ಪಾಣಾಜೆ: ಇಲ್ಲಿನ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾಸಂಘದ 37ನೇ ವಾರ್ಷಿಕೋತ್ಸವ, ಸನ್ಮಾನ ಹಾಗೂ ಯಕ್ಷಗಾನ ಪ್ರದರ್ಶನ ಜ.25 ರಂದು ಜರಗಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕೆ.ಎಂ.ಎಫ್ ನಿರ್ದೇಶಕ ನಾರಾಯಣ ಪ್ರಕಾಶ್ ರವರು ಮಾತನಾಡಿ, ‘ಯಕ್ಷಗಾನ ಕಲೆಯ ಮೂಲಕ ಪಾಣಾಜೆಯ ಮಣ್ಣಿನ ಅನೇಕರು ಇಂದು ಹೊರಜಗತ್ತಿಗೂ ಕಲೆ ಸಂಸ್ಕಾರ ಪಸರಿಸುವ ಕಾರ್ಯ ಮಾಡುತ್ತಿರುವುದು ನಮಗೆ ಹೆಮ್ಮೆ. ಬಾಲಕೃಷ್ಣ ಪೂಜಾರಿಯವರೂ ಇಂದು ಯಕ್ಷಗಾನ ರಂಗದಲ್ಲಿ ಪ್ರಬುದ್ದ ವ್ಯಕ್ತಿಯಾಗಿ ಬೆಳೆಯುತ್ತಿದ್ದಾರೆ’ ಎಂದರು. ಸಭಾಧ್ಯಕ್ಷತೆ ವಹಿಸಿದ್ದ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದ ಅಧ್ಯಕ್ಷ ಪಿ.ಜಿ. ಶಂಕರನಾರಾಯಣ ಭಟ್ ಮಾತನಾಡಿ, ಭಜನಾ ಮಂದಿರವು ಸ್ಥಾಪಿತವಾದ ಇತಿಹಾಸವನ್ನು ಮೆಲುಕು ಹಾಕಿದರು. ‘ಬಾಳಪ್ಪನವರ ಶ್ರಮದಿಂದಾಗಿ ಇಂದು ಅನೇಕ ಕಡೆ ಯಕ್ಷಗಾನ ತರಬೇತಿ ನಡೆಯುತ್ತಿದೆ. ಅದಕ್ಕೆಲ್ಲಾ ಪ್ರೇರಣೆ ಇಲ್ಲಿನ ಯಕ್ಷಗಾನ ಕಲಾಸಂಘದ್ದಾಗಿದೆ’ ಎಂದರು.

ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್ ಸಿ ನಾರಾಯಣ ರವರು ಮಾತನಾಡಿ ‘ಮೂಲ ಸಂಸ್ಕೃತಿಯ ಕಲೆ ಎಂದು ಕರೆಸಿಕೊಂಡ ಏಕೈಕ ಕಲೆ ಯಕ್ಷಗಾನ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಯಕ್ಷಗಾನಕ್ಕೆ ಮೇರು ಸ್ಥಾನವಿದೆ’ ಎಂದರು.
ಸನ್ಮಾನ
ಯಕ್ಷಗಾನ ಕಲಾವಿದರಾದ ರಮೇಶ್ ಶೆಟ್ಟಿ ಬಾಯಾರು ಹಾಗೂ ಕೃಷ್ಣಪ್ರಕಾಶ್ ಉಳಿತ್ತಾಯ ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದ ಅಧ್ಯಕ್ಷ ಪಿ.ಜಿ. ಶಂಕರನಾರಾಯಣ ಭಟ್ ರವರಿಗೆ ಸಂಘದ ವತಿಯಿಂದ ಸನ್ಮಾನ ನಡೆಯಿತು. ರಿತೇಶ್ ವಾಣಿಯನ್ ಹಾಗೂ ಸುರೇಶ್ ಕುಮಾರ್ ಕಡಂದೇಲು, ಜಯರಾಮ ರೈ ಚಂಬರಕಟ್ಟ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್ ಭಟ್ ಬಾಯಾರುರವರು ‘ಕಲಾವಿದನೋರ್ವ ಬೆಳೆಯಬೇಕಾದರೆ ಅಥವಾ ಸಾಧನೆ ಮಾಡಬೇಕಾದರೆ ಅವನ ಹಿಂದೆ ಗುರುವಿನ ಪಾತ್ರ ಮಹತ್ವ ಪಡೆಯುತ್ತದೆ’ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯಕ್ಷಗಾನ ಕಲಾವಿದ, ಲೇಖಕ, ಕರ್ನಾಟಕ ಬ್ಯಾಂಕ್ ಚೀಫ್ ಮ್ಯಾನೇಜರ್ ಕೃಷ್ಣಪ್ರಕಾಶ್ ಉಳಿತ್ತಾಯರು ಮಾತನಾಡಿ ‘ಸನ್ಮಾನ ದೇವರು ಮತ್ತು ನನ್ನ ಗುರುಗಳ ಪ್ರಸಾದ ಎಂದು ಸ್ವೀಕರಿಸಿದ್ದೇನೆ. ಪಾಣಾಜೆಯಲ್ಲಿ ರಾಜಕೀಯ ಶಕ್ತಿ ಮತ್ತು ಸಾಂಸ್ಕೃತಿಕ ಶಕ್ತಿ ಒಂದಕ್ಕೊಂದು ಪೂರಕವಾಗಿ ಬೆಳೆಯುತ್ತಿವೆ.
ಸುಣ್ಣಾಡ ಧೂಮಾವತಿ ಬಂಟ ಮತ್ತು ಪರಿವಾರ ದೈವಸ್ಥಾನ ಮೂಲ ಸುವರ್ಣ ಕುಟುಂಬಸ್ಥರ ತರವಾಡು ದೊಡ್ಡಮನೆ ಅಧ್ಯಕ್ಷ ಶಿವಪ್ಪ ಮಾಸ್ತರ್ ಎಣ್ಮಕಜೆ ರವರು ಮಾತನಾಡಿ ಯಕ್ಷಗಾನ ಕಲಾವಿದನಾಗದಿದ್ದರೂ ಕಲೆಯನ್ನು ಪೋಷಣೆ ಮಾಡುವ ಅವಕಾಶಗಳು ಒದಗಿಬಂದಿದೆ. ಬಹುಶಃ ಬಾಲಕೃಷ್ಣ ಪೂಜಾರಿಯವರ ಒಡನಾಟದಿಂದಾಗಿ ಪಾಣಾಜೆಯ ಯಕ್ಷಗಾನ ಕಲಾಸಂಘದಲ್ಲಿಯೂ ಭಾಗವಹಿಸುವ ಅವಕಾಶ ದೊರೆಯಿತು’ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಿನ್ನಿಮಾಣಿ ಪೂಮಾಣಿ, ಪಿಲಿಭೂತ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಸದಾಶಿವ ರೈ ಸೂರಂಬೈಲು ಉಪಸ್ಥಿತರಿದ್ದರು.
ಸಂಘದಿಂದ ಧನಸಹಾಯ
ಅನಾರೋಗ್ಯದಿಂದಿರುವ ಯಕ್ಷಗಾನ ಕಲಾವಿದರಾದ ಶೀನಪ್ಪ ರೈ ಕೊಂದಲಡ್ಕ ಹಾಗೂ ಶ್ರೀಧರ ಗೌಡ ಮಿತ್ತಡ್ಕ ರವರಿಗೆ ಸಂಘದ ವತಿಯಿಂದ ಧನಸಹಾಯವನ್ನು ಇದೇ ವೇಳೆ ಹಸ್ತಾಂತರಿಸಲಾಯಿತು.
ಪ್ರಾಯೋಜಕರಿಗೆ ಗೌರವಾರ್ಪಣೆ
ಯಕ್ಷಗಾನ ಕಾರ್ಯಕ್ರಮದ ಪ್ರಾಯೋಜಕರಾಗಿ ಸಹಕರಿಸಿದ ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ವರದರಾಜ ನಾಯಕ್, ವಿಶ್ವನಾಥ ಪೂಜಾರಿ ಉಡ್ಡಂಗಳ, ಸ್ವಾತಿ ಪೂಜಾರಿ ರೆಂಜ, ಸೂರ್ಯನಾರಾಯಣ ಭಾಗವತ, ಸುಪ್ರೀತ್ ಪೂಜಾರಿ ಆರ್ಲಪದವು, ಚರಣ್ ರಾಜ್ ಆರ್ಲಪದವು, ಚಂದ್ರಕಾಂತ್ ಆರ್ಲಪದವು ರವರಿಗೆ ಗೌರವಾರ್ಪಣೆ ನಡೆಸಲಾಯಿತು. ಸಂಘದ ಅಧ್ಯಕ್ಷ, ಯಕ್ಷಗಾನ ನಾಟ್ಯಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ ಪ್ರಾಸ್ತಾವಿಕದೊಂದಿಗೆ ಸಂಘವು ನಡೆದು ಬಂದ ಹಾದಿಯ ಬಗ್ಗೆ ಮೆಲುಕು ಹಾಕಿ ಸ್ವಾಗತಿಸಿದರು. ಸಂಚಾಲಕ ಗಿರೀಶ್ ಗೋಳ್ವಾಲ್ಕರ್ ವಂದಿಸಿದರು. ರವಿಶೋಭಾ ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ಪ್ರದರ್ಶನ
ವಾರ್ಷಿಕೋತ್ಸವದ ಅಂಗವಾಗಿ ಬಾಲಕೃಷ್ಣ ಪೂಜಾರಿಯವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳ ತಂಡದಿಂದ ‘ಸಹದೇವ ದಿಗ್ವಿಜಯ’, ಸಂಜೆ ಹಿರಿಯ ಕಲಾವಿದರಿಂದ ‘ಮತ್ಸ್ಯಾವತಾರ – ದಕ್ಷಯಜ್ಞ – ಶಶಿಪ್ರಭಾ ಪರಿಣಯ’ ಯಕ್ಷಗಾನ ಪ್ರದರ್ಶನಗೊಂಡಿತು.
ಚಿತ್ರ: ಜಿ.ಎಸ್. ಹರೀಶ್ ಆರ್ಲಪದವು