ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಸಂಸದರಿಂದ ಪರಿಶೀಲನೆ-ಅಧಿಕಾರಿಗಳಿಗೆ ನಿರ್ದೇಶನ

0

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯಲ್ಲಿ ಉಂಟಾಗಿರುವ ವಿವಿಧ ಸಮಸ್ಯೆಗಳ ಬಗ್ಗೆ ಜ.30ರಂದು ಅಧಿಕಾರಿಗಳೊಂದಿಗೆ ಖುದ್ದು ಸ್ಥಳ ಪರಿಶೀಲನೆ ನಡೆಸಿದ ಸಂಸದ ಬ್ರಿಜೇಶ್ ಚೌಟ ನೈಜ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.


ಹೆದ್ದಾರಿ ಇಲಾಖಾ ಯೋಜನಾ ನಿರ್ದೇಶಕ ಜಾವೇದ್ ಹಾಗೂ ಗುತ್ತಿಗೆದಾರ ಸಂಸ್ಥೆಯಾದ ಕೆ.ಎನ್.ಆರ್‌ನ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಸಿಂಗ್‌ರವರ ನೇತೃತ್ವದಲ್ಲಿ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನಾ ಕಾರ್ಯ ನಡೆಸಿದ ಸಂಸದರು, ಹೆದ್ದಾರಿ ಕಾಮಗಾರಿಯಿಂದಾಗಿ ಪೇರಮೊಗರು ಎಂಬಲ್ಲಿ ದೇಂತಡ್ಕ ದೇವಾಲಯಕ್ಕೆ ಸಂಪರ್ಕ ರಸ್ತೆಯೇ ಇಲ್ಲದಂತಾಗಿರುವ ಬಗ್ಗೆ ಜನರ ಅಹವಾಲನ್ನು ಸ್ವೀಕರಿಸಿ ದೇವಾಲಯಕ್ಕೆ ಇರುವ ರಸ್ತೆಯನ್ನು ಹೆದ್ದಾರಿಯೊಂದಿಗೆ ಜೋಡಿಸಲು ಅಗತ್ಯ ಕ್ರಮ ಕೈಕೊಳ್ಳಲು ಸೂಚಿಸಿದರು.


ಪೆರ್ನೆಯ ಕಡಂಬು ಎಂಬಲ್ಲಿ ಕೃಷಿ ಭೂಮಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಈ ಹಿಂದಿನ ಗುತ್ತಿಗೆದಾರ ಸಂಸ್ಥೆ ಅಳವಡಿಸಿದ್ದ ಮೋರಿಯನ್ನು ಈಗಿನ ಗುತ್ತಿಗೆದಾರ ಸಂಸ್ಥೆ ಮುಚ್ಚಿದೆ ಎಂಬ ಸ್ಥಳೀಯ ದೂರನ್ನು ಪರಿಶೀಲಿಸಿ ಕೃಷಿಕರಿಗೆ ಅನುಕೂಲವಾಗುವ ಹಾಗೆ ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸಲು ನಿರ್ದೇಶವಿತ್ತರು. ಸತ್ತಿಕಲ್ ನಿಂದ ಪೆರ್ನೆ ವರೆಗೆ ಡೈವರ್ಶನ್ ಕಲ್ಪಿಸಬೇಕೆಂಬ ಸ್ಥಳೀಯರ ಬೇಡಿಕೆಯ ನ್ಯಾಯೋಚಿತತೆಯನ್ನು ಕಂಡುಕೊಂಡ ಸಂಸದರು ಈ ಬಗ್ಗೆಯೂ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.


34ನೇ ನೆಕ್ಕಿಲಾಡಿಯಲ್ಲಿ ತಡೆಗೋಡೆ ಹಾಗೂ ಹೆದ್ದಾರಿ ಬದಿಯ ಈ ಹಿಂದಿನ ಚರಂಡಿಯನ್ನು ಪುನರ್ ನಿರ್ಮಿಸಬೇಕೆಂಬ ಬೇಡಿಕೆಯನ್ನು ಪರಿಶೀಲಿಸಿದ ಅವರು, ಕಾಮಗಾರಿ ನಡೆಯುವ ಮುನ್ನಾ ಅನಾವಶ್ಯಕ ಭೀತಿಯನ್ನು ವ್ಯಕ್ತಪಡಿಸಬಾರದೆಂದೂ ವಿನಂತಿಸಿದರಲ್ಲದೆ, ಎಲ್ಲೆಲ್ಲಿ ತಡೆಗೋಡೆ ಅಗತ್ಯವಿದೆಯೋ ಅಲ್ಲಲ್ಲಿ ತಡೆಗೋಡೆ ನಿರ್ಮಿಸಲಾಗುತ್ತದೆ. ನಾಗರಿಕರು ವ್ಯಕ್ತಪಡಿಸಿದ ಸ್ಥಳದಲ್ಲಿ ತಡೆಗೋಡೆಯ ಅಗತ್ಯತೆಯು ಕಂಡು ಬರುವುದಿಲ್ಲ ಹಾಗೂ ಯಾವುದೇ ಚರಂಡಿಯ ತ್ಯಾಜ್ಯ ನೀರು ಹೆದ್ದಾರಿಗೆ ಅಭಿಮುಖವಾಗಿ ಹರಿಯುವಂತಿಲ್ಲವೆಂದು ನುಡಿದರು.


ಸಂಸದರೊಂದಿಗೆ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಪ್ರಸನ್ನ ಮಾರ್ಥ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಉಜಿರೆಮಾರ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎನ್., ಉಪಾಧ್ಯಕ್ಷ ವಿದ್ಯಾಧರ ಜೈನ್, ಯತೀಂದ್ರ ಕೊಚ್ಚಿ, ಬಿಜೆಪಿ ಮುಖಂಡರಾದ ಪುನೀತ್ ಮಾಡತ್ತಾರ್,ಶಿವಪ್ಪ ನಾಯ್ಕ, ನಿತೀಶ್ ಶಾಂತಿವನ, ಸುರೇಶ್ ಅತ್ರೆಮಜಲು, ಸಾಜಾ ರಾಧಾಕೃಷ್ಣ ಆಳ್ವ ಪುರುಷೋತ್ತಮ ಮುಂಗ್ಲಿಮನೆ, ಚಂದ್ರಶೇಖರ್ ಬಪ್ಪಳಿಗೆ, ಸದಾನಂದ ನೆಕ್ಕಿಲಾಡಿ, ಹರೀಶ್ ಡಿ., ರಾಜೇಶ್ ಶಾಂತಿನಗರ, ಚಂದ್ರಶೇಖರ ಮಡಿವಾಳ ಮತ್ತಿತರರು ಉಪಸ್ಥಿತರಿದ್ದರು.


ಗಮನ ಸೆಳೆದ ಸಂಸದರ ನಿಖರತೆ
ಕಾಮಗಾರಿಯ ಪರಿಶೀಲನೆ ನಡೆಸುತ್ತಾ 34ನೇ ನೆಕ್ಕಿಲಾಡಿಗೆ ಬಂದಾಗ ಸಾಯಂಕಾಲ 4 ಗಂಟೆ ಸಮೀಪಿಸಿದ್ದರೂ, ಮಧ್ಯಾಹ್ನದ ಊಟವಾಗದಿದ್ದರೂ ಸಾವಧಾನವಾಗಿ ಜನರ ಸಮಸ್ಯೆಯನ್ನು ಆಲಿಸಿದರು.

LEAVE A REPLY

Please enter your comment!
Please enter your name here