ಆಲಂಕಾರು ಗ್ರಾ.ಪಂ.ವಿಶೇಷಚೇತನರ ಸಮನ್ವಯ ಗ್ರಾಮಸಭೆ

0

ಆಲಂಕಾರು: ಆಲಂಕಾರು ಗ್ರಾಮ ಪಂಚಾಯತ್‌ನ 2024-25ನೇ ಸಾಲಿನ ವಿಶೇಷಚೇತನರ ಸಮನ್ವಯ ಗ್ರಾಮಸಭೆ ಜ.29ರಂದು ಆಲಂಕಾರು ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.


ಗ್ರಾ.ಪಂ.ಅಧ್ಯಕ್ಷೆ ಸುಶೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ್ದ ಕಡಬ ತಾ.ಪಂ.ನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್‌ಕುಮಾರ್‌ರವರು ವಿಶೇಷಚೇತನರಿಗೆ 2016ರ ಅಧಿನಿಯಮ ಕಾಯ್ದೆ ಪ್ರಕಾರ ಎಲ್ಲಾ ಕ್ಷೇತ್ರದಲ್ಲಿ ಸಮಾನ ಅವಕಾಶ ದೊರಯಬೇಕು. ಸರಕಾರದ ಸೌಲಭ್ಯಗಳನ್ನು ಪಡೆಯಲು ಯುಡಿಐಡಿ ಕಾರ್ಡ್ ಪಡೆದಿರಬೇಕು. ಕೇಂದ್ರ ಸರಕಾರದ ನ್ಯಾಷನಲ್ ಟ್ಟಸ್ಟ್‌ನ ಅಡಿಯಲ್ಲಿ 4 ಬಗೆಯ ವಿಶೇಷ ಚೇತನರಿಗೆ ನಿರಾಮಯ ಆರೋಗ್ಯ ವಿಮಾ ಯೋಜನೆಯಡಿ ವೈದ್ಯಕೀಯ ಸೌಲಭ್ಯವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಿಶೇಷಚೇತನರನ್ನು ಸಾಮಾನ್ಯ ವ್ಯಕ್ತಿಗಳು ವಿವಾಹವಾದಲ್ಲಿ ಅವರಿಗೆ ವಿವಾಹ ಪ್ರೋತ್ಸಾಹಧನ ಯೋಜನೆ, ಸ್ವಯಂ ಉದ್ಯೋಗ ಕೈಗೊಂಡು ಜೀವನ ಸಾಗಿಸಲು ಅನುಕೂಲವಾಗುವಂತೆ ಆಧಾರ ಯೋಜನೆಯನ್ನು ಸರಕಾರ ಕಾರ್ಯರೂಪಕ್ಕೆ ತಂದಿದೆ. ಒಂದನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿ ವೇತನ, ರಿಯಾಯಿತಿ ದರದ ಪ್ರಯಾಣದ ಬಸ್ ಪಾಸ್ ಸೌಲಭ್ಯ, ಎಂಡೋಸಲ್ಫಾನ್ ಸಂತ್ರಸ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ, ವಿಶೇಷಚೇತನರ ದೈನಂದಿನ ಚಟುವಟಿಕೆಗಳಿಗೆ ಅಗತ್ಯವಾಗಿರುವ ತ್ರಿಚಕ್ರ ವಾಹನಗಳು, ಕೃತಕ ಅಂಗಾಂಗಳು ಉಚಿತವಾಗಿ ಪಡೆಯಲು ಅವಕಾಶವಿದೆ ಎಂದು ಹೇಳಿದ ಅವರು, ವಿಶೇಷ ಚೇತನರಿಗೆ ಸೋಲಾರ್ ಆಧಾರಿತ ಸ್ವ ಉದ್ಯೋಗ ಮಾಡಲು ಸಬ್ಸಿಡಿ ದೊರೆಯುವ ಬಗ್ಗೆ ಮಾಹಿತಿ ನೀಡಿದರು.


ವಿಶೇಷಚೇತನರಾದ ಪದ್ಮನಾಭರವರು ಎಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ವಿಶೇಷಚೇತನ ಮಾಸಾಶನ ಬರುವುದಿಲ್ಲ ತಿಳಿಸಿದರು. ಇದಕ್ಕೆ ನವೀನ್ ರವರು ಉತ್ತರಿಸಿ ಸರಕಾರಕ್ಕೆ ಬರೆಯುವುದು ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಾಂತ್ವನ ಕೇಂದ್ರದ ಆಪ್ತಸಮಾಲೋಚಕಿ ನಿಶಾಪ್ರಿಯಾರವರು ಮಹಿಳೆಯರಿಗೆ ಅವರ ಕಾನೂನು ಹಕ್ಕುಗಳು ಮತ್ತು ಮಹಿಳೆಯರಿಗೆ ಕಾನೂನು ನೆರವು ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.


ಪುತ್ತೂರು ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಆಪ್ತ ಸಮಾಲೋಚಕಿ ಗೀತಾ ವಿಜಯ್‌ರವರು ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳು ಹಾಗೂ ಪ್ರಧಾನಮಂತ್ರಿ ವಿಮಾ ಸೌಲಭ್ಯಗಳಾದ ಜೀವನ್ ಸುರಕ್ಷಾ ಮತ್ತು ಜೀವನ್ ಜ್ಯೋತಿ ವಿಮೆ ಹೆಚ್ಚಿನ ಸಂಖ್ಯೆಯಲ್ಲಿ ವಿಮಾ ನೊಂದಾಯಿಸಿಕೊಳ್ಳಬೇಕೆಂದರು. ಆರೋಗ್ಯ ಸಮುದಾಯ ಅಧಿಕಾರಿ ಬೆನ್ಸಿ ರವರು ಆಶಾಕಾರ್ಯಕರ್ತರನ್ನೊಳಗೊಂಡ ಕಾರ್ಯಪಡೆಯು ಗ್ರಾಮದ ಎಲ್ಲಾದ ಮನೆಗಳಿಗೆ ಭೇಟಿ ಮಾಡಿ ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.

ಗ್ರಾ.ಪಂ.ಉಪಾಧ್ಯಕ್ಷ ರವಿಪೂಜಾರಿ, ಗ್ರಾಮ ಆಡಳಿತಾಧಿಕಾರಿ ಪ್ರೇಮಲತಾ, ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಶಾಕಾರ್ಯಕರ್ತರು, ವಿಶೇಷಚೇತನರು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಸವಣೂರು ಗ್ರಾ.ಪಂ ನ ದೀಪಿಕಾ, ನೂಜಿಬಾಳ್ತಿಲ ಗ್ರಾ.ಪಂ ನ ಸಜೀತ್ ಭಾಗವಹಿಸಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮೋನಪ್ಪ ಸ್ವಾಗತಿಸಿದರು ಕಾರ್ಯದರ್ಶಿ ವಸಂತ ಶೆಟ್ಟಿ ನಿರೂಪಿಸಿದರು. ಸುಶ್ಮಿತ ವಂದಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here