಸಹಕರಿಸಿದ್ದರು.
ಆಕರ್ಷಕ ಮೆರುಗು ತಂದ ಶೋಭಾಯಾತ್ರೆ
ಶ್ರೀರಾಮ ಲೀಲೋತ್ಸವದ ಮತ್ತೊಂದು ವಿಶೇಷ ಆಕರ್ಷಣೆ ಎಂದರೆ ವೈಭವದ ಶೋಭಾಯಾತ್ರೆ. ಕುಂಬ್ರ ಶ್ರೀರಾಮ ಭಜನಾ ಮಂದಿರದ ವಠಾರದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‌ರವರು ತೆಂಗಿನ ಕಾಯಿ ಒಡೆಯುವ ಮೂಲಕ ಹಾಗೇ ಪುತ್ತೂರು ವಿಜಯ ಸಾಮ್ರಾಟ್‌ನ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜರವರು ಶ್ರೀರಾಮನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ಭಜನಾ ಮಂದಿರದಿಂದ ಅಲ್ಲಂಗಾರ್ ಗದ್ದೆ ತನಕ ನಡೆದ ಶೋಭಾಯಾತ್ರೆ ಎಲ್ಲರ ಮನಸೂರೆಗೊಂಡಿತ್ತು. ಶೋಭಾಯಾತ್ರೆಯ ಸಂಚಾಲಕ ಎಸ್.ಮಾಧವ ರೈ ಕುಂಬ್ರ, ಸಹ ಸಂಚಾಲಕ ಕರುಣಾ ರೈ ಬಿಜಳ ಹಾಗೂ ತಂಡದವರು ಸಹಕರಿಸಿದ್ದರು.
ಶೋಭಾಯಾತ್ರೆಗೆ ಮೆರುಗು ತಂದ ಕಲಶ ಹಿಡಿದ ನಾರಿಯರು
ಮೆರವಣಿಗೆಯುದ್ದಕ್ಕೂ ವಿವಿಧ ಕುಣಿತ ಭಜನಾ ತಂಡದವರಿಂದ ಕುಣಿತ ಭಜನೆ ನಡೆಯಿತು. ಇದಲ್ಲದೆ ಶಿಸ್ತುಬದ್ಧವಾಗಿ ಸೀರೆಯುಟ್ಟು ಕಲಶ,ಬೆಲ್ಗೊಡೆ ಹಿಡಿದ 200 ಕ್ಕೂ ಅಧಿಕ ನಾರಿಯರು ಗಮನ ಸೆಳೆದರು. ವಿಶೇಷವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯೆಯರು ಹಾಗೂ ಸ್ಥಳೀಯ ಯುವತಿ ಮಂಡಲದ ಸದಸ್ಯೆಯರು ಭಾಗವಹಿಸಿದ್ದರು. ಮಹಿಳಾ ಸಮಿತಿಯ ಸಂಚಾಲಕಿ ತ್ರಿವೇಣಿ ಪಲ್ಲತ್ತಾರು, ಸಹ ಸಂಚಾಲಕಿ ಭಾರತಿ ಅರಿಯಡ್ಕ ಹಾಗೂ ತಂಡದವರು ಸಹಕರಿಸಿದ್ದರು.
“ ಶ್ರೀರಾಮ ಲೀಲೋತ್ಸವ ಎಂಬುದು ಸ್ಪಂದನಾ ಸೇವಾ ಬಳಗದ ಸರ್ವರ ಯೋಚನೆ, ಯೋಜನೆಯಾಗಿದೆ. 3 ಗ್ರಾಮದ ಸಮಸ್ತ ಹಿಂದೂ ಬಾಂಧವರಲ್ಲಿ ಧರ್ಮದ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿಯೇ ಸುಜ್ಞಾನ ದೀಪಿಕೆ ಪುಸ್ತಕ ಅನಾವರಣ ಮಾಡಿದ್ದೇವೆ. ಈ ಪುಸ್ತಕದ ಓದುವಿಕೆಯ ಮೌಲ್ಯಮಾಪನ ಕೂಡ ನಡೆಯುತ್ತದೆ. ಬಹಳಷ್ಟು ಹಿರಿಯರು ಈ ಒಂದು ಕಾರ್ಯಕ್ರಮಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾ, ಮುಂದೆಯೂ ಸಹಕಾರ ಬಯಸುತ್ತೇವೆ.”
ರತನ್ ರೈ ಕುಂಬ್ರ, ಅಧ್ಯಕ್ಷರು ಸ್ಪಂದನಾ ಸೇವಾ ಬಳಗ ಕುಂಬ್ರ