ಸ್ತ್ರೀ ಪುರುಷರು ಎಂದಿಗೂ ಸಮಾನರಲ್ಲ-ಪೇರೋಡ್ ಉಸ್ತಾದ್
ಪುತ್ತೂರು: ಸ್ತ್ರೀ, ಪುರುಷ ಎಂದೂ ಸಮಾನರಲ್ಲ, ಪ್ರಕೃತಿ ಅವರನ್ನು ವ್ಯತ್ಯಸ್ಥ ವ್ಯವಸ್ಥೆಯಲ್ಲಿ ಸೃಷ್ಟಿಸಿದೆ. ವೈವಿಧ್ಯತೆ ಜಗದ ನಿಯಮ, ಪುರುಷನಿಗೆ ಮಹಿಳೆಯರಿಗಿಂತಲೂ ಹೆಚ್ಚಿನ ಶಕ್ತಿಯನ್ನು ನೀಡಲಾಗಿದೆ. ಅಮೂಲ್ಯ ನಿಧಿಯಾದ ವಜ್ರಾಭರಣಗಳನ್ನು ಎಷ್ಟೊಂದು ಭದ್ರವಾಗಿ ಕಾಪಾಡಲಾಗುವುದೋ ಅಂತೆಯೇ ಮಹಿಳೆಯನ್ನೂ ಕಾಪಾಡಬೇಕಾದದ್ದು ಕಾಲದ ಬೇಡಿಕೆಯಾಗಿದೆ ಎಂದು ಧಾರ್ಮಿಕ ವಿಧ್ವಾಂಸ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಹೇಳಿದರು.
ಅವರು ಕುಂಬ್ರ ಮರ್ಕಝುಲ್ ಹುದಾ ಕ್ಯಾಂಪಸ್ನಲ್ಲಿ ನಡೆದ ಮಾಹಿರಾ ಕಾನ್ಫರೆನ್ಸ್ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿನಿಯರು ಚಿಂತನಾಶೀಲತೆಯನ್ನು ರೂಡಿಸಿಕೊಳ್ಳುವವರಾಗಬೇಕು, ಒಳಿತು ಕೆಡುಕುಗಳ ಬಗ್ಗೆ ಚಿಂತನೆ ಮಾಡುವವರಾಗಿರಬೇಕು ಎಂದ ಅವರು ವಿದ್ಯಾರ್ಥಿ ದಿಸೆಯಲ್ಲಿ ರೂಡಿ ಮಾಡಿಕೊಂಡ ಒಳಿತಿನ ಚಿಂತನೆಗಳು, ಕರ್ಮಗಳು ಜೀವನ ಪೂರ್ತಿ ಉಪಯೋಗಕ್ಕೆ ಬರುತ್ತದೆ. ಈ ವೇಳೆಯಲ್ಲಿ ದಾರಿ ತಪ್ಪಿದರೆ ಜೀವನ ಚಕ್ರ ಅಲ್ಲೋಲಕಲ್ಲೋಲವಾಗಿ ಬಿಡುತ್ತದೆ ಎಂದು ಹೇಳಿದರು.
ಮಹಿಳಾ ವಿದ್ಯಾಭ್ಯಾಸದಲ್ಲಿ ಎತ್ತರದ ಪಾತ್ರವಹಿಸಿದ ಮರ್ಕಝುಲ್ ಹುದಾ ಈ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯಾಚರಣೆ ನಡೆಸುತ್ತಿದೆ ಎಂದು ಶ್ಲಾಘಿಸಿದರು. ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಾಂದರ್ಭಿಕವಾಗಿ ಮಾತನಾಡಿದರು. ಶರೀಅತ್ ವಿಭಾಗದ ಪ್ರಾಂಶುಪಾಲ ವಳವೂರು ಮಹಮ್ಮದ್ ಸಅದಿ, ಶರೀಅತ್ ಮುದರ್ರಿಸ್ ಜಲೀಲ್ ಸಖಾಫಿ ಜಾಲ್ಸೂರು, ಹನೀಫ್ ಸಖಾಫಿ ಕಡಬ ಮುಂತಾದವರು ಮಾತನಾಡಿದರು.
ಗಲ್ಫ್ ಪ್ರತಿನಿಧಿಗಳಾದ ಹಸೈನಾರ್ ಅಮಾನಿ ಅಜ್ಜಾವರ, ಹಕೀಂ ತುರ್ಕಳಿಕೆ, ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಆಡಳಿತ ಸಮಿತಿಯ ಯೂಸುಫ್ ಗೌಸಿಯಾ ಸಾಜ, ಆಶಿಕುದ್ದೀನ್ ಅಕ್ತರ್, ಕರೀಂ ಹಾಜಿ ಕಾವೇರಿ, ಯೂಸುಫ್ ಮೈದಾನಿಮೂಲೆ ಹಾಗೂ ಇಸ್ಮಾಯಿಲ್ ಹಾಜಿ ಬನ್ನೂರು, ಸಿರಾಜ್ ಮಾಸ್ಟರ್ ಕೆ.ಸಿ.ರೋಡ್, ಬದ್ರುದ್ದೀನ್ ಹಾಜಿ ನಗರ ಉಪಸ್ಥಿತರಿದ್ದರು.