ನೆಲ್ಯಾಡಿ: ಜೀರ್ಣೋದ್ದಾರಗೊಂಡಿರುವ ಕಡಬ ತಾಲೂಕಿನ ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಫೆ.5ರಂದು ಬೆಳಿಗ್ಗೆ ಚಾಲನೆ ದೊರೆತಿದ್ದು ಫೆ.10ರ ತನಕ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಫೆ.5ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ನಡೆಯಿತು. ಬಳಿಕ ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಿಂದ ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆ ನಡೆಯಿತು. ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಪ್ರಾರ್ಥನೆ ನೆರವೇರಿಸಿದ ಬಳಿಕ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರೂ, ಆಡಳಿತ ಮೊಕ್ತೇಸರರೂ ಆದ ನಾರಾಯಣ ಬಡೆಕ್ಕಿಲ್ಲಾಯ ಅವರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ಗ್ರಾಮಗಳಿಂದ ಆಗಮಿಸಿದ ಹೊರೆಕಾಣಿಕೆ ಹೊತ್ತ ಆಲಂಕೃತ ವಾಹನಗಳೊಂದಿಗೆ ಮೆರವಣಿಗೆ ಸುಮಾರು 2 ಕಿ.ಮೀ.ಸಾಗಿ ದೇವಸ್ಥಾನಕ್ಕೆ ಆಗಮಿಸಿತು. ವಿವಿಧ ಭಜನಾ ತಂಡಗಳಿಂದ ಭಜನೆ, ಕುಣಿತ ಭಜನೆ, ಗೊಂಬೆ ಕುಣಿತ, ಚೆಂಡೆಯ ಸದ್ದು ಹೊರೆಕಾಣಿಕೆ ಮೆರವಣಿಗೆಗೆ ಮೆರುಗು ನೀಡಿತು. ಹೊರೆಕಾಣಿಕೆಯಲ್ಲಿ ಆಗಮಿಸಿದ ಅಡಿಕೆ, ತೆಂಗಿನಕಾಯಿ, ಸೀಯಾಳ, ಅಕ್ಕಿಚೀಲ, ಅಕ್ಕಿಮುಡಿ, ತರಕಾರಿ ಸೇರಿದಂತೆ ವಿವಿಧ ಫಲವಸ್ತುಗಳನ್ನು ದೇವಸ್ಥಾನದ ಉಗ್ರಾಣದಲ್ಲಿ ತುಂಬಿಸಲಾಯಿತು. ಮೆರವಣಿಗೆಯಲ್ಲಿ ಊರ ಹಾಗೂ ಪರವೂರಿನ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.
ಉಗ್ರಾಣ/ಕಾರ್ಯಾಲಯ ಉದ್ಘಾಟನೆ:
ದೇವಸ್ಥಾನದಲ್ಲಿ ಹೊರೆಕಾಣಿಕೆ ಸಂಗ್ರಹದ ಉಗ್ರಾಣವನ್ನು ಶಾಂತ ಸರಳಾಯ ಅವರು ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವದ ಕಾರ್ಯಾಲಯವನ್ನು ಗುಡ್ರಾದಿ ಶ್ರೀ ಗುಡ್ರಾಮಲ್ಲೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಂಜುನಾಥ ಗೌಡ ಕೈಕುರೆ ಉದ್ಘಾಟಿಸಿದರು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಮಾಧವ ಸರಳಾಯ, ಪ್ರಧಾನ ಅರ್ಚಕ ವೇದಮೂರ್ತಿ ಅಮೃತರಾಜ ಸರಳಾಯ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಶಿವಾನಂದ ಕಾರಂತ್ ಕಾಂಚನ, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಅಜಯ್ ಸರಳಾಯ, ಕೋಶಾಧಿಕಾರಿ ಅರುಣ್ ಸರಳಾಯ, ಜೊತೆ ಕಾರ್ಯದರ್ಶಿಗಳಾದ ಲೋಕೇಶ್ ಅಗರ್ತ, ಜಯಂತ ಅಂಬರ್ಜೆ, ಸಹ ಕೋಶಾಧಿಕಾರಿಗಳಾದ ಹರೀಶ್ ಶೆಟ್ಟಿ ಪಾತೃಮಾಡಿ, ಭೀಮ ಭಟ್ ನೆಕ್ಕರೆ, ಉಪಾಧ್ಯಕ್ಷರಾದ ಸದಾನಂದ ಗೌಡ ಡೆಬ್ಬೇಲಿ, ಬಾಲಕೃಷ್ಣ ಶೆಟ್ಟಿ ಅಗರ್ತ, ನೋಣಯ್ಯ ಗೌಡ ಡೆಬ್ಬೇಲಿ, ನೋಣಯ್ಯ ಪೂಜಾರಿ ಅಂಬರ್ಜೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಸತೀಶ್ ಕೆ.ಎಸ್.ದುರ್ಗಾಶ್ರೀ ನೆಲ್ಯಾಡಿ, ಕಾರ್ಯದರ್ಶಿ ಅಜಿತ್‌ಕುಮಾರ್ ಪಾಲೇರಿ, ಕೋಶಾಧಿಕಾರಿ ರಮೇಶ್ ಭಟ್ ಬಿ.ಜಿ., ಉಪಾಧ್ಯಕ್ಷರಾದ ಸುಂದರ ಶೆಟ್ಟಿ ಪುರ, ಸತೀಶ್ ರೈ ಕೊಣಾಲುಗುತ್ತು, ಪ್ರವೀಣ್ ಭಂಡಾರಿ ಪುರ, ಕುಮಾರನ್ ಪಾಂಡಿಬೆಟ್ಟು, ಜೊತೆ ಕಾರ್ಯದರ್ಶಿಗಳಾದ ಸುರೇಶ್ ತಿರ್ಲೆ, ಮಹೇಶ್ ಆಚಾರ್ಯ ಪಾತೃಮಾಡಿ, ಜನಾರ್ದನ ಗೌಡ ಬರಮೇಲು, ಲಾವಣ್ಯಸಂದೇಶ್ ಏಡ್ಮೆ, ಗೌರವ ಸಲಹೆಗಾರರು, ವಿವಿಧ ಉಪಸಮಿತಿಗಳ ಸಂಚಾಲಕರು, ಸಹಸಂಚಾಲಕರು, ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು.