ಹಿಂದೂ ಧರ್ಮದಿಂದ ಜಗತ್ತಿಗೆ ಶಾಂತಿ, ನೆಮ್ಮದಿ; ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣ
ನೆಲ್ಯಾಡಿ: ಜೀರ್ಣೋದ್ದಾರಗೊಂಡಿರುವ ಕಡಬ ತಾಲೂಕಿನ ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆ.೫ರಂದು ಆರಂಭಗೊಂಡಿದ್ದು ಸಂಜೆ ಗೌರಮ್ಮ ಶಬರಾಯ ಸಭಾಭವನದ ಎಲಿಕ್ಕಳ ಕೃಷ್ಣ ಶಬರಾಯ ವೇದಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು, ಜಗತ್ತಿಗೆ ಶಾಂತಿ, ನೆಮ್ಮದಿಯನ್ನು ಕೊಡುವ ಧರ್ಮವಿದ್ದರೆ ಅದು ಹಿಂದೂ ಧರ್ಮ ಮಾತ್ರ. ಆದ್ದರಿಂದ ಹಿಂದೂ ಧರ್ಮದಲ್ಲಿ ಹುಟ್ಟುವುದೇ ಪುಣ್ಯ. ಧಾರ್ಮಿಕತೆಯಲ್ಲಿ ಇರುವ ರುಚಿ ಅನುಭವಿಸಿದವರಿಗೆ ಮಾತ್ರ ಗೊತ್ತು. ಧರ್ಮವನ್ನು ಅರಿತು ಕರ್ತವ್ಯ ಮಾಡಿದಾಗ ದೇವರ ಅನುಗ್ರಹ ಲಭಿಸುತ್ತದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಬ್ರಹ್ಮಶ್ರೀ ಕಾರ್ತಿಕ್ ತಂತ್ರಿ ಕೆಮ್ಮಿಂಜೆ ಅವರು, ಸನಾತನವಾದ ಹಿಂದೂ ಧರ್ಮದಲ್ಲಿ ಹುಟ್ಟಿರುವುದು ಎಷ್ಟೋ ಜನ್ಮದಲ್ಲಿ ಮಾಡಿದ ಪುಣ್ಯದ ಫಲದಿಂದ ಆಗಿದೆ. ಹಿಂದೂ ಧರ್ಮ ಯಾರೋ ಒಬ್ಬ ಸೃಷ್ಟಿಸಿದ ಧರ್ಮವಲ್ಲ. ಋಷಿಮುನಿಗಳ, ಮಹಾತ್ಮರ ಅನುಗ್ರಹದಿಂದ ಅನಾದಿ ಕಾಲದಿಂದ ಸನಾತನ ಹಿಂದೂ ಧರ್ಮ ಬೆಳೆದುಬಂದಿದೆ ಎಂದು ಹೇಳಿದ ಅವರು, ಶ್ರದ್ಧಾ ಕೇಂದ್ರಗಳು ಧರ್ಮದ ಅಡಿಪಾಯವಾಗಿದೆ. ದೇವರ ಅನುಗ್ರಹ ಹಾಗೂ ಊರಿನ ಭಕ್ತರ ಅವಿರತ ಶ್ರಮದಿಂದ ಗ್ರಾಮೀಣ ಪ್ರದೇಶವಾದ ಕೊಣಾಲು ಗ್ರಾಮದಲ್ಲಿ ಸುಂದರ ದೇವಾಲಯ ನಿರ್ಮಾಣಗೊಂಡು ವೈಭವದಿಂದ ಬ್ರಹ್ಮಕಲಶೋತ್ಸವ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅತಿಥಿಯಾಗಿದ್ದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕುಂಭ ಮೇಳದ ಮೂಲಕ ಭಾರತದ ಆಧ್ಯಾತ್ಮಿಕ ಶಕ್ತಿ ಜಗತ್ತಿಗೆ ಪರಿಚಯಿಸುವ ಸಂದರ್ಭದಲ್ಲೇ ಶ್ರೀ ಮಹಾವಿಷ್ಣುಮೂರ್ತಿ ದೇವರ ಬ್ರಹ್ಮಕಲಶೋತ್ಸವ ನಡೆಯುತ್ತಿರುವುದು ಶುಭ ಸೂಚನೆಯಾಗಿದೆ. ಈ ದೇವಾಲಯದ ಜೀರ್ಣೋದ್ಧಾರದಿಂದ ಹಿಂದೂಗಳಿಗೆ ಮಾತ್ರ ಅಲ್ಲ, ಈ ಭಾಗದ ಎಲ್ಲರಿಗೂ ಒಳ್ಳೆಯದಾಗಲಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಂಶುಪಾಲ ವಿಠಲ ರೈ ಕೊಣಾಲುಗುತ್ತು ಮಾತನಾಡಿ, ಮಹಾವಿಷ್ಣುಮೂರ್ತಿ ದೇವರ ಬ್ರಹ್ಮಕಲಶೋತ್ಸವ ಕೊಣಾಲು ಗ್ರಾಮದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಅದ್ಬುತ ಕಾರ್ಯಕ್ರಮವಾಗಿದೆ. ಊರಿನ ಜನರ ಇಚ್ಛಾಶಕ್ತಿಯೂ ಇದಕ್ಕೆ ಕಾರಣವಾಗಿದೆ. ಈ ಯಶಸ್ಸಿನ ಹಿಂದೆ ಸಾವಿರಾರು ಮಂದಿಯ ಪರಿಶ್ರಮವಿದೆ. ಇಲ್ಲಿನ ದೇವರ ಸಾನಿಧ್ಯದಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಕಾರ್ಯವಾಗಬೇಕೆಂದು ಹೇಳಿದರು.
ಕುಂಟುಕುಡೇಲು ರಘುರಾಮ ತಂತ್ರಿಗಳು, ನವರಸರಾಜ, ರಂಗ ಕಲಾವಿದ ಭೋಜರಾಜ ವಾಮಂಜೂರು, ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿ ಶೇಖರ ಗೌಡ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ, ಶಾಂತ ಸರಳಾಯ ಪಾತೃಮಾಡಿ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು, ಉಪ್ಪಿನಂಗಡಿ ಶ್ರೀ ಪದ್ಮಾವಿದ್ಯಾ ಪೆಟ್ರೋಲ್ ಪಂಪ್ ಮಾಲಕ ಏಕವಿದ್ಯಾಧರ ಜೈನ್, ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಠೇರಿ, ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ಸದಸ್ಯೆ ವಾರಿಜಾಕ್ಷಿ ಹೊಸಮನೆ, ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಎ.ಎಸ್.ಶೇಖರ ಗೌಡ ಅನಿಲಬಾಗ್, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಶಿವಾನಂದ ಕಾರಂತ್ ಕಾಂಚನ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಸುಂದರ ಶೆಟ್ಟಿ ಪುರ, ಸದಾನಂದ ಗೌಡ ಡೆಬ್ಬೇಲಿ, ವೈದಿಕ ಸಮಿತಿ ಸಂಚಾಲಕ ರವಿಕುಮಾರ್ ಹೊಳ್ಳ ಸುಬ್ರಹ್ಮಣ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಜಯ್ ಸರಳಾಯ, ಆನಂದ ಶೆಟ್ಟಿ, ವನಿತ ಅಗರ್ತ, ವೀಣಾರಾಮಕೃಷ್ಣ ಭಟ್ ಆಂಜರ, ಜನಾರ್ದನ ಗೌಡ ಶಾಂತಿಮಾರು, ರುಕ್ಮಯ ಗೌಡ ತಿರ್ಲೆ, ಪುರಂದರ ಅಂಬರ್ಜೆ, ಪ್ರಸಾದ್ ಮರಂದೆ, ಉದಯ ಪಾತೃಮಾಡಿ, ಬಬಿತಾ ಅಂಬರ್ಜೆ, ಪದ್ಮನಾಭ ಶೆಟ್ಟಿ ಮರಂದೆ, ಸಂದೇಶ್ ಏಡ್ಮೆ, ತುಕರಾಮ ಗೌಡ ಗೋಳಿತ್ತೊಟ್ಟು, ಶ್ರೀಧರ ಪೂಜಾರಿ ಅಂಬರ್ಜೆ ಅವರು ಅತಿಥಿಗಳಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಿದರು.
ರಾಮಕೃಷ್ಣ ಭಟ್ ಆಂಜರ ಸ್ವಾಗತಿಸಿ, ಯಶೋಧಜನಾರ್ದನ ಗೌಡ ಶಾಂತಿಮಾರು ವಂದಿಸಿದರು. ಜಯಾನಂದ ಬಂಟ್ರಿಯಾಲ್ ನೆಲ್ಯಾಡಿ, ರವೀಂದ್ರ ಟಿ.ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ರೇಷ್ಮಾ ಸರಳಾಯ, ಶಾಲಿನಿ ಸರಳಾಯ ಪ್ರಾರ್ಥಿಸಿದರು. ಸಭಾ ನಿರ್ವಹಣಾ ಸಮಿತಿ ಸಂಚಾಲಕ ಜಯಂತ ಅಂಬರ್ಜೆ ಸಹಕರಿಸಿದರು.
ಭಜನೆ:
ಸಂಜೆ ಶ್ರೀ ಷಣ್ಮುಖ ಭಜನಾ ಮಂಡಳಿ ಪೆರ್ಲ ಹಾಗೂ ಶ್ರೀರಾಮ ಭಜನಾ ಮಂಡಳಿ ಆಲಂತಾಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ತಂತ್ರಿಗಳಿಗೆ, ಋತ್ವಿಜರಿಗೆ ಸ್ವಾಗತ:
ಸಂಜೆ ಕ್ಷೇತ್ರದ ತಂತ್ರಿಗಳಿಗೆ ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ದೇವತಾ ಪ್ರಾರ್ಥನೆ, ಆಚಾರ್ಯದಿ ಋತ್ವಿಗ್ವರಣ, ಪ್ರಸಾದ ಪರಿಗ್ರಹ, ಸ್ವಸ್ತಿ ಪುಣ್ಯಾಹ ವಾಚನ, ಪ್ರಸಾದ ಶುದ್ಧಿ, ಅಂಕುರಾರ್ಪಣ, ರಕ್ಷೋಘ್ನ ಹೋಮ, ವಾಸ್ತುಹೋಮ ನಡೆಯಿತು. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ:
ರಾತ್ರಿ ಲಹರಿ ಸಂಗೀತ ಕಲಾಕೇಂದ್ರ ಐಐಸಿಟಿ ನೆಲ್ಯಾಡಿ ಇವರಿಂದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಕಲಾರತ್ನ ವಿಶ್ವನಾಥ ಶೆಟ್ಟಿ ಕೆ.ನಿರ್ದೇಶನದ ’ನಗಬೇಕು ಆಗಾಗ ಬದುಕಿನೊಳಗೆ’ಸಂಗೀತ ಹಾಸ್ಯ ಲಹರಿ ನಡೆಯಿತು.
ದೇವಸ್ಥಾನದಲ್ಲಿ ಇಂದು:
ಬ್ರಹ್ಮಕಲಶೋತ್ಸವದ 2ನೇ ದಿನವಾದ ಫೆ.6ರಂದು ಬೆಳಿಗ್ಗೆ 5.30ರಿಂದ ವೈದಿಕ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10ರಿಂದ ಭಜನೆ ನಡೆಯಲಿದೆ. 11ರಿಂದ ಸ್ಥಳೀಯ ಶಿಶುಮಂದಿರದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ಗೋಳಿತ್ತೊಟ್ಟು ಪೂಜಾ ಕಲಾ ತಂಡದವರಿಂದ ನೃತ್ಯ ವೈಭವ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಸೂರ್ಯನಾರಾಯಣ ಕಶೆಕೋಡಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ 9ರಿಂದ ಯಜ್ಞೇಶ ಆಚಾರ್ಯ ಸುಬ್ರಹ್ಮಣ್ಯ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮ, ಬಳಿಕ ವಿದುಷಿ ರೇಷ್ಮಾ ಅಜಯ್ ಸರಳಾಯ ತಂಡದಿಂದ ನೃತ್ಯಾಂಜಲಿ ನಡೆಯಲಿದೆ.