ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ನಡೆಯುತ್ತಿರುವ ಸ್ವಚ್ಛತಾ ಶ್ರಮದಾನ ಅಭಿಯಾನಕ್ಕೆ ಮತ್ತಷ್ಟು ಬಲ ಬಂದಿದ್ದು ಪೇಟೆ ಸ್ವಚ್ಚತಾ ಕಾರ್ಯಕ್ಕೆ ಕುಂಬ್ರ ವರ್ತಕರ ಸಂಘ ಗ್ರಾಮ ಪಂಚಾಯತ್ನೊಂದಿಗೆ ಕೈ ಜೋಡಿಸಿದೆ. ಸ್ವಚ್ಚತಾ ಕಾರ್ಯಕ್ಕೆ ಒಬ್ಬರು ಅಥವಾ ಇಬ್ಬರನ್ನು ನೇಮಕ ಮಾಡಿಕೊಂಡು ವಾರಕ್ಕೆ ಒಂದು ದಿನ ಕುಂಬ್ರ ಪೇಟೆಯ ಸುತ್ತಮುತ್ತ ಸ್ವಚ್ಚತಾ ಕಾರ್ಯ ನಡೆಸುವ ಬಗ್ಗೆ ನಿರ್ಣಯ ಕೈಗೊಂಡಿದ್ದಾರೆ. ಈ ಬಗ್ಗೆ ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳರವರು ಸ್ವಚ್ಚತಾ ಶ್ರಮದಾನ ಅಭಿಯಾನದ ಉದ್ಘಾಟನೆ ಸಂದರ್ಭ ಮಾತನಾಡಿ ಪೇಟೆಯನ್ನು ಸ್ವಚ್ಛ ಮಾಡುವ ಬಗ್ಗೆ ನಮ್ಮ ಸಂಘದಿಂದ ಈಗಾಗಲೇ ಸಂಶುದ್ದೀನ್ ಎ.ಆರ್ ಮತ್ತು ನಾನು ಆರ್ಥಿಕ ಸಹಾಯ ನೀಡುತ್ತೇವೆ ಎಂದು ಘೊಷಣೆ ಮಾಡಿದ್ದರು. ಅದರಂತೆ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ರವರು ಕೂಡ ಇದಕ್ಕೆ ಬೆಂಬಲ ನೀಡಿದ್ದು ಆರ್ಥಿಕ ಸಹಾಯ ನೀಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಂಘದ ಸಭೆಯಲ್ಲಿ ಮಾತುಕತೆ ನಡೆಸಿ ಮುಂದಿನ ಹೆಜ್ಜೆ ಇಡುವುದಾಗಿ ಅವರು ತಿಳಿಸಿದ್ದಾರೆ.
ಹೇಗೆ ನಡೆಯುತ್ತೆ ಸ್ವಚ್ಛತೆ
ವರ್ತಕರ ಸಂಘದ ಮುತುವರ್ಜಿಯಲ್ಲಿ ಪೇಟೆ ಸ್ವಚ್ಚತಾ ಕಾರ್ಯಕ್ರಮ ನಡೆಯಲಿದ್ದು ಇದಕ್ಕಾಗಿ ಓರ್ವ ಅಥವಾ ಇಬ್ಬರು ಸ್ವಚ್ಛತಾ ಸೇನಾನಿಗಳನ್ನು ನೇಮಕ ಮಾಡಲಾಗುತ್ತದೆ. ಇವರಿಗೆ ವರ್ತಕರ ಸಂಘದಿಂದಲೇ ಗೌರವ ಧನ ನೀಡಲಾಗುತ್ತದೆ. ಇದಕ್ಕಾಗಿ ಈಗಾಗಲೇ ಸಂಶುದ್ದೀನ್ ಎ.ಆರ್, ಶ್ಯಾಮಸುಂದರ ರೈ ಕೊಪ್ಪಳ ಹಾಗೂ ಪಿ.ಕೆ ಮಹಮ್ಮದ್ರವರು ತಮ್ಮಿಂದ ಸಾಧ್ಯವಿರುವ ಆರ್ಥಿಕ ಸಹಾಯದ ಘೋಷಣೆ ಮಾಡಿದ್ದಾರೆ. ಇನ್ನುಳಿದಂತೆ ಯಾರಾದರೂ ಆರ್ಥಿಕ ಸಹಾಯ ನೀಡುವುದಾದರೆ ವರ್ತಕರ ಸಂಘದ ಅಧ್ಯಕ್ಷರನ್ನು ಸಂಪರ್ಕಿಸಬಹುದಾಗಿದೆ.
‘ಒಳಮೊಗ್ರು ಗ್ರಾಮವನ್ನು ಸ್ವಚ್ಚ ನಿರ್ಮಲ ಗ್ರಾಮವನ್ನಾಗಿ ಮಾಡುವುದೇ ನಮ್ಮೆಲ್ಲರ ಉದ್ದೇಶವಾಗಿದೆ. ಇದೊಂದು ಮಾದರಿ ಗ್ರಾಮವಾಗಬೇಕು ಎಂಬ ನಿಟ್ಟಿನಲ್ಲಿ ಪಂಚಾಯತ್ನೊಂದಿಗೆ ಸಂಘವು ಕೈಜೋಡಿಸಿಕೊಂಡು ಈ ಕಾರ್ಯ ಮಾಡಲಿದೆ. ಇದಕ್ಕೆ ವರ್ತಕ ಬಂಧುಗಳ, ಗ್ರಾಮಸ್ಥರ ಸಹಕಾರ ಅತೀ ಅಗತ್ಯವಿದೆ.’
ಪಿ.ಕೆ ಮಹಮ್ಮದ್, ಅಧ್ಯಕ್ಷರು ವರ್ತಕರ ಸಂಘ ಕುಂಬ್ರ