ಉಪ್ಪಿನಂಗಡಿ: ಮರದ ಮಿಲ್‌ನಲ್ಲಿ ಅಗ್ನಿ ಅವಘಡ -ಯಂತ್ರೋಪಕರಣ, ಮರಮಟ್ಟುಗಳು ಬೆಂಕಿಗಾಹುತಿ: ಲಕ್ಷಾಂತರ ರೂ. ಹಾನಿ

0

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಸೇತುವೆಯ ಇಳಂತಿಲ ಭಾಗದಲ್ಲಿರುವ ಎವರೆಸ್ಟ್ ಮರದ ಮಿಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ಯಂತ್ರೋಪಕರಣಗಳ ಸಹಿತ ಮರಮಟ್ಟುಗಳು ಬೆಂಕಿಗಾಹುತಿಯಾದ ಘಟನೆ ಮಂಗಳವಾರ ನಸುಕಿನ ವೇಳೆ ಸಂಭವಿಸಿದೆ.


ಯು.ಟಿ. ಫಯಾಜ್ ಅಹಮ್ಮದ್ ಎಂಬವರ ಒಡೆತನದ ಈ ಮರದ ಮಿಲ್ ನಲ್ಲಿ ವಿದ್ಯುತ್ ಮೀಟರ್ ಬಳಿಯಿಂದ ಮಧ್ಯ ರಾತ್ರಿ ಸುಮಾರಿಗೆ ಮೂಡಿದ ಬೆಂಕಿ ಮರದ ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತಿದ್ದ ಯಂತ್ರೋಪಕರಣಗಳನ್ನು ಹಾಗೂ ವಿವಿಧ ಉತ್ತಮ ಜಾತಿಯ ಮರಮಟ್ಟುಗಳನ್ನು ಸಂಪೂರ್ಣ ಆಹುತಿ ತೆಗೆದುಕೊಂಡಿತ್ತು. ನಸುಕಿನ 5 ಗಂಟೆ ಸುಮಾರಿಗೆ ಮಿಲ್ಲಿನಿಂದ ಹೊಗೆ ಬರುತ್ತಿರುವುದನ್ನು ಕಂಡು ಸ್ಥಳಕ್ಕೆ ಧಾವಿಸಿದ ಮಾಲಕರಿಗೆ ಮಿಲ್ಲಿನೊಳಗೆ ಅಗ್ನಿ ಅನಾಹುತ ಸಂಭವಿಸಿದ್ದು ಕಂಡು ಬಂದಿರುತ್ತದೆ. ಒಡನೆಯೇ ಸಮೀಪದಲ್ಲೇ ಇದ್ದ ನೀರಿನ ವ್ಯವಸ್ಥೆಯನ್ನು ಬಳಸಿ ಬೆಂಕಿಯನ್ನು ವಿಸ್ತರಿಸದಂತೆ ತಡೆದ ಅವರು ಸಮೀಪದ ಕಟ್ಟಡಗಳಿಗೆ ಹಾನಿಯಾಗುವುದನ್ನು ತಪ್ಪಿಸಿದರು. ಘಟನೆಯಿಂದ ಸುಮಾರು 6 ಲಕ್ಷ ದಷ್ಟು ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.


ಅಪದ್ಭಾಂಧವ ಫಯಾಜ್:
ಎವೆರೆಸ್ಟ್ ಮರದ ಮಿಲ್ ಮಾಲಕ ಯು.ಟಿ. ಫಯಾಜ್ ಅಹಮ್ಮದ್ ಪರಿಸರದಲ್ಲಿ ಯಾವುದೇ ಅವಘಡ ಸಂಭವಿಸಲಿ ಜಾತಿ- ಧರ್ಮದ ಹಂಗಿಲ್ಲದೆ ಮಿಂಚಿನ ವೇಗದಲ್ಲಿ ಧಾವಿಸಿ ಬಂದು ರಕ್ಷಣಾ ಕಾರ್ಯಕ್ಕೆ ಮುಂದಾಗುವ ಮನೋಭಾವದ ವ್ಯಕ್ತಿ. ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ನಾಲ್ಕೈದು ವಿದ್ಯುತ್ ಅವಘಡದ ಸನ್ನಿವೇಶದಲ್ಲೂ ಇವರದ್ದು ಮುಂಚೂಣಿಯ ಪರಿಹಾರ ಕಾರ್ಯಾಚರಣೆ ಕಂಡು ಬಂದಿತ್ತು. ಆದರೆ ಮಂಗಳವಾರ ನಸುಕಿನಲ್ಲಿ ಸ್ವತಃ ಅವರದ್ದೇ ಮರದ ಮಿಲ್ಲಿನಲ್ಲಿ ಅಗ್ನಿ ಅನಾಹುತ ಸಂಭವಿಸಿ ಲಕ್ಷಾಂತರ ರೂ. ನಷ್ಟವುಂಟಾಗುವಂತಾಗಿದೆ. ಜೊತೆಗೆ ಎಲ್ಲರೂ ಸುಖ ನಿದ್ರೆಯಲ್ಲಿರುವ ಸಮಯ ಯಾರಿಗೂ ಗೊತ್ತಾಗದ ವೇಳೆಯಲ್ಲಿ ಮೂಡಿದ ಬೆಂಕಿಯು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ವ್ಯಾಪಿಸಿ ಉಳಿದ ಅವರದ್ದೇ ಒಡೆತನದ ಕಟ್ಟಡಗಳಿಗೆ ಪ್ರಸಹರಿಸದಿರುವುದು ದೇವರ ಕೃಪೆಯಂತೆ ಗೋಚರಿಸಿದ್ದು, ಅವರು ಮಾಡಿದ ಸತ್ಕಾರ್ಯಗಳು ಅವರನ್ನು ರಕ್ಷಿಸಿದೆ ಎಂಬ ಭಾವನೆಯೂ ಜನರಿಂದ ವ್ಯಕ್ತಗೊಂಡಿದೆ.

LEAVE A REPLY

Please enter your comment!
Please enter your name here