ಪುತ್ತೂರು: ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಇದರ ವತಿಯಿಂದ ಶ್ರೀ ದುರ್ಗಾ ಯುವಕಮಂಡಲ ಕೆಯ್ಯೊರು ಇದರ ಸಹಕಾರದೊಂದಿಗೆ ನಡೆಯುತ್ತಿರುವ ಉಚಿತ ಟೈಲರಿಂಗ್ ತರಬೇತಿ ಕೇಂದ್ರದ ಆರನೇ ಬ್ಯಾಚಿನವರಿಗೆ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮವು ಶ್ರೀ ದುರ್ಗ ಯುವಕ ಮಂಡಲದ ಕಟ್ಟಡದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಇದರ ಸೇವಾ ಸಂಯೋಜಕ ನಾರಾಯಣ ರೈಯವರು ಉದ್ಘಾಟಿಸಿ, ಮಾತನಾಡಿ ಎಲ್ಲರನ್ನೂ ಪ್ರೀತಿಸಿ, ಎಲ್ಲರ ಸೇವೆ ಮಾಡಿ ಎಂಬ ಶ್ರೀ ಸ್ವಾಮಿಯ ಸಂದೇಶದಂತೆ ನಡೆಯುವ ಈ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸಿದರು ಮತ್ತು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಸೇವಾ ಚಟುವಟಿಕೆ ಮತ್ತು ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಿವೃತ್ತ ತಹಸಿಲ್ದಾರ್ ವಿಶ್ವನಾಥ ಪೂಜಾರಿ ಯವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ 7ನೇ ಬ್ಯಾಚಿನ ಉದ್ಘಾಟನೆಯ ಕೂಡ ನಡೆಯಿತು. ಕೇಂದ್ರದ ಉಸ್ತುವಾರಿ ಶ್ರೀಧರ ಪೂಜಾರಿಯವರು ಸ್ವಾಗತಿಸಿದರು, ಶಿಕ್ಷಕಿ ಮೀನಾಕ್ಷಿ ರೈಯವರು ವರದಿ ವಾಚಿಸಿದರು. ಆರನೇ ಬ್ಯಾಚಿನ ರಕ್ಷಾ, ಧನ್ಯ, ರೇಷ್ಮರೈ ಯವರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಮಿತಿಯ ನಿಕಟ ಪೂರ್ವ ಸಂಚಾಲಕ ರಘುನಾಥ ರೈ ಯವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.